ಕುಮಟಾ : ಹಾಲಕ್ಕಿ ಯೂತ್ ಕ್ಲಬ್ ವತಿಯಿಂದ ನಾಡೋಜ ಪದ್ಮಶ್ರೀ ದಿವಂಗತ ಸುಕ್ರಿ ಬೊಮ್ಮ ಗೌಡರವರ ಸ್ಮರಣಾರ್ಥ ಎಸ್.ಎಸ್.ಎಲ್.ಸಿ, ಪಿ.ಯು.ಸಿ ನಂತರ ಮುಂದೇನು ?” ಮತ್ತು “ವ್ಯಸನ ಮುಕ್ತ ಸಮಾಜದ ಅಗತ್ಯತೆ” ಕಾರ್ಯಕ್ರಮ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ಪದವಿಪೂರ್ವ ಕಾಲೇಜ ಹೊನ್ನಾವರದ ಪ್ರಾಂಶುಪಾಲ ರವಿ ಕೃಷ್ಣ ಗೌಡ ಅವರು ಮಾತನಾಡಿ, ಸುಕ್ರಜ್ಜಿಯ ಆಶಯಗಳಾದ ಶಿಕ್ಷಣ ಮತ್ತು ವ್ಯಸನ ಮುಕ್ತ ಸಮಾಜ ಇಂದಿನ ತುರ್ತು, ಉನ್ನತ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅಗತ್ಯವಿದೆ. ಹಾಲಕ್ಕಿ ಯೂತ್ ಕ್ಲಬ್ ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಿನೇಶ ನಾಯ್ಕ ಮಾತನಾಡಿ ಉತ್ತಮ ಆರೋಗ್ಯ ಮತ್ತು ಗುಣಾತ್ಮಕ ಶಿಕ್ಷಣ ಪಡೆಯುವ ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಂಡು ಉದ್ಯೋಗ ಗಿಟ್ಟಿಸಿಕೊಳ್ಳುವ ದಿಶೆಯಲ್ಲಿ ವ್ಯಕ್ತಿತ್ವ ವಿಕಸನದ ಪ್ರಾಮುಖ್ಯತೆಯನ್ನು ಹಲವಾರು ಉದಾಹರಣೆಗಳ ಮೂಲಕ ವಿವರಿಸಿದರು.
ಕುಮಟಾ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ರಾಧಾಕೃಷ್ಣ ನಾಯ್ಕ ಮಾತನಾಡಿ, ಎನಾದರೂ ಆಗು ಮೊದಲ ಮಾನವನಾಗು ಎನ್ನುವ ಕುವೆಂಪುರವರ ವಿಚಾರಧಾರೆಯನ್ನು ನೆನೆಯುತ್ತ ವಿದ್ಯಾರ್ಥಿಗಳು ಮೊದಲು ಉತ್ತಮ ಮಾನವ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು ಜೊತೆಗೆ ಯುವ ಪೀಳಿಗೆಯನ್ನು ಕಾಡುತ್ತಿರುವ ವ್ಯಸನಗಳ ಬಗ್ಗೆ ಎಚ್ಚರ ವಹಿಸಬೇಕು ಮತ್ತು ಯುವ ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಪ್ರತಿ ಹಳ್ಳಿ ಮಟ್ಟದಲ್ಲಿ ನಡೆಯಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಭಟ್ಕಳದ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಾಥ್ ಪೈ ರವರು ಎಸ್.ಎಸ್ ಎಲ್.ಸಿ ಮತ್ತು ಪಿ.ಯು.ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಸುಮಾರು 80ಕ್ಕು ಅಧಿಕ ಕೋರ್ಸ ಗಳ ಬಗ್ಗೆ ಮಾಹಿತಿ ನೀಡಿದರು. ಹಲವು ಜಾಗತಿಕ ಮಟ್ಟದ ಕೌಶಲ್ಯಗಳ ಬಗ್ಗೆ ಸಮಗ್ರ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಾಲಕ್ಕಿ ಯೂತ್ ಕ್ಲಬ್ ಅಧ್ಯಕ್ಷ ವಿನಾಯಕ ಟಿ ಗೌಡ ಮಾತನಾಡಿ ಸಮಾಜದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುವ ಜೊತೆಗೆ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ನಂತರ ವೃತ್ತಿಯಾದಾರಿತ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಇಂತಹ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಆಯೋಜಿಸಲಿರುವ ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಭಂದಿಸಿದ ಸಮುದಾಯ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೆ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.
ನೂರಾರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು. ಯೂತ್ ಕ್ಲಬ್ ವತಿಯಿಂದ ಶಿಬಿರಾರ್ಥಿಗಳಿಗೆ ಪುಸ್ತಕ, ಪೆನ್ನು, ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸೂಕ್ತವಾದ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಕೋರ್ಸ್ ಕೈಪಿಡಿ , ಊಟ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.