ಕಾರವಾರ : ಉತ್ತರ ಕನ್ನಡದಲ್ಲಿ ಕಳೆದ ಎರಡು ದಿನಗಳಿಂದ ಎಡಬಿಡದೆ ಮಳೆ ಸುರೆಯುತ್ತಿದ್ದು, ಮಳೆಯ ಅವಗಡಗಳು ನಡೆಯುತ್ತದೆ. ಮಳೆಯಿಂದಾಗಿ ಭೂಮಿ ಸಡಿಲವಾಗಿದ್ದು, ಮರಗಳು ಧರೆಗೆ ಉರುಳುತ್ತಿದೆ.
ಗರ್ಭಿಣಿಯಾದ ಸೊಸೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಹಿಳೆಯೋರ್ವಳು ಕುಳಿತಿದ್ದ ಕಾರಿನ ಮೇಲೆ, ಬುಡ ಸಮೇತ ಕಿತ್ತು ಬಿದ್ದ ಬೃಹತ್ ಮರವೊಂದರಿಂದಾಗಿ ಮಹಿಳೆ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಕಾರವಾರ ನಗರದ ಪಿಕಳೆ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರವೊಂದರ ಮೇಲೆ ಮರ ಉರುಳಿದೆ. ಇದರಿಂದಾಗಿ ಮಲ್ಲಾಪುರ ಗ್ರಾಮದ ಲಕ್ಷ್ಮೀ ನಾರಾಯಣ ಮಮ್ತೆಕರ (55) ಕೊನೆಯುಸಿರೆಳೆದಿದ್ದಾಳೆ.
ಘಟನೆಯಿಂದಾಗಿ ಲಕ್ಷ್ಮೀ ಮಮ್ತೆಕರ ಕಾರಿನೊಳಗೆ ಸಿಲುಕಿದರು. ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಕಾರವಾರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ, ಮರವನ್ನು ತೆರವುಗೊಳಿಸಿ ಗಾಯಗೊಂಡಿದ್ದ ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಸ್ಪತ್ರೆಗೆ ಸಾಗಿಸುವಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಸಾವನ್ನು ದೃಢಪಡಿಸಿದರು.