ಕುಮಟಾ : ಶಿಕ್ಷಣ ಎನ್ನುವುದು ಸುಲಭವಲ್ಲ. ಆದರೆ ಅದು ಇಂದಿನ ಅವಶ್ಯಕತೆ. ನಾವು ಅದನ್ನು ಕಾಪಾಡಿಕೊಂಡು ಹೋಗುವ ಕೆಲಸವನ್ನು ಮಾಡಬೇಕು. ಸರ್ಕಾರದ ಜೊತೆಗೆ ಸಾರ್ವಜನಿಕರು ಕೈಜೋಡಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಹಕಾರಿ ಆಗಬೇಕು. ಕಾಗಾಲ ಗ್ರಾಮದ ಇಂತಹ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಎಲ್ಲರ ಪ್ರಯತ್ನ ನಿಜವಾಗಿ ಶ್ಲಾಘನೀಯ ಎಂದು ಪ್ರಾಥಮಿಕ ಹಾಗೂ ಪದವಿ ಪೂರ್ವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲ್ಲೂಕಿನ ಕಾಗಾಲದ 150 ವರ್ಷಗಳ ಹಿಂದಿನ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.

46,000 ಶಾಲೆಗಳು ರಾಜ್ಯದಲ್ಲಿದ್ದು ಅತಿ ಹೆಚ್ಚು ಸರ್ಕಾರಿ ನೌಕರರು ನಮ್ಮ ಇಲಾಖೆಯಲ್ಲಿ ಇದ್ದಾರೆ ಎಂಬುದನ್ನು ಹೆಮ್ಮೆಯಿಂದ ನಾನು ಹೇಳಿಕೊಳ್ಳಬಲ್ಲೆ. ಒಂದು ಕೋಟಿ ಎಂಟು ಲಕ್ಷ ಮಕ್ಕಳ ಸೇವೆಯನ್ನು ಮಾಡುವ ಭಾಗ್ಯವನ್ನು ನನಗೆ ಸರಕಾರ ಕರುಣಿಸಿದೆ. ಶಿಕ್ಷಣ ಇಲಾಖೆಯಲ್ಲಿ ಶೇ 38 ರಷ್ಟು ಸರ್ಕಾರಿ ನೌಕರರು ಇದ್ದಾರೆ. 1.08 ಕೋಟಿ ವಿದ್ಯಾರ್ಥಿಗಳಿದ್ದಾರೆ. ಹೀಗಿರುವಾಗ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಒದಗಿಸುವ ಸೌಲಭ್ಯಗಳಲ್ಲಿ ಕೊರತೆ ಸಾಮಾನ್ಯ. ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ವಿದ್ಯಾರ್ಥಿಗಳು ಶಾಲೆಗೆ ಬರಲು ಪ್ರೋತ್ಸಾಹಿಸಿ ನೀಡುತ್ತಿದ್ದ ₹1 ಯೋಜನೆ ಶಿಕ್ಷಣದಲ್ಲಿ ಕ್ರಾಂತಿ ಮಾಡಿತ್ತು. ಇಲಾಖೆಯಲ್ಲಿ ಸುಧಾರಣೆ ತರಲು ಆ ಯೋಜನೆ ಪ್ರೇರಣೆಯಾಗಿದೆ’ ಎಂದರು.
