ಶಿರಸಿ : ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತತ್ತ್ವನಿಷ್ಠ ದಿನ ಪತ್ರಿಕೆ ಹಾಗೂ ಟೆಕ್ ವೈದ್ಯ ವಾರ ಪತ್ರಿಕೆಯ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ತತ್ತ್ವನಿಷ್ಠ ದಿನ ಪತ್ರಿಕೆಯನ್ನು ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟ ಉದ್ಘಾಟಿಸಿದರು. ಟೆಕ್ ವೈದ್ಯ ಪತ್ರಿಕೆಯನ್ನು ಹೊಸದಿಗಂತ ಪತ್ರಿಕೆಯ ಪ್ರಧಾನ ಸಂಪಾದಕ ವಿನಾಯಕ ಭಟ್ಟ ಉದ್ಘಾಟಿಸಿದರು. ಇ ಪೇಪರ್ ಹಾಗೂ ವೆಬ್ ಪೇಜ್ ಅನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು.
ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟ ಮಾತನಾಡಿ, ಪತ್ರಿಕೆಗಳು ಸಮಾಜಕ್ಕೆ ಹೊರೆಯಲ್ಲ. ಪತ್ರಿಕೆಗಳು ಅಧಿಕವಾದಂತೆ ಓದುಗರ ಸಂಖ್ಯೆಯೂ ಹೆಚ್ಚಾಗುತ್ತದೆ. ಉತ್ತರಕನ್ನಡದಲ್ಲಿ ತತ್ತ್ವನಿಷ್ಠ ದಿನ ಪತ್ರಿಕೆ ಹಾಗೂ ಟೆಕ್ ವೈದ್ಯ ವಾರ ಪತ್ರಿಕೆ ಬಿಡುಗಡೆಗೊಂಡಿರುವುದು ಹರ್ಷವಾಗಿದೆ ಎಂದು ಹೇಳಿದರು.

ಒಬ್ಬ ಲೇಖಕ ಬರೆಯಲು ಆರಂಭಿಸಿದರೆ ೧೦೦ ಜನ ಅಕ್ಷರವಂತರು ಹುಟ್ಟುತ್ತಾರೆ. ಒಂದು ಪುಸ್ತಕ ಬಿಡುಗಡೆಯಾದರೆ ಸಾವಿರ ಜನ ಅಕ್ಷರಸ್ಥರು ಹುಟ್ಟುತ್ತಾರೆ. ಒಂದು ಪತ್ರಿಕೆಯಿಂದ ೧೦ ರಿಂದ ೧೫ ಸಾವಿರ ಓದುಗರು ಹುಟ್ಟುತ್ತಾರೆ. ಹೊಸ ಪತ್ರಿಕೆ ಹುಟ್ಟುಕೊಂಡರೆ ಆ ಜಿಲ್ಲೆಯಲ್ಲಿ ಒಂದು ಸಂತೋಷದ ಸಂದೇಶ ಸಿಗುತ್ತದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅಕ್ಷರವಂತರಿದ್ದರಿಂದ ಒಂದಿಷ್ಟು ಪ್ರಯತ್ನ ನಡೆಯುತ್ತಿದ್ದು, ಪ್ರವೀಣ ಹೆಗಡೆ ಕರ್ಜಗಿ ಹಾಗೂ ನಾಗರಾಜ ವೈದ್ಯ ಪ್ರಯತ್ನವನ್ನು ಮನಸಾರೆ ಶ್ಲಾಘಿಸುತ್ತೇನೆ. ಪತ್ರಿಕೆಯ ಪ್ರಸಾರಕ್ಕೆ, ಪ್ರಭಾವಕ್ಕೆ ಸಂಬಂಧವಿಲ್ಲ. ಪತ್ರಿಕೆ ಪ್ರಸಾರ ಎಷ್ಟಿದೆ ಎಂಬ ತಾಕತ್ತು ಹಾಗೂ ಪ್ರಭಾವ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದ ಅವರು ಪತ್ರಿಕೆ ನಡೆಸುವುದು ಇಂದಿನ ದಿನದಲ್ಲಿ ಸವಾಲಿನ ಕೆಲಸ. ಸಾರಿಗೆ ಸಂಸ್ಥೆ ನಡೆಸುವುದು ಹಾಗೂ ಪತ್ರಿಕೆ ನಡೆಸುವುದು ಒಂದೇ ಸಮ. ಖಾಲಿ ಬಸ್ಸು ಇದ್ದರೂ ಒಡಿಸಬೇಕು. ಅದರಂತೆ ಪತ್ರಿಕೆಯೂ ಜಾಹೀರಾತು ಇಲ್ಲದೆಯೂ ಮುದ್ರಣ ಮಾಡಬೇಕು. ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಆಗುವುದು ಪತ್ರಿಕೆ ಮಾತ್ರ. ಪತ್ರಿಕೆಗಳಿಗೆ ಜಾಹೀರಾತು ಬಂದರೆ ಮಾತ್ರ ಲಾಭ ಎಂದು ವಿವರಿಸಿದರು.
