ಕುಮಟಾ: ಪತಂಜಲಿ ಯೋಗ ಸಮಿತಿ ವತಿಯಿಂದ ಕುಮಟಾ ಪಟ್ಟಣದ ಕೊಂಕಣ ಎಜ್ಯುಕೇಶನ್ ಸಂಸ್ಥೆಯ ಪ್ರೌಢ ಶಾಲಾ ಆವರಣದಲ್ಲಿ ಮೇ ೪ ರಿಂದ ೨೯ರ ವರೆಗೆ ಯೋಗ ಶಿಕ್ಷಕರ ತರಬೇತಿ ಶಿಬಿರ ನಡೆಯಲಿದೆ ಎಂದು ಪತಂಜಲಿ ಯೋಗ ಸಮಿತಿ ತಾಲೂಕಾ ಪ್ರಭಾರಿ ದಿನೇಶ ಶೇಟ್ ತಿಳಿಸಿದರು.
ಪಟ್ಟಣದ ಬಸ್ ಡಿಪೋ ಎದುರಿನ ಪತಂಜಲಿ ಯೋಗ ತರಭೇತಿ ಕೇಂದ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಪ್ರಭಾರಿ ಅಂತರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಯೋಗ ಶಿಕ್ಷಕರ ತರಬೇತಿ ಶಿಬಿರ ನಡೆಯಲಿದೆ. ಕಳೆದ ೨೦೧೪ರಲ್ಲಿ ಈ ತರಬೇತಿ ಶಿಬಿರ ನಡೆದಿತ್ತು. ಈಗ ೧೧ ವಷಗಳ ಬಳಿಕ ಮತ್ತೊಮ್ಮೆ ಈ ಶಿಬಿರ ಸಂಘಟಿಸಲಾಗಿದೆ. ಪ್ರತಿ ಮನೆಯಲ್ಲೂ ಓರ್ವ ಯೋಗ ಶಿಕ್ಷಕನಿರಬೇಕೆಂಬ ಧ್ಯೇಯದೊಂದಿಗೆ ಈ ಶಿಬಿರ ಸಂಘಟಿಸಲಾಗಿದೆ. ಹಾಗಾಗಿ ಯೋಗ ಶಿಕ್ಷಕರು ಹೆಚ್ಚಿನ ತರಬೇತಿದಾರರನ್ನು ಕಳುಹಿಸಿ ಕೊಡುವ ವ್ಯವಸ್ಥೆ ಮಾಡಬೇಕು ಮತ್ತು ಶಿಬಿರದ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.

ಜಿಲ್ಲಾ ಕಿಸಾನ್ ಪ್ರಭಾರಿ ನಾಗೇಂದ್ರ ಭಟ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಯೋಗಕ್ಕೆ ಹೆಚ್ಚಿನ ಬೇಡಿಕೆ ಇದೆ. ಭಾರತ ಸರ್ಕಾರ ಎಲ್ಲ ಇಲಾಖೆಗಳಲ್ಲಿ ಯೋಗವನ್ನು ಕಡ್ಡಾಯ ಮಾಡಿದೆ. ಆದರೆ ಯೋಗ ಶಿಕ್ಷಕರ ಕೊರತೆ ಇದೆ. ಇದನ್ನು ನೀಗಿಸುವ ಭಾಗವಾಗಿಯೇ ಈ ತರಭೇತಿ ಶಿಬಿರವನ್ನು ಆಯೋಜನೆ ಮಾಡಿದ್ದೇವೆ. ೨೫ ದಿನಗಳು ನಡೆಯುವ ಈ ಶಿಬಿರದಲ್ಲಿ ಬೆಳಗ್ಗೆ ೫.೩೦ ಗಂಟೆಯಿಂದ ೭ ಗಂಟೆಗೆ ನಡೆಯಲಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪತಂಜಲಿ ಯೋಗ ಸಮಿತಿಯ ಪ್ರಮುಖ ಯೋಗೀಶ ಉಪಾಧ್ಯಾ, ಶಿವಾನಂದ ಶೇಟ್, ಸದಾನಂದ ನಾಯ್ಕ, ಅಶೋಕ ಆಚಾರಿ, ಸರೋಜ ನಾಯ್ಕ ಇತರರಿದ್ದರು.