ಕುಮಟಾ : ಹಿರಿಯ ಶಿಕ್ಷಣಾಭಿಮಾನಿ, ಸಾಮಾಜಿಕ ಸೇವಾ ಕಾರ್ಯಕರ್ತ ಹಾಗೂ ನಿವೃತ್ತ ಮುಖ್ಯಾಧ್ಯಾಪಕರಾಗಿದ್ದ ಮಹಾದೇವ ಎಮ್.ಹೆಗಡೆ ಹೊಲನಗದ್ದೆ (ಎಂ.ಎಂ ಹೆಗಡೆ) (92) ಅವರು ಇಂದು ಸೆಪ್ಟೆಂಬರ್ 17, ಬುಧವಾರ ಶಿವಮೊಗ್ಗಾದಲ್ಲಿ ನಿಧನರಾದರು.
ಮೃತರ ಪಾರ್ಥಿವ ಶರೀರವನ್ನು ಇಂದು ರಾತ್ರಿ 8.00 ಗಂಟೆಗೆ ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿನ ಅವರ ಸ್ವಗೃಹಕ್ಕೆ ಕರೆತಂದು, ಗುರುವಾರ ಬೆಳಿಗ್ಗೆ 10.00 ಗಂಟೆಗೆ ಹೊಲನಗದ್ದೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮಹಾದೇವ ಎಮ್. ಹೆಗಡೆ ಅವರು ಶಿರಸಿ ತಾಲೂಕಿನ ಸರಕುಳಿ ಪ್ರೌಢಶಾಲೆಯಲ್ಲಿ 32 ವರ್ಷಗಳ ಕಾಲ ಶಿಕ್ಷಕರಾಗಿಯೂ, ಮುಖ್ಯಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ನಿವೃತ್ತಿ ನಂತರವೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುವ ಜೊಗೆಗೆ, ಸಮಾಜಮುಖಿ ಸೇವೆಯಲ್ಲಿಯೂ ತಮ್ಮನ್ನು ನಿರತರನ್ನಾಗಿಸಿಕೊಂಡಿದ್ದರು.
ಅವರು ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿಯೂ, ಲಯನ್ಸ್ ಝೋನಲ್ ಚೇರ್‌ಮನ್ ಆಗಿಯೂ ಸೇವೆ ಸಲ್ಲಿಸಿದ್ದರು.
ನಿವೃತ್ತಿಯ ನಂತರ ಮುಂಡಗೋಡದ ಪ್ರೌಢಶಾಲೆಯಲ್ಲಿಯೂ ಸೇವೆ ಸಲ್ಲಿಸಿ ತಮ್ಮ ಶಿಕ್ಷಣಾಭಿಮಾನವನ್ನು ಮುಂದುವರೆಸಿದರು.
ಕುಮಟಾ ವಿದ್ಯಾಧಿರಾಜ ಪೊಲಿಟೆಕ್ನಿಕ್ ಕಾಲೇಜಿನಲ್ಲಿ ವೈಸ್ ಪ್ರಿನ್ಸಿಪಾಲ್ ಆಗಿ ಹಾಗೂ ಕುಮಟಾ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಡೆಸುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪ್ರಮುಖ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದರು.
ಮೃತರು ಹೊಲನಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷ ಎಮ್.ಎಮ್. ಹೆಗಡೆ ಹಾಗೂ ಶಿವಮೊಗ್ಗಾ ನಿವಾಸಿ ವಿನಯ ಹೆಗಡೆ ಅವರ ತಂದೆಯವರಾಗಿದ್ದಾರೆ. ಇವರ ಅಗಲಿಕೆಯಿಂದ ಶಿಕ್ಷಣ ಕ್ಷೇತ್ರ ಮತ್ತು ಸಾಮಾಜಿಕ ವಲಯದಲ್ಲಿ ಶೋಕ ಸಂಜೆ ಆವರಿಸಿದೆ.