ಕುಮಟಾ : ಸಮಾಜಕ್ಕೆ ತನ್ನಿಂದ ಏನನ್ನಾದರೂ ಕೊಡಬೇಕು ಎನ್ನುವ ತುಡಿತವೇ ಮಂಜುನಾಥ ಭಟ್ಟರವರ ಸಾಧನೆಯ ಮೊದಲ ಮೆಟ್ಟಿಲೆಂದು ನಿವೃತ್ತ ಪ್ರಾಚಾರ್ಯ ಡಾ.ಡಿ.ಡಿ. ಭಟ್ ಹೇಳಿದರು.
ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಆಶ್ರಯದಲ್ಲಿ ನಡೆದ ಉದ್ಯಮಿ ರತ್ನ ಪ್ರಶಸ್ತಿ ಪುರಸ್ಕೃತ ಮಂಜುನಾಥ ಭಟ್ ರವರನ್ನು ಸುವರ್ಣಗದ್ದೆಯ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಮಾತನಾಡಿದರು. ಓರ್ವ ಸಾಧಕನ ಹಿಂದೆ ಕಠಿಣ ಪರಿಶ್ರಮವಿರುತ್ತದೆ. ಶ್ರಮ ಸಂಸ್ಕೃತಿಯ ಜೊತೆಗೆ ಇತರರನ್ನು ಗೌರವಿಸುವ ಉದಾರ ಗುಣ ಸಂಪನ್ನ ಮಂಜುನಾಥ್ ಭಟ್ ರವರಿಗೆ ಈ ಪ್ರಶಸ್ತಿ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರನ್ನು ಅಭಿನಂದಿಸಿ ಮಾತನಾಡಿದರು.

ದೇವಗಿರಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಎಸ್. ಟಿ. ನಾಯ್ಕ ಮಾತನಾಡಿ, ಮಂಜುನಾಥ ಭಟ್ ರವರಿಗೆ ಉದ್ಯಮಿ ರತ್ನ ಪ್ರಶಸ್ತಿ ಬಂದಿರುವುದು ಇಡೀ ನಮ್ಮ ಪಂಚಾಯಿತಿಗೆ ಹೆಮ್ಮೆ ತಂದಿದೆ. ಹೊಳೆಗದ್ದೆ ಹಾಗೂ ಸುತ್ತಮುತ್ತಲಿನ ಹಲವು ಕುಟುಂಬದ ಜನರಿಗೆ ಉದ್ಯೋಗ ಒದಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬರಲಿ ಎಂದರು.
ಪ್ರಶಸ್ತಿ ಪುರಸ್ಕೃತ ಸ್ವರ್ಣ ಲೆಟೆಕ್ಸ್ ಮಾಲೀಕ ಮಂಜುನಾಥ್ ಭಟ್ ಮಾತನಾಡಿ, ಊರಿನವರಿಂದ ಪಡೆದ ಸನ್ಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಪ್ರಶಸ್ತಿಯನ್ನು ನನ್ನ ಕಂಪನಿಯ ಎಲ್ಲಾ ನೌಕರರಿಗೆ ಅರ್ಪಿಸುತ್ತೇನೆ. ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಪರಿಹರಿಸುವ ಎದೆಗಾರಿಕೆಯೊಂದಿಗೆ ಮುನ್ನಡೆದಾಗ ಮಾತ್ರ ನಮ್ಮ ಗುರಿ ಮುಟ್ಟಿ ನಾವು ಬಯಸಿದ್ದನ್ನು ಪಡೆಯಬಹುದು. ಪ್ರೀತಿ ವಿಶ್ವಾಸದಿಂದ ಇಟ್ಟ ಹೆಜ್ಜೆ ಬದುಕಿನ ದಿಕ್ಕನೆ ಬದಲಾಯಿಸಲು ಸಾಧ್ಯ ಎಂದರು.
ನಾಗಮ್ಮ ಪ್ರಕಾಶನ ಸಂಸ್ಥಾಪಕ ಪಿ.ಆರ್. ನಾಯ್ಕ ಮಾತನಾಡಿ, ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿಗೆ ಉದ್ಯಮಿ ರತ್ನ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಉದ್ಯಮಿಯಾದವರು ಇತರರ ಕಷ್ಟಕ್ಕೆ ನೆರವಾದವರಲ್ಲಿ ಸ್ವರ್ಣ ಲೆಟಕ್ಸ್ ಕಂಪನಿ ಇತರರಿಗೆ ಮಾದರಿ ಎಂದರು.
ವೇದಿಕೆಯಲ್ಲಿ ಮಂಜುನಾಥ ಭಟ್ ರವರ ಮಾತೋಶ್ರೀ ಮಾದೇವಿ ಭಟ್ಟ, ಪತ್ನಿ ವಿದ್ಯಾಭಟ್ಟ,ಕುಮಾರ ಗಜಾನನ ಭಟ್ಟ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ ಸದಸ್ಯರಾದ ದೇವೇಂದ್ರ ಶೇರುಗಾರ, ಪಾಂಡು ಪಟಗಾರ, ಉದ್ದಿಮೆದಾರ ಸಚಿನ ನಾಯ್ಕ, ಮಾಜಿ ಗ್ರಾಮ ಪಂಚಾಯತ ಸದಸ್ಯ ಸುರೇಶ್ ಹರಿಕಾಂತ, ಜೆ.ಕೆ. ನಾಯ್ಕ, ಜನಾರ್ಧನ ಹರ್ನಿರು, ಸುಬ್ರಾಯ ಶಾನಭಾಗ, ಮಹೇಶ ನಾಯ್ಕ ಮುಂತಾದವರು ಮಂಜುನಾಥ ಭಟ್ ರವರ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.
ಪ್ರಾರಂಭದಲ್ಲಿ ಯುವಜನ ಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ ಸ್ವಾಗತಿಸಿದರೆ, ಶಿಕ್ಷಕ ಸಂಘದ ಪ್ರತಿನಿಧಿ ಸುರೇಶ ನಾಯ್ಕ ನಿರೂಪಿಸಿ, ವಂದಿಸಿದರು.