ಚೆನ್ನೈ, – ತಮಿಳುನಾಡಿನ ವಿರುಧ್‍ನಗರ್ ಮತ್ತು ಥೇಣಿ ಜಿಲ್ಲೆಗಳಲ್ಲಿ ನಡೆದಿರುವ 60 ಕೋಟಿ ರೂ.ಗಳ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ) ಸಾಲ ಹಗರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಬ್ಯಾಂಕಿನಿಂದ ಸಾಲ ಎತ್ತುವಳಿ ಮಾಡಿದ 15 ಮಂದಿ ಕಳೆದ ಆರು ತಿಂಗಳಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದು, ಒಬ್ಬಾತ ನಾಪತ್ತೆಯಾಗಿದ್ದಾನೆ.
ಈ ಎಲ್ಲ ಘಟನೆಗಳಿಂದಾಗಿ ಬಹು ಕೋಟಿ ರೂ.ಗಳ ಸಾಲ ಹಗರಣ ಮತ್ತಷ್ಟು ಜಟಿಲವಾಗಿದೆ. ಸಾಲ ಪಡೆದವರು ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರೂ ಈ ಬಗ್ಗೆ ಅಧಿಕೃತ ತನಿಖೆ ನಡೆದಿಲ್ಲ. ಅಸಹಜ ಸಾವು ಎಂದಷ್ಟೇ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೃತಪಟ್ಟವರೆಲ್ಲರೂ ದಕ್ಷಿಣ ತಮಿಳುನಾಡಿನ ವಿರುಧ್‍ನಗರ ಮತ್ತು ಸುತ್ತಮತ್ತಲಿನ ಗ್ರಾಮದವರು. ಇವೆರಲ್ಲರೂ ಸಾಲ ಪಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಲ ವಂಚನೆ ಹಗರಣದ ಆರೋಪಿಗಳಲ್ಲಿ ಒಬ್ಬನಾದ ವ್ಯಕ್ತಿಗೆ ಸೇರಿದ ಗಿರಣಿಗಳಲ್ಲಿ ನಿಗೂಢವಾಗಿ ಸಾವಿಗೀಡಾದವರು ಮತ್ತು ನಾಪತ್ತೆಯಾದವರು ಕಾರ್ಯನಿರ್ವಹಿಸುತ್ತಿದ್ದರು.
169 ರೈತರಿಗೆ ಸುಮಾರು 40 ಲಕ್ಷ ರೂ.ಗಳ ಬೆಳೆ ಸಾಲ ನೀಡಿರುವ ಎಸ್‍ಬಿಐನಲ್ಲಿ ಗಿರಣಿ ಕಾರ್ಮಿಕರ ಹೆಸರಿನಲ್ಲಿ ಸಾಲ ಎತ್ತುವಳಿ ಮಾಡಲಾಗಿದೆ.
ಗಿರಣಿ ಕಾರ್ಮಿಕರಿಗೆ ಸರ್ಕಾರದಿಂದ ಪಿಂಚಿಣಿ ಕೊಡಿಸುವ ಸೋಗಿನಿಲ್ಲಿ ಅವರ ಸಹಿ ಮತ್ತು ಇತರ ದಾಖಲೆಗಳನ್ನು ಪಡೆದು ತಾತ್ಕಾಲಿಕ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಸಾಲ ಪಡೆದು ಅವರ ಅಕೌಂಟ್‍ಗಳಿಂದ ಹಣವನ್ನು ಲಪಟಾಯಿಸಲಾಗಿದೆ. ಈ ಸಂಬಂಧ ಒ.ಎಂ.ಎಸ್. ವೇಲು ಮುರುಗನ್ ಹಾಗೂ ಆತನ ಸಂಬಂಧ ಶೇನ್‍ಬಾಗ್ ಎಂಬುವರನ್ನು ಬಂಧಿಸಲಾಗಿದೆ. ಆರು ತಿಂಗಳಿನಿಂದ ಈ ವಂಚನೆ ಪ್ರಕರಣ ಹೊಸ ಸ್ವರೂಪಗಳನ್ನು ಪಡೆಯುತ್ತಿದ್ದು, ಪೊಲೀಸರಿಗೆ ತಲೆನೋವಾಗಿದೆ.