ಕುಮಟಾ : ಸಿಇಟಿ ಪರೀಕ್ಷೆಯಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ಕಿವಿಯೋಲೆ ಕೈಬಳೆಗಳನ್ನು ಕಳಚಿಸಿದ್ದು, ಜೊತೆಗೆ ತೀರ್ಥಳ್ಳಿ ಸಾಗರ ಶಿವಮೊಗ್ಗ ಹಾಗೂ ಬೀದರ್ ನಲ್ಲಿ ಜನಿವಾರವನ್ನು ಕಳಚಿ ಪರೀಕ್ಷೆಗೆ ಬರಬೇಕೆಂದು ಆಜ್ಞೆ ಮಾಡಲಾಗಿರುವ ಬಗ್ಗೆ ಮತ್ತು ಪರೀಕ್ಷೆಗೆ ಬಂದ ಬಾಲಕನ ಜನಿವಾರ ಕತ್ತರಿಸಿದ ವಿಷಯವನ್ನು ವಿರೋಧಿಸಿ ಸಮಸ್ತ ಹಿಂದುಗಳೂ ಸೇರಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ತಾಲೂಕಿನ ಮೂರೂರು ರಸ್ತೆಯಲ್ಲಿ ಇರುವ ಆಡಳಿತ ಸೌಧದ ಎದುರು ಏ.22 ರ ಸಂಜೆ ೪ ಗಂಟೆಯಿಂದ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಹೋರಾಟಗಾರ ಅಧ್ಯಕ್ಷ ಎಂ.ಜಿ ಭಟ್ಟ ತಿಳಿಸಿದ್ದಾರೆ. ಸೋಮವಾರ ಈ ಕುರಿತ ಸಿದ್ಧತಾ ಸಭೆಯ ನಂತರ ಅವರು ಮಾಹಿತಿ ನೀಡಿದರು.

ಜನಿವಾರ ಕಳಚುವಂತೆ ತಾಕೀತು ಮಾಡುವುದು ಹಾಗೂ ಜನಿವಾರ ಕತ್ತರಿಸುವುದು ನಮ್ಮ ಹಿಂದೂ ಸಮಾಜಕ್ಕೆ ಮಾಡಿದಂತಹ ಅಪಮಾನವಾಗಿದೆ. ಇದು ನಮ್ಮ ಹಿಂದೂ ಸಮಾಜದ ಅಸ್ಮಿತೆಯ ಪ್ರಶ್ನೆ. ಈಗಲೂ ಹಿಂದೂ ಧರ್ಮದ ಪರವಾಗಿ ಯಾರು ಪ್ರತಿಭಟಿಸದೆ ಇದ್ದಲ್ಲಿ ನಮ್ಮ ದೌರ್ಬಲ್ಯ ತನದ ಲಕ್ಷಣವಾಗಹುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಗಳು ಇಂತಹ ವಿಚಾರ ಅಷ್ಟೇ ಅಲ್ಲ, ಧರ್ಮ ರಕ್ಷಣೆಯಲ್ಲೂ ಸದಾ ಹೋರಾಟಕ್ಕೆ ಸಿದ್ದ ಎಂಬುದನ್ನು ತೋರಿಸಬೇಕಾಗಿದೆ. ಅದಕ್ಕಾಗಿಯೇ ಸಮಸ್ತ ಹಿಂದೂ ಬಾಂಧವರು ಹಿಂದೂ ಧರ್ಮಕ್ಕೆ ಆಗುತ್ತಿರುವ ಅಪಮಾನದ ವಿರುದ್ದ ಹೊರಾಟಕ್ಕೆ ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಉದಯ ಹರಿಕಂತ್ರ, ಬಿ.ಡಿ ಪಟಗಾರ, ಜಿ.ಆರ್. ಉಗ್ರು, ಮಂಜುನಾಥ ಭಟ್ಟ ಸುವರ್ಣಗದ್ದೆ, ಅರುಣ ಹೆಗಡೆ, ಲೋಕೇಶ ಶಾನಭಾಗ, ಮಂಜುನಾಥ ಭಟ್ಟ, ಗಿರೀಶ ಹೆಗಡೆ ಹಾಗೂ ಇತರರು ಇದ್ದರು.