ಕುಮಟಾ : ಗುರು ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅದು ಒಂದು ಶಕ್ತಿ. ಗುರುವು ಅಜ್ಞಾನವನ್ನು ಹೋಗಲಾಡಿಸಿ, ಜ್ಞಾನದ ಕಡೆಗೆ ಮಾರ್ಗದರ್ಶನ ನೀಡುವ ಶಕ್ತಿ. ಗುರುತತ್ವವು ವ್ಯಕ್ತಿಯೊಬ್ಬನಿಗೆ ಮಾರ್ಗದರ್ಶನ ನೀಡಿ, ಅವನಲ್ಲಿ ಅಡಗಿರುವ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಗುರು ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಜ್ಞಾನ ಮತ್ತು ಜ್ಞಾನದ ಕಡೆಗೆ ನಮ್ಮನ್ನು ಕರೆದೊಯ್ಯುವ ಶಕ್ತಿ ಎಂದು ನಿವೃತ್ತ ಉಪನ್ಯಾಸಕ ಡಿ.ಎನ್ ಭಟ್ಟ ಅಭಿಪ್ರಾಯಪಟ್ಟರು. ಅವರು ಸಾಧನಾ ಸಂಗೀತ ವಿದ್ಯಾಲಯ ಬಗ್ಗೋಣದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ, ಸಂಗೀತ ಶಿಕ್ಷಕಿ ಲಕ್ಷ್ಮೀ ಹೆಗಡೆ ಹಾಗೂ ಅವರಿಗೆ ಬೆನ್ನೆಲುಬಾಗಿ ನಿಂತ ಬಾಲಚಂದ್ರ ಹೆಗಡೆಯವರನ್ನು ಗೌರವಿಸಿ ಮಾತನಾಡಿದರು.
ಮುಂದೆ ಗುರಿ, ಹಿಂದೆ ಗುರು ಇದ್ದರೆ ಸಾಧನೆ ಖಂಡಿತವಾಗಿಯೂ ಸಾಧ್ಯವಿದೆ. ಗುರುವನ್ನು ನಂಬುವ ಶಿಷ್ಯನಿಗೆ ಎಂದಿಗೂ ಸೋಲಿಲ್ಲ. ಸಂಗೀತ ಕ್ಷೇತ್ರದಲ್ಲಿ ಕಳೆದ ಹದಿನೇಳು ವರ್ಷಗಳಿಂದ ನಿರಂತರ ಸಾಧನೆ ಮಾಡುತ್ತಿರುವ ಲಕ್ಷ್ಮೀ ಹೆಗಡೆಯವರ ಕಾರ್ಯ ಬಹು ದೊಡ್ಡದು. ಸಾಧನಾ ಸಂಗೀತ ವಿದ್ಯಾಲಯದ ಮೂಲಕ ಸುಂದರ ಸಂಸ್ಕೃತಿಗಳ ಸಮಾಜ ನಿರ್ಮಾಣಕ್ಕೆ ಕಾರ್ಯ ಮಾಡುತ್ತಿರುವುದು ಎಲ್ಲರೂ ಮೆಚ್ಚುವಂತಹ ಕಾರ್ಯವಾಗಿದೆ.

ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಆಗ ಈ ವಾತಾವರಣ ಆಧ್ಯಾತ್ಮಿಕ ಭಾವ ಹೊಂದುತ್ತದೆ. ಈ ದಿಸೆಯಲ್ಲಿ ಗುರುವಂದನಾ ಕಾರ್ಯಕ್ರಮದ ಸಂಯೋಜನೆ ಸೂಕ್ತವಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಶಿಸ್ತು ಬದ್ಧವಾಗಿ ಸಮಯ ಹೊಂದಿಸಿಕೊಳ್ಳುತ ಅತ್ಯುತ್ತಮ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಲಕ್ಷ್ಮಿ ಹೆಗಡೆಯವರು ಅವರ ಗುರುಗಳಿಂದ ಸಿದ್ದಿಸಿಕೊಂಡ ಸಂಗೀತವನ್ನು ಮುಂದಿನ ಸಮಾಜಕ್ಕೆ ದಾಟಿಸುತ್ತಿದ್ದಾರೆ. ಇಂತಹ ಗುರುವನ್ನು ಪಡೆದ ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ಬೆಳೆಯಬೇಕು. ಶಿಕ್ಷಣದಿಂದ ಎಷ್ಟೊಂದು ಕಲಿಯಲು ಸಾಧ್ಯವಿದೆಯೋ, ಸಂಗೀತದಿಂದಲೂ ಅವೆಲ್ಲವನ್ನು ಕಲಿಯಲು ಸಾಧ್ಯವಿದೆ ಎಂಬುದನ್ನು ಪಾಲಕರು ಅರಿತು ವರ್ತಿಸಬೇಕು. ಆಗ ಮಾತ್ರವೇ ಸಂಸ್ಕೃತಿಕ ವಾತಾವರಣ ನಿರ್ಮಾಣವಾಗುತ್ತದೆ ಎನ್ನುತ್ತಾ, ಸಾಧನ ಸಂಗೀತ ವಿದ್ಯಾಲಯ ಸಾಧಕರ ಮನೆಯಾಗಲಿ ಎಂದರು.
ಇದೇ ಸಂದರ್ಭದಲ್ಲಿ ಸಂಗೀತ ಶಿಕ್ಷಕಿ ಲಕ್ಷ್ಮಿ ಹೆಗಡೆ ಹಾಗೂ ಬಾಲಚಂದ್ರ ಹೆಗಡೆಯವರನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಗೌರವಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಸಂಗೀತಗಾರ ತಿಮ್ಮಣ್ಣ ಹೆಗಡೆ ಮಾತನಾಡಿ, ಬದುಕಿನಲ್ಲಿಯೇ ನಿತ್ಯವೂ ಸಂಗೀತವಿದೆ ಮಾತಿನಲ್ಲಿಯೂ ಸಂಗೀತವಿದೆ. ಆದರೆ ಸಂಗೀತವನ್ನೇ ಜೀವನವಾಗಿಸಿಕೊಂಡವರು ಸಾಧಕರಾಗಿ ನಮ್ಮ ಮುಂದಿದ್ದಾರೆ ಎಂದರು.
ಸಾಧನಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಎನ್. ಜಿ ಹೆಗಡೆ ಕಪ್ಪೆಕೆರೆ, ಸಮರ್ಥ ಹೆಗಡೆ, ಡಾ. ಸತೀಶ ಭಟ್ಟ ಮನೋಜ ಭಟ್ಟ ಹಾಗೂ ಇತರ ಕಲಾವಿದರು ಸಹಕರಿಸಿದರು. ದೀಪಿಕಾ ಭಟ್ಟ ಪ್ರಾಸ್ತಾವಿಕ ಮಾತುಗಳನ್ನಾಡಿ, ಪ್ರತಿಯೊಬ್ಬರ ಬದುಕಿನಲ್ಲಿಯೂ ಗುರುವು ಜ್ಞಾನದ ಬೆಳಕನ್ನು ಹರಿಸುವವರು. ಗುರು ಶಿಷ್ಯ ಪರಂಪರೆಯನ್ನು ಎತ್ತಿ ಹಿಡಿಯಲು ಈ ಗುರುಪೂರ್ಣಿಮಾ ಕಾರ್ಯಕ್ರಮ ಎಂದರು. ಪುರಬ್ ನಾಯ್ಕ ವಂದಿಸಿದರು. ಹರ್ಷಾ ಭಟ್ಟ ಸ್ವಾಗತಿಸಿದರು. ನಂದನ ಹೆಗಡೆ, ಅನನ್ಯಾ ಭಟ್ಟ ನಿರೂಪಿಸಿದರು.