ಧರ್ಮ, ಜಾತಿಗಳಿಗೆ ಗಡಿ ಅವರಿಸಿಕೊಂಡಿರುವ ಇಂದಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಗೆ ಅಂಥ ನಿರ್ಬಂಧ ಇಲ್ಲದಂತೆ ಕ್ರಮ ಕೈಕೊಳ್ಳಲಾಗುವುದು. ಶಿಕ್ಷಕರ ಕೊರತೆ ಇಂದಿಗೂ ಇದೆ ನಾವು ಬಂದ ಮೇಲೆ 13 ಸಾವಿರ ಶಿಕ್ಷಕರ ನೇಮಕ ಮಾಡಿಕೊಂಡಿದ್ದೇವೆ. ಅನುದಾನಿತ ಶಾಲೆಗೆ ಅಗತ್ಯವಾದ ಸೌಲಭ್ಯವನ್ನು ಸಹ ನಾವು ನೀಡಿದ್ದೇವೆ. ಶಿಕ್ಷಣ ಜೀವನದ ಭಾಗವಾಗಿದ್ದು ಉತ್ತಮ ಶಿಕ್ಷಣ ನೀಡುವುದೇ ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
‘ನ್ಯಾಯಮೂರ್ತಿ ನಾಗಮೋಹದಾಸ ವರದಿ ಆಧರಿಸಿ ಒಂದು ವರ್ಷದಲ್ಲಿ 32 ಸಾವಿರ ಶಿಕ್ಷಕರ ನೇಮಕಾತಿ ಆಗಲಿದೆ. ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡಗಳನ್ನು ಹಂತ ಹಂತವಾಗಿ ಹೊಸ ಕಟ್ಟಡವಾಗಿ ಮಾರ್ಪಾಡಿಸುವ ಕಾರ್ಯ ನಡೆಯಲಿದೆ’ ಎಂದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ, 150 ವರ್ಷಗಳ ಹಿಂದೆ ಈ ಶಾಲೆಯಲ್ಲಿ ಶಿಕ್ಷಣ ಆರಂಭಿಸಿದ್ದರಿಂದ ಸ್ವಾತಂತ್ರ್ಯ ಹೋರಾಟಕ್ಕೂ ಅದು ಪ್ರೇರಣೆ ನೀಡಿರಬಹುದು ಎಂದರು. ಶಿಕ್ಷಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಇಂತಹ ಶಾಲೆಗಳ ಅಭಿವೃದ್ಧಿಗೆ ಊರಿನ ಗ್ರಾಮಸ್ಥರು ಒಂದಾಗಿ ದುಡಿಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜ್ಯದ ಯಾವ ಶಾಲೆಗೆ ಯಾವ ಸೌಕರ್ಯ ಬೇಕು ಎನ್ನುವುದನ್ನು ಗುರುತಿಸಿ ವ್ಯವಸ್ಥೆ ಮಾಡಿಕೊಟ್ಟವರು ಶಿಕ್ಷಣ ಸಚಿವ ಮಧು ಬಂಗಾರಪ್ಪ. ಮಧು ಬಂಗಾರಪ್ಪ ಯಾವಾಗಲೂ ಯಾರ ಮೇಲೂ ಕೋಪ ಮಾಡಿಕೊಂಡಿದ್ದೆ ಇಲ್ಲ. ನಮ್ಮ ಕ್ಷೇತ್ರಕ್ಕೂ ಸಾಕಷ್ಟು ಅನುದಾನವನ್ನು ನೀಡಲಿ. ನಮ್ಮ ಜಿಲ್ಲೆಯಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪನೆಗೆ ಶಿಕ್ಷಣ ಸಚಿವರು ಸರ್ಕಾರಕ್ಕೆ ಶಿಫಾರಸು ಮಾಡಬೇಕು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ನಾಯ್ಕ, ಪ್ರದೀಪ ನಾಯಕ, ಮುಖಂಡರುಗಳಾದ ಸೂರಜ ನಾಯ್ಕ, ಹೊನ್ನಪ್ಪ ನಾಯಕ, ಜಗನ್ನಾಥ ನಾಯ್ಕ, ಭಾಸ್ಕರ ಪಟಗಾರ, ಸತೀಶ ನಾಯ್ಕ, ವಕೀಲೆ ಮಮತಾ ನಾಯ್ಕ, ಇಲಾಖೆಯ ಕಲ್ಪನಾ ನಾಯ್ಕ, ಉದಯ ನಾಯ್ಕ, ನವೀನ ನಾಯ್ಕ, ತಹಶೀಲ್ದಾರ್ ಕೃಷ್ಣ ಕಾಮಕರ್, ಬಿಇಒ ಆರ್.ಎಲ್. ಭಟ್ಟ ಇದ್ದರು. ಮುಖ್ಯ ಶಿಕ್ಷಕಿ ಜಾನ್ಹವಿ ಹೆಗಡೆ ಸ್ವಾಗತಿಸಿದರು. ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.