ನಮ್ಮ ಪತ್ರಿಕೆ ಓದುಗರು ಯಾರು, ಅವರಿಗೆ ಏನು ಬೇಕು ಎಂಬುದನ್ನು ತಿಳಿದುಕೊಂಡು ಲೇಖನ ನೀಡಿದರೆ ಪತ್ರಿಕೋದ್ಯಮದಲ್ಲಿ ಖಂಡಿತ ಯಶಸ್ಸು ಲಭಿಸುತ್ತದೆ. ಪತ್ರಿಕೆಯನ್ನು ಯಶಸ್ವಿ ಉದ್ಯಮವನ್ನಾಗಿ ಮಾಡಬೇಕು. ಪತ್ರಿಕೆಯನ್ನು ಬೆಳೆಸುವುದಕ್ಕೆ ನಾವು ಬೆಂಬಲ ನೀಡಬೇಕು ಎಂದ ಅವರು, ಅತ್ಯಂತ ಸಂತೋಷದಿಂದ ಪತ್ರಿಕೆ ಬಿಡುಗಡೆ ಮಾಡಿದ್ದೇನೆ. ತತ್ತ್ವನಿಷ್ಠ ಹೆಸರು ಇಡಲು ಧೈರ್ಯ ಬೇಕು. ತತ್ವ್ತ ಇರಬೇಕು. ಅದಕ್ಕೆ ನಿಷ್ಠೆ ಇರಬೇಕು. ಹೆಸರು ನೋಡಿ ಖುಷಿ ಆಗಿದೆ. ಉತ್ತರಕನ್ನಡಕ್ಕೆ ಒಂದು ಪತ್ರಿಕೆ ಬೇಕಿತ್ತು. ಅದನ್ನು ಈಡರಿಸಿರುವುದಕ್ಕೆ ಪತ್ರಿಕಾ ತಂಡಕ್ಕೆ ಧನ್ಯವಾದ ಅರ್ಪಿಸುತ್ತನೆ ಎಂದರು.
ಯಲ್ಲಾಪುರದ ವಿಶ್ವದರ್ಶನ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ದಿಕ್ಸೂಚಿ ಭಾಷಣ ಮಾಡಿ, ಟಿವಿ ಮಾಧ್ಯಮ ನಾಡಿನ ಉದ್ದಗಲಕ್ಕೂ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಪತ್ರಿಕೆಗೆ ಭವಿಷ್ಯ ಇದೆಯೇ ಎಂಬ ಚರ್ಚೆ ನಿರಂತವಾಗಿ ನಡೆಯುತ್ತಿದೆ. ದೂರದರ್ಶನ ಬಂದ ಮೇಲೆ ಅನೇಕ ಪತ್ರಿಕೆ ಹುಟ್ಟಿವೆ. ಅನೇಕ ಪತ್ರಿಕೆ ನಶಿಸಿವೆ. ಹುಟ್ಟಿದ ಮಗು ಎಲ್ಲವೂ ಬದುಕಲು ಸಾಧ್ಯವಿಲ್ಲ.ಬದುಕಿದರೂ ಯಶಸ್ಸು ಲಭಿಸುವುದಿಲ್ಲ. ಪತ್ರಿಕಾ ರಂಗದಲ್ಲಿಯೂ ಕಾಲ ಕಾಲಕ್ಕೆ ಹೊಸ ಸಾಹಸಕ್ಕೆ ಕೈ ಹಾಕಬೇಕಿದೆ. ಸೋಲಿಗೆ ಗೆಲುವಿನಷ್ಟು ಬೆಲೆ ಇದೆ. ಯಾವ ಪ್ರಯತ್ನವೂ ನಿಷ್ಪ್ರಯೋಜಕವಲ್ಲ. ಫಲ ನಿರೀಕ್ಷಿಸುವ ಮೊದಲ ಪ್ರಯತ್ನ ಮಾಡಬೇಕು. ಮುದ್ರಣದಿಂದ ದೃಶ್ಯ ಮಾಧ್ಯಮಕ್ಕೆ ಹೋಗಿ ಈಗ ಡಿಜಿಟಲ್ ಯುಗದಲ್ಲಿ ನಾವಿದ್ದೇವೆ. ಪತ್ರಿಕೆ ಓದುವವರಿದ್ದಾರೆ. ಅವರನ್ನು ತಲುಪುವ ಬರಹಗಾರರು ಇದ್ದಾರೆ ಎಂಬುದನ್ನು ನೋಡಬೇಕು. ಇಂದಿನ ಸುದ್ದಿ ನಾಳೆ ವಿಭಿನ್ನವಾಗಿ ನೀಡಬೇಕು. ಆಗ ಪತ್ರಿಕೆ ಉಳಿಯಲು ಸಾಧ್ಯ. ಕಾಲ ಕಾಲಕ್ಕೆ ಓದುಗರ ಮನಸ್ಥಿತಿ ಅರ್ಥಮಾಡಿಕೊಂಡು ಬರೆಯಬೇಕಿದೆ. ಯಶಸ್ಸಿನ ಉತ್ತಂಗಕ್ಕೇರಿದಾಗ ಅನೇಕರು ಹಿಂಬಾಲಿಸುತ್ತಾರೆ. ಸೋತರೆ ಯಾರೂ ಇರುವುದಿಲ್ಲ. ಆಗ ನಮ್ಮ ಆತ್ಮವಿಶ್ವಾಸ ಮಾತ್ರ ಇರುತ್ತದೆ. ಆತ್ಮವಿಶ್ವಾಸದಿಂದ ಮುನ್ನೆಡೆದರೆ ಖಂಡತ ಯಶಸ್ಸು ಲಭಿಸುತ್ತದೆ. ಓದುಗರರ ಸಂಖ್ಯೆಯ ನಡುವೆ ಬರಹಗಾರರ ಸಂಖ್ಯೆಯು ದೊಡ್ಡದಾಗಬೇಕು. ಪತ್ರಿಕಾ ಸಂಸ್ಥೆಯಿಂದ ಬರುವ ಸುದ್ದಿಗೆ ಜರಡಿ ಹಿಡಿಯಬೇಕಿಲ್ಲ. ನಮ್ಮ ಜಿಲ್ಲೆಯ ಪ್ರವೀಣ ಹೆಗಡೆ ಹಾಗೂ ನಾಗರಾಜ ವೈದ್ಯ ಹೊಸ ಸಾಹಕ್ಕೆ ಮುಂದಾಗಿದ್ದಾರೆ. ಅವರಿಗೆ ನಾವು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಹೇಳಿದರು.
ಟೆಕ್ ವೈದ್ಯ ವಾರಪತ್ರಿಕೆಯನ್ನು ಹೊಸದಿಗಂತ ಪತ್ರಿಕೆಯ ಸಂಪಾದಕ ವಿನಾಯಕ ಭಟ್ಟ ಬಿಡುಗಡೆಗೊಳಿಸಿ, ಮಾತನಾಡಿ, ತತ್ವ ಎಲ್ಲರಿಗೂ ಇರುತ್ತದೆ. ಆದರೆ ನಿಷ್ಠೆ ಕಡಿಮೆ. ಪತ್ರಿಕೆ ದರ ಏರಿಕೆ ಮಾಡಿದರೆ ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಪತ್ರಿಕೆಗಳು ಜಾಹೀರಾತುದಾರರ ಹಿಡಿತದಲ್ಲಿದೆ. ಒಳ್ಳೆಯ ಸಂಗತಿಗೆ ನಾವು ಬೆಂಬಲ ನೀಡಿದರೆ ಒಳ್ಳೆಯ ಸಂಗತಿ ಹೆಚ್ಚಾಗುತ್ತದೆ. ನಾವು ವಿಮರ್ಷೆ ಮಾಡಿಕೊಂಡರೆ ಉಳಿದವರಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯ. ಇಂದಿನ ದಿನಗಳಲ್ಲಿ ಡಿಜಿಟಲ್ ಸಾಕ್ಷರತೆ ಅಗತ್ಯ. ಅದು ಟೆಕ್ ವೈದ್ಯ ನೀಡುತ್ತಿದೆ. ಸಾತಂತ್ರ್ಯ ಮತ್ತು ಸ್ವೇಚ್ಛೆ ನಡುವೆ ಅಂತರ ಕಡಿಮೆ. ಆದ್ದರಿಂದ ಅತ್ಯಂತ ಗಂಭೀರ ಹೆಜ್ಜೆ ಇಡಬೇಕು. ಇಂದಿನ ದಿನಳಲ್ಲಿ ಕನ್ನಡ ಬಳಕೆ ಕಡಿಮೆಯಾಗುತ್ತಿದ್ದು, ಉತ್ತರಕನ್ನಡದಲ್ಲಿ ಪತ್ರಕರ್ತರ ಸಂಖ್ಯೆ ಜಾಸ್ತಿ ಇದೆ. ಆದರೆ ದೊಡ್ಡ ಕಾಲೇಜು ಇಲ್ಲ ಎಂಬುದು ನೋವಿನ ಸಂಗತಿಯಾಗಿದ್ದು, ಸತ್ಯದ ವಿಷಯ ಜನರಿಗೆ ತಲುಪಬೇಕಾದರೆ ಪತ್ರಿಕೆಗಳು ಅಗತ್ಯ ಎಂದರು.
