ಕುಮಟಾ : ಸ್ವಾತಂತ್ರ್ಯ ಬಂದು 75 ವರ್ಷವಾದರೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಉನ್ನತ ಅಗತ್ಯತೆಗಳಿಗೆ ಬೇರೆ ಜಿಲ್ಲೆಯನ್ನು ಅವಲಂಬಿಸಬೇಕಾದ ದುಸ್ಥಿತಿಯಿಂದ ಉತ್ತರ ಕನ್ನಡ ಜಿಲ್ಲೆಯ ನಾವು ಮತ್ತು ಮುಂದಿನ ಪೀಳಿಗೆಯನ್ನು ಹೊರತರಬೇಕಾದರೆ ಕನಿಷ್ಠ ನೂರು ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತ್ಯಗತ್ಯ. ಈಗಾಗಲೇ ಸಾಕಷ್ಟು ಜನರು ಇದರ ಬಗ್ಗೆ ಹೋರಾಟಗಳನ್ನು ಮಾಡುತ್ತ ಬಂದಿದ್ದು ಆಸ್ಪತ್ರೆ ಕನಸು ಇಂದಿಗೂ ಕನಸಾಗೇ ಉಳಿದಿದೆ. ಇದನ್ನು ಅರಿತ ಡಾ. ಜಿ. ಜಿ ಹೆಗಡೆ ಅವರು ತಮ್ಮ ಜಿ. ಎನ್. ಹೆಗಡೆ ಟ್ರಸ್ಟ್ ಮೂಲಕ ಕಾರ್ಯ ಪ್ರಾರಂಭಿಸಿದ್ದಾರೆ.
ಈಗಾಗಲೇ ಜಿಲ್ಲೆಯ ಜನರನ್ನು ಒಂದೆಡೆ ಸೇರಿಸಿ ಅಭಿಪ್ರಾಯ ಸಂಗ್ರಹ ಮಾಡಿ ಎಲ್ಲರ ಸಹಕಾರ ಸಹಯೋಗ ಕೇಳಿದ್ದಾರೆ. 30 ಎಕರೆ ಜಾಗವನ್ನು ಸರ್ಕಾರ ಮಂಜೂರಿ ಮಾಡಿದ್ದಲ್ಲಿ ನಿಗದಿತ ಸಮಯಕ್ಕೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂಬ ದೃಢ ಸಂಕಲ್ಪವನ್ನು ಮಾಡಿ ಮುನ್ನುಡಿ ಇಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳ ಆದಿಯಾಗಿ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಲವಾರು ಜನರನ್ನು ಈಗಾಗಲೇ ಸಂಪರ್ಕ ಮಾಡಿರುವ ಇವರು ಗುರುವಾರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಂ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರನ್ನು ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗ ದೇವಸ್ಥಾನದಲ್ಲಿ ಶ್ರೀಗಳ ಚಾತುರ್ಮಾಸ ಸಂದರ್ಭದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತಾಗಿ ಮನವಿ ಸಲ್ಲಿಸಿದರಲ್ಲದೆ ಸಮಸ್ಯೆಗಳ ಕುರಿತಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಚಾತುರ್ಮಾಸ ಸಮಿತಿ ಅಧ್ಯಕ್ಷ ಎಚ್ ಆರ್ ನಾಯ್ಕ, ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಹೊನ್ನಾವರ ನಾಮಧಾರಿ ಸಂಘದ ಅಧ್ಯಕ್ಷ ಪಿ ಟಿ ನಾಯ್ಕ ಮತ್ತಿತರರು ಹಾಜರಿದ್ದರು.