ಕುಮಟಾ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾದಲ್ಲಿ ಅಪರೂಪದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು. ೧೯೯೨-೯೩ ನೇ ಸಾಲಿನ ಅಂದಿನ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪ್ರಶಿಕ್ಷಣಾರ್ಥಿಗಳಾಗಿ ತರಬೇತಿ ಪಡೆದ ೬೦ ಪ್ರಶಿಕ್ಷಣಾರ್ಥಿಗಳಲ್ಲಿ ಪ್ರಸ್ತುತ ೫೮ ಪ್ರಶಿಕ್ಷಣಾರ್ಥಿಗಳು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಎಲ್ಲಾ ಪ್ರಶಿಕ್ಷಣಾರ್ಥಿಗಳು ಹಮ್ಮಿಕೊಂಡ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಸಮಾರಂಭ ಯಶಸ್ವಿಯಾಗಿ ಸಂಪನ್ನಗೊಂಡಿತು.
೧೯೯೨-೯೩ ನೇ ಸಾಲಿನಲ್ಲಿ ಅಂದು ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿರುವ ಎಮ್.ವಿ.ನಾಯಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅವರು ೯೨ರ ಇಳಿ ವಯಸ್ಸಿನಲ್ಲಿಯೂ ತಮ್ಮ ಪ್ರೀತಿಯ ಶಿಷ್ಯ ವರ್ಗದವರ ಕರೆಗೆ ಓಗೊಟ್ಟು ಕಾರ್ಯಕ್ರಮಕ್ಕೆ ಆಗಮಿಸಿ ಸ್ಫೂರ್ತಿ ತುಂಬಿದ್ದಲ್ಲದೆ, ಕರ‍್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ನಿಮ್ಮಿಂದ ಕಲಿತ ಪ್ರತಿ ವಿದ್ಯಾರ್ಥಿಯೂ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಲಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಪನಿರ್ದೇಶಕರು ಅಭಿವೃದ್ಧಿ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ ಕುಮಟಾದ ಪ್ರಾಚಾರ್ಯ ಶಿವರಾಮು ಎಮ್.ಆರ್ ೩೨ ವರ್ಷಗಳ ನಂತರ ಎಲ್ಲರೂ ಸೇರಿ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮ ಗುರುಗಳ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದೆ, ಮುಂದೆ ಗುರಿ ಇದ್ದು ಹಿಂದೆ ಗುರು ಇದ್ದರೆ ಎಂತಹ ಸಾಧನೆಯನ್ನಾದರೂ ಸಾಧಿಸಲು ಸಾಧ್ಯ ಎಂದು ನುಡಿದರು.
ಇದೇ ಸಂದರ್ಭದಲ್ಲಿ ತಮ್ಮ ಬದುಕಿಗೆ ಬೆಳಕು ನೀಡಿದ ಎಲ್ಲ ಗುರು ವೃಂದದವರನ್ನು ಸನ್ಮಾನಿಸಿ ಅವರಿಂದ ಆಶೀರ್ವಾದವನ್ನು ಅಂದಿನ ಪ್ರಶಿಕ್ಷಣಾರ್ಥಿಗಳು ಪಡೆದರು. ದೂರದ ಬಾಗಲಕೋಟೆಯಿಂದ ಆಗಮಿಸಿದ ಎ.ಆಯ್.ಖಾಜಿ, ವಿ.ಬಿ.ಮುನ್ನೂರು ಜಿ.ಎಚ್.ನಾಯ್ಕ, ವಿ.ಎಚ್.ನಾಯ್ಕ ಅರುಣ ಹೆಗಡೆ, ಪ್ರಮೋದ್ ನಾಯಕ, ಆಯ್.ಎಸ್.ನಾಯ್ಕ, ನಯನಾ ನಾಯ್ಕ, ಲತಾ ಹೆಬ್ಬಾರ ಹಾಗೂ ಅಂದು ಕರಣಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಎನ್ ವೆರ್ಣೇಕರ ಎಸ್.ಟಿ. ಮಡಿವಾಳ ಎಲ್ಲರಿಗೂ ಗುರು ಗೌರವಾರ್ಪಣೆ ಸಲ್ಲಿಸಿದರು.
ಭಾಗೀರತಿ ಹೆಗಡೆ, ಚಂದ್ರಕಲಾ ದೇಶಭಂಡಾರಿ ಪ್ರೇಮಾ ರಾಯ್ಕರ ಕಾರ್ಯಕ್ರಮವನ್ನು ನಿರ್ವಹಿಸಿದರು. ಜೆ.ಎನ್.ಬಳಗು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸರಸ್ವತಿ ಮತ್ತು ವಿದ್ಯಾ ಹೆಗಡೆ ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿಗಳ ಪರವಾಗಿ ದತ್ತಾತ್ರೇಯ ಭಟ್ಟ ಮತ್ತು ಸೌಭದ್ರಾ ಭಟ್ಟ ಅನಿಸಿಕೆಗಳನ್ನು ಹಂಚಿಕೊಂಡರು. ಜಗನ್ನಾಥ ಸಾಗರರವರು ಎಲ್ಲರನ್ನು ವಂದಿಸಿದರು.