ತತ್ತ್ವನಿಷ್ಠ ವೆಬ್ ಸೈಟ್ ಮತ್ತು ಇ ಪೇಪರ್ ಲೋಕಾರ್ಪಣೆಗೊಳಿಸಿ, ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಸ್ತು ನಿಷ್ಠ ವರದಿ ಕಡಿಮೆಯಾಗುತ್ತಿದ್ದು, ಸುಳ್ಳು ಸುದ್ದಿ ಪ್ರಕಟಿಸುವುದನ್ನು ನಿಲ್ಲಿಸಬೇಕು. ಜನಪ್ರತಿನಿಧಿಗಳಿಗೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಪತ್ರಿಕೆಗಳು ಬೆಂಬಲ ನೀಡಬೇಕು ಎಂದರು.
ತತ್ತ್ವನಿಷ್ಠ ಹಾಗೂ ಟೆಕ್ ವೈದ್ಯ ಪತ್ರಿಕೆ ಲೋಕಾರ್ಪಣೆಯಾಗುತ್ತಿರುವುದು ಸಂಗತಿ. ಇವೆರಡೂ ಪತ್ರಿಕೆಗಳು ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಲಿ ಎಂದು ಶುಭ ಹಾರೈಸಿದರು.
ಪಂಚಾಯತ್ ರಾಜ್ ವಿಕೇಂದ್ರೀಕರಣದ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಗೆ ನಾನು ರಾಮಕೃಷ್ಣ ಹೆಗಡೆ ಜಿಲ್ಲೆಯವನು ಎಂದರೆ ಬಹಳ ಗೌರವದಿಂದ ನೋಡುತ್ತಿದ್ದರು. ಅದರಂತೆ ವಿಶ್ವೇಶ್ವರ ಭಟ್ಟರು ಮಾತನ್ನು ಬೆಂಗಳೂರಿನ ಜನತೆ ಕೇಳುತ್ತಾರೆ ಎಂಬುದನ್ನು ಅತ್ಯಂತ ಅಭಿಮಾನದಿಂದ ಹೇಳುತ್ತಿದ್ದೇನೆ. ಅಷ್ಟೊಂದು ಪ್ರಭಾವನ್ನು ವಿಶ್ವೇಶ್ವರ ಭಟ್ಟರು ಹೊಂದಿದ್ದಾರೆ. ತತ್ತ್ವನಿಷ್ಠ ಪತ್ರಿಕೆಯು ಎತ್ತರಕ್ಕೆ ಬೆಳೆಯಲಿ ಎಂದರು.
ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಇಂದಿನ ದಿನಗಳಲ್ಲಿ ಪತ್ರಿಕೆ ನಡೆಸುವುದು ಸವಾಲಿನ ಕೆಲಸ ಎಂಬುದನ್ನು ಹಿರಿಯ ಪತ್ರಕರ್ತರಿಂದ ತಿಳಿದುಕೊಂಡಿದ್ದೇನೆ. ಜಗನ್ಮಾತೆ ಮಾರಿಕಾಂಬೆ ಆಶೀರ್ವಾದದಿಂದ ತತ್ತ್ವನಿಷ್ಠ ಹಾಗೂ ಟೆಕ್ ವೈದ್ಯ ಪತ್ರಿಕೆಗಳು ರಾಜ್ಯ ಮಟ್ಟದ ಪತ್ರಿಕೆಯಾಗಿ ಹೊರ ಹೊಮ್ಮಲಿ ಎಂದು ಹಾರೈಸಿದರು.
ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅಧ್ಯಕ್ಷತೆ ವಹಿಸಿ, ಮಾತನಾಡಿ, ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಗಳು ಉತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅದರಂತೆ ತತ್ತ್ವನಿಷ್ಠ ಪತ್ರಿಕೆ ಹಾಗೂ ಟೆಕ್ ವೈದ್ಯ ಮುಂದೆ ಸಾಗಲಿ ಎಂದರು.
ಸಂಸ್ಥೆಯನ್ನು ಮುನ್ನೆಡೆಸುವಾಗ ಕೆಲವೊಂದು ಅಡೆತಡೆಗಳು ಎದುರಾಗುತ್ತವೆ. ಅದನ್ನು ಧೈರ್ಯವಾಗಿ ಎದುರಿಸಬೇಕು. ತತ್ತ್ವನಿಷ್ಠ ಹಾಗೂ ಟೆಕ್ ವೈದ್ಯ ಬಳಹ ಎಲ್ಲದಕ್ಕೂ ಮೀರಿ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಮುನ್ನೆಡೆಯಲಿ ಎಂದು ಹಾರೈಸಿದರು.
ತತ್ತ್ವನಿಷ್ಠ ದಿನಪತ್ರಿಕೆಯ ಪ್ರಧಾನ ಸಂಪಾದಕ ಪ್ರವೀಣ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ತತ್ತ್ವದ ಜತೆ ಕೆಲಸದಲ್ಲಿ ನಿಷ್ಠೆಯನ್ನು ಹೊಂದಿರುತ್ತೇವೆ. ಪತ್ರಿಕೆ ಕಟ್ಟಿ ಅದನ್ನು ಜನರಿಗೆ ತಲುಪಿಸುವುದು ಹೇಗೆ ಎಂಬುದನ್ನು ವಿಶ್ವೇಶ್ವರ ಭಟ್ಟ ನಮಗೆಲ್ಲರೂ ಮಾದರಿ. ಅವರ ಶಿಷ್ಯ ಎನ್ನಲು ಹಮ್ಮೆ ಎಂದರು.
ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ತತ್ತ್ವನಿಷ್ಠ ಪತ್ರಿಕೆಯು ಮುಂದಿನ ದಿನಗಳಲ್ಲಿ ವಸ್ತುನಿಷ್ಠ ವರದಿ ಪ್ರಕಟಿಸಿ, ಜಿಲ್ಲೆಯ ಹೆಮ್ಮೆಯ ಪತ್ರಿಕೆಯಾಗಲಿ. ಅದರಂತೆ ಟೆಕ್ ವೈದ್ಯ ಎಂಬ ವಾರಪತ್ರಿಕೆ ಟೆಕ್ನಾಲಜಿ ಕುರಿತು ಜನರಿಗೆ ಮನದಟ್ಟು ಮಾಡಲಿ ಎಂದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜನಮಾಧ್ಯಮ ಸಂಪಾದಕ ಶ್ರೀಧರ ಮಂಗಳೂರ, ವಿಶ್ವಂಭರ ಪತ್ರಿಕೆ ಪ್ರಧಾನ ಸಂಪಾದಕ ಅನಂತಮೂರ್ತಿ ಹೆಗಡೆ, ಕೆನರಾ ಎಕ್ಸಲೆನ್ಸ್ ಕಾಲೆಜಿನ ಸಂಸ್ಥಾಪಕ ಅಧ್ಯಕ್ಷ ಡಾ.ಜಿ.ಜಿ.ಹೆಗಡೆ ಕುಮಟಾ, ಟೆಕ್ ವೈದ್ಯ ಪ್ರಧಾನ ಸಂಪಾದಕ ನಾಗರಾಜ ವೈದ್ಯ, ತತ್ತ್ವನಿಷ್ಠ ಪತ್ರಿಕೆಯ ಕಾರ್ಯನಿವರ್ವಾಹಕ ಸಂಪಾದಕ ಮಹಶ್ ಹೆಗಡೆ ಯಲಗೋಡಮನೆ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ರವೀಂದ್ರ ಭಟ್ಟ ಸೂರಿ, ಗಣೇಶ ಜೋಶಿ ನಿರೂಪಿಸಿದರು. ಚೈತ್ರಿಕಾ ವೈದ್ಯ, ಸಿಂಧೂರ ಹೆಗಡೆ ಪ್ರಾರ್ಥಿಸಿದರು. ಬಿಂದು ವೈದ್ಯ ಸನ್ಮಾನ ಪತ್ರ ವಾಚಿಸಿದರು. ಟೆಕ್ ವೈದ್ಯ ಪತ್ರಿಕೆಯ ಪ್ರಧಾನ ಸಂಪಾದಕ ನಾಗರಾಜ ವೈದ್ಯ ವಂದಿಸಿದರು.