ಕುಮಟಾ : ಕಾಶ್ಮೀರದ ಬೈಸರಾನ್ ಕಣಿವೆಯಲ್ಲಿ ಪಾಕ್ ಪ್ರಚೋದಿತ ದುಷ್ಕರ್ಮಿಗಳು ಅಮಾಯಕ ಪ್ರವಾಸಿಗರ ನರಮೇಧ ನಡೆಸಿರುವುದನ್ನು ಶ್ರೀ ರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲ ಖಂಡಿಸಿದೆ. ಈ ಸಂಬಂಧ ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಈ ನರಮೇಧದ ಹಿಂದಿರುವ ಶಕ್ತಿಗಳನ್ನು ಕೇಂದ್ರ ಸರಕಾರ ನಿರ್ಮೂಲನ ಮಾಡಲಿ ಎಂದು ಮಹಾಮಂಡಲ ಹಾರೈಸುತ್ತದೆ.
ಬೈಸರಾನ್ ಕಣಿವೆಯಲ್ಲಿ ನಡೆದ ಹತ್ಯೆಗಳಲ್ಲಿ ಹಿಂದೂಗಳನ್ನೇ ಗುರಿ ಮಾಡಲಾಗಿದೆ. ಹೆಸರು, ಗುರುತು ಕೇಳಿ ಹಿಂದೂಗಳನ್ನು ಕೊಂದಿರುವುದನ್ನು ಗಮನಿಸಿದರೆ ಈ ಭಯೋತ್ಪಾದಕರು ಹಿಂದೂ ಜನಾಂಗದ ಮೇಲೆ ನಿಷ್ಕಾರಣ ಸಮರ ಸಾರಿದಂತೆ ಕಾಣುತ್ತಿದೆ. ಆದ್ದರಿಂದ ದುಷ್ಕರ್ಮಿಗಳ ದುಷ್ಕೃತ್ಯ ನಿಗ್ರಹ ಅತ್ಯಂತ ಅಗತ್ಯವಾಗಿದೆ ಎಂದು ಮಹಾಮಂಡಲ ಅಭಿಪ್ರಾಯಪಟ್ಟಿದೆ.

ಕೇಂದ್ರ ಸರಕಾರ ಉಗ್ರರ ದಮನಕ್ಕೆ ಈಗಾಗಲೇ ಮುಂದಾಗಿದ್ದು ಸರಕಾರದ ಜೊತೆ ಹವ್ಯಕ ಸಮುದಾಯದ ಸರ್ವರೂ ಇದ್ದಾರೆ ಮತ್ತು ಸಮಸ್ತ ಭಾರತೀಯರೂ ಜೊತೆಗಿದ್ದಾರೆ ಎಂದು ಹವ್ಯಕ ಮಹಾಮಂಡಲ ಹೇಳಬಯಸುತ್ತದೆ.
ದೇಶವೇ ಮೊದಲು, ದೇಶವೇ ಪರಮ, ದೇಶವೇ ಮುಖ್ಯ. ದೇಶ ರಕ್ಷಣೆಗಾಗಿ ಮಿಡಿಯಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂಬ ಗುರುವಾಣಿಯಂತೆ ನಮ್ಮ ಸಮುದಾಯ ಸದಾ ಭಾರತೀಯರ ರಕ್ಷಕರ ಜೊತೆ ಕೈಜೋಡಿಸುತ್ತದೆ ಎಂದು ಅವರು ಹವ್ಯಕ ಮಹಾಮಂಡಲದ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.