ಕುಮಟಾ : ಕರ್ನಾಟಕ ಸರಕಾರವು ಪ್ರಸಕ್ತ ವರ್ಷ ನಡೆಸುತ್ತಿರುವ ಜಾತಿ ಜನಗಣತಿಯಲ್ಲಿ ಕೆಲವು ಪ್ರಮುಖ ಮಾಹಿತಿಯನ್ನು ಕಲೆಹಾಕುತ್ತಿದ್ದು ಈ ಮಾಹಿತಿಯ ಆಧಾರದಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ವಾಸಿಸುವ ನಮ್ಮ ಕೊಂಕಣಿ ಭಾಷಿಕ ಭಂಡಾರಿ ಜನಾಂಗದ ಹೆಸರು ಕೆಲವು ಪ್ರದೇಶಗಳಲ್ಲಿ ಬಗೆಬಗೆಯಾಗಿದೆ. ಇತಿಹಾಸದಲ್ಲಿ ಕ್ಷತ್ರಿಯರಾಗಿ ಭೂಮಿ ಬದುಕಿಸಿದ ಭಂಡಾರಿಗಳೆಂದೇ ಹೆಸರಾದ ಸಮುದಾಯವು ಸರಕಾರದ ಜಾತಿಯ ಪಟ್ಟಿಯಲ್ಲಿ ದೇಶಭಂಡಾರಿ ಎಂದು ನಮೂದಿಸಿಕೊಂಡಿದೆ.
ಭಂಡಾರಿ ಹೆಸರಿನಲ್ಲಿ ಇರುವವರು ಸವಿತಾ ಸಮಾಜದ ಹೆಸರಲ್ಲಿ ಗಣನೆಗೆ ಸರಕಾರ ತೆಗೆದುಕೊಂಡ ಪರಿಣಾಮ ನಮ್ಮ ಸಮಾಜದ ನಿಜವಾದ ಅಂಕೆ ಸಂಖ್ಯೆ ಮರೆಮಾಚಲ್ಪಟ್ಟಿದೆ. ಭವಿಷ್ಯದಲ್ಲಿ ಇದನ್ನು ಸರಿಪಡಿಸುವ ಗಂಭೀರ ಪ್ರಯತ್ನಗಳು ಸಾಗಿದೆ.ಈಗಾಗಲೇ ಭಂಡಾರಿ, ನಾಯ್ಕ, ಗಾಂವ್ಕರ್ ಇತ್ಯಾದಿ ಇತ್ಯಾದಿ ಹೆಸರಿಂದ ಗುರುತಿಸಿಕೊಂಡವರು ಸಮಾಜದ ಮುಖ್ಯ ಪಟ್ಟಿಯಲ್ಲಿ ಸೇರ್ಪಡೆ ಆಗುವ ನಿಟ್ಟಿನಲ್ಲಿ ಉಪಜಾತಿ ಎಂದು ನಮೂದಿಸುವ ಸಂದರ್ಭದಲ್ಲಿ ದೇಶಭಂಡಾರಿ ಎಂದು ಕುಲಕಸುಬು ಎಂಬಲ್ಲಿ ಮಾಡಕಾರ( ಸೇಂದಿ ಇಳಿಸುವವರು) ಎಂದು ಬರೆಸಿ ಇದನ್ನು ಇಂಗ್ಲಿಷ್ ಭಾಷೆಯಲ್ಲಿ Toddy Tapper ಎಂದು ಕಡ್ಡಾಯವಾಗಿ ನಮೂದಿಸುವಂತೆ ನೋಡಿಕೊಳ್ಳಬೇಕಾಗಿ ಭಂಡಾರಿ ಸಮಾಜೋನ್ನತಿ ಸಂಘ ಉ.ಕ. ಇದರ ಜಿಲ್ಲಾ ಅಧ್ಯಕ್ಷ ಅರುಣ ಸಿ. ಮಣಕೀಕರ್ ತಿಳಿಸಿದ್ದಾರೆ.

ಇಂದು ನಾವು ತೆಗೆದುಕೊಳ್ಳುವ ಈ ತೀರ್ಮಾನವು ಭವಿಷ್ಯದಲ್ಲಿಮುಂದಿನ ಪೀಳಿಗೆಗೆ ಬಹಳ ಅನುಕೂಲಕಾರಿ ಆಗಲಿದೆ ಎಂಬ ಆಶಯ ನಮ್ಮದಾಗಿದೆ. ಕಾರಣ ಯಾವುದೇ ವೈಯಕ್ತಿಕ ಪ್ರತಿಷ್ಠೆಯಾಗಿ ಇದನ್ನು ಭಾವಿಸದೇ ಎಲ್ಲರೂ ಈ ಸಲಹೆಯನ್ನು ಪಾಲಿಸಬೇಕಾಗಿ ಅವರು ವಿನಂತಿಸಿದ್ದಾರೆ.