ಮುಂಬಯಿ : ಡಾಲರ್ ಎದುರು ರೂಪಾಯಿ ಸ್ವಲ್ಪ ಮಟ್ಟಿಗೆ ಚೇತರಿಕೆಗೊಂಡಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಮತ್ತು ಏಶ್ಯನ್ ಶೇರು ಪೇಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದ್ದು, ಇದನ್ನುಅನುಸರಿಸಿದ ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ಪುನರಾಗಮನವನ್ನು ದಾಖಲಿಸಿತು.
ನಿರಂತರ ದಿನಗಳ ಸೋಲಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 878.32 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಈಗ ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗೆ 9 ಪೈಸೆಯಷ್ಟು ಚೇತರಿಸಿಕೊಂಡು 71.66 ರೂ. ಮಟ್ಟಕ್ಕೇರುವ ಮೂಲಕ ಶೇರು ಮಾರುಕಟ್ಟೆಯಲ್ಲಿ ಸಮಾಧಾನ ವ್ಯಕ್ತಪಡಿಸಿದೆ.
ಇಂದು ಬೆಳಗ್ಗೆ ಸೆನ್ಸೆಕ್ಸ್ 122.76 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 38,141.07 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 27.80 ಅಂಕಗಳ ಮುನ್ನಡೆಯೊಂದಿಗೆ 11,504.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ವಿಪ್ರೋ, ಎಚ್ ಯು ಎಲ್, ಟಾಟಾ ಮೋಟರ್, ಸನ್ ಫಾರ್ಮಾ, ಕೋಟಕ್ ಬ್ಯಾಂಕ್, ಎಸ್ ಬ್ಯಾಂಕ್, ಏಶ್ಯನ್ ಪೇಂಟ್, ಟಾಟಾ ಸ್ಟೀಲ್, ಎಸ್ಬಿಐ,ಆರ್ಐಎಲ್ ಶೇರುಗಳು ಶೇ.1.46ರ ಏರಿಕೆಯನ್ನು ದಾಖಲಿಸಿದೆ ಎಂದು ವರದಿಯಾಗಿದೆ.