ಕುಮಟಾ : ಜಾತಿಗಣತಿಯ ಹೆಸರಿನಲ್ಲಿ ಸರಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಶಿಕ್ಷಕರನ್ನು ಬಳಸಿಕೊಂಡಿರುವುದು ಖಂಡಿತವಾಗಿಯೂ ದೊಡ್ಡ ಅಪರಾಧ. ಶಿಕ್ಷಕರುಗಳಲ್ಲಿ ಚಿಕ್ಕ ಮಗುವನ್ನು ಹೊಂದಿರುವ ತಾಯಿ, ನಿವೃತ್ತಿಯ ಅಂಚಿಗೆ ಬಂದಿರುವ ಅನೇಕ ಹಿರಿಯ ಶಿಕ್ಷಕರುಗಳು, ಅಂಗವಿಕಲತೆಯನ್ನು ಹೊಂದಿರುವವರು, ಆರೋಗ್ಯದಲ್ಲಿ ತುಂಬಾ ತೊಂದರೆಯನ್ನು ಅನುಭವಿಸುತ್ತಿರುವವರನ್ನ ತೀರಾ ಅಮಾನವೀಯತೆಯಿಂದ ಜಾತಿಗಳ ಸಮೀಕ್ಷೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಮಾನವೀಯತೆಯನ್ನು ಮರೆತಿದ್ದು ನಮ್ಮ ಸಮಾಜದ ದುರ್ದೈವ ಎಂದು ಜನಪರ ಹೋರಾಟ ವೇದಿಕೆಯ ಸ್ಥಾಪಕ ಅಧ್ಯಕ್ಷ ಎಂ. ಜಿ ಭಟ್ಟ ಕಿಡಿ ಕಾರಿದ್ದಾರೆ.
ಸರ್ಕಾರ ನೀಡಿರುವ ಆಪ್ ಗಳ ಮೂಲಕ ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರುಗಳು ತಾಂತ್ರಿಕವಾಗಿ ತುಂಬಾ ತೊಂದರೆಯನ್ನು ಅನುಭವಿಸುತ್ತಿರುವುದು ಕೂಡ ಅವರಿಗೆ ಹಿಂಸೆಯಾಗಿ ಪರಿಣಮಿಸಿದೆ. ಲೊಕೇಶನ್ ಒಂದು ಕಡೆ ತೋರಿಸಿದರೆ ಅದರ ಮಾಹಿತಿಗೆ ಸಂಬಂಧವೆ ಇರುವುದಿಲ್ಲ ಎಂದು ಶಿಕ್ಷಕರು ಅಲವತ್ತುಕೊಳ್ಳುತ್ತಿದ್ದಾರೆ. ಅದೂ ಅಲ್ಲದೆ ಯಾವುದೇ ಮಾಹಿತಿಗಳನ್ನು ತುಂಬಿದರು ಕೂಡ ಸರ್ವರ್ ಬ್ಯುಸಿ ಎಂಬ ಉತ್ತರದಿಂದ ಶಿಕ್ಷಕರು ದಿನಕ್ಕೆ ಮೂರು ನಾಲ್ಕು ಮನೆಗಳನ್ನು ಮಾಡುವುದು ಕೂಡ ಕಷ್ಟವಾಗುತ್ತಿದೆ. ಅವರ ಲೊಕೇಶನ್