ಕುಮಟಾ : 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದ ಕುಮಟಾದ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಮರು ಮೌಲ್ಯಮಾಪನದಲ್ಲಿ ಇನ್ನೂ ಒಂದು ಅಂಕವನ್ನು ಪಡೆದುಕೊಳ್ಳುವ ಮೂಲಕ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯದ ಟಾಪರ್ ಗಳ ಪಟ್ಟಿಯಲ್ಲಿ ಸೇರ್ಪಡಗೊಳ್ಳುವ ಮೂಲಕ ಬಹುದೊಡ್ಡ ಸಾಧನೆ ಮಾಡಿದ್ದಾಳೆ.
೬೨೫ಕ್ಕೆ ೬೨೪ ಅಂಕಗಳನ್ನು ಪಡೆದಿದ್ದ ಭೂಮಿಕಾಗೆ ಇಂಗ್ಲೀಷ್ ಭಾಷೆಯಲ್ಲಿ ಒಂದು ಅಂಕ ಕಡಿಮೆಯಾಗಿತ್ತು. ಆದರೆ ನನಗೆ ಪೂರ್ಣ ಅಂಕ ಬರುವ ಎಲ್ಲಾ ಭರವಸೆ ಹೊಂದಿದ್ದ ಭೂಮಿಕಾ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಇದೀಗ ಅದರ ಫಲಿತಾಂಶ ಪ್ರಕಟವಾಗಿದೆ.

ಭೂಮಿಕಾಗೆ ಇಂಗ್ಲಿಷ್ ವಿಷಯದಲ್ಲಿಯೂ ಶೇ.೧೦೦ ರಷ್ಟು ಅಂಕ ಲಭಿಸಿದ್ದು, ಶೇ.೯೯.೮೪ ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಹಾಗು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದ ಆಕೆಯು ಇದೀಗ ೬೨೫ಕ್ಕೆ ೬೨೫ ಅಂಕವನ್ನೂ ಪಡೆದು ಸಾಧನೆ ಮಾಡಿದ್ದಾಳೆ.
ಭೂಮಿಕಾ ಕುಮಟಾದ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್ ಉಪನ್ಯಾಸಕ ನಾಗರಾಜ್ ನಾರಾಯಣ ಹೆಗಡೆ ಮತ್ತು ರೇಣುಕಾ ಹೆಗಡೆ ದಂಪತಿಯ ಪುತ್ರಿಯಾಗಿದ್ದು, ಚಿಕ್ಕಂದಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ಟ, ಮುಖ್ಯಾಧ್ಯಾಪಕ ವಿನಾಯಕ ಶಾನಭಾಗ, ಸಹಶಿಕ್ಷಕರು, ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.