ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ಉದ್ಯಮಿಯೊಬ್ಬರು ಮೃತಪಟ್ಟಿದ್ದಾರೆ.
ಪತ್ನಿ ಹಾಗೂ ಮಗನ ಕಣ್ಣೆದುರೇ ಉದ್ಯಮಿ ಮಂಜುನಾಥ ಅವರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ತನ್ನ ಗಂಡನನ್ನು ಕಳೆದುಕೊಂಡ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯ ಪತ್ನಿ ಪಲ್ಲವಿ, ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.
ಮೂರರಿಂದ ನಾಲ್ಕು ಜನ ಭಯೋತ್ಪಾದಕರು ನಮ್ಮ ಮೇಲೆ ದಾಳಿ ಮಾಡಿದರು. ಆಗ ನಾನು, ನನ್ನ ಪತಿಯನ್ನ ಕೊಂದಿದ್ದೀರಿ, ನನ್ನನ್ನೂ ಕೊಂದುಬಿಡಿ ಎಂದು ಹೇಳಿದೆ. ಆಗ ಅವರಲ್ಲಿದ್ದ ಒಬ್ಬ ʻನಾನು ನಿನ್ನನ್ನ ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನು ಹೇಳುʼ ಎಂದು ಹೇಳಿದ ಎಂಬುದಾಗಿ ಹೇಳಿದ್ದಾರೆ.

ಏ.19ರಂದು ಪ್ರವಾಸಕ್ಕೆ ಹೋಗಿದ್ದೆವು. ನಮ್ಮ ಕಣ್ಣೆದುರಿಗೇ ಪತಿಯ ತಲೆಗೆ ಗುಂಡಿಟ್ಟು ಕೊಂದರು. ನೀವು ಹಿಂದುಗಳಾ ಎಂದು ಕೇಳಿ ಗಂಡಸರನ್ನು ಕೊಂದಿದ್ದಾರೆ ಎಂದು ತಿಳಿಸಿದರು.
ನನ್ನ ಮಗ ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಹೀಗಾಗಿ ಏನಾದರೂ ತಿಂಡಿ ಖರೀದಿಸಲು ನಮ್ಮ ಮನೆಯವರು ಅಲ್ಲಿದ್ದ ಅಂಗಡಿಯಲ್ಲಿ ವಿಚಾರಿಸಲು ಹೋದರು. ನನ್ನ ಮಗನ ಕರೆಯಲು ನಾನು ಹೋದೆ. ಗುಂಡಿನ ಸದ್ದು ಕೇಳಿತು. ನಾವೆಲ್ಲಾ ಸೇನೆಯವರು ಇರಬೇಕು ಅಂದುಕೊಂಡೆವು. ಆದರೆ ನಾನು ತಿರುಗಿ ನೋಡುವರಷ್ಟರಲ್ಲಿ ಬೇರೆಯವರೆಲ್ಲಾ ಓಡುತ್ತಿದ್ದರು. ಅಷ್ಟರಲ್ಲಿ ನಮ್ಮ ಮನೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರು ತಲೆಗೆ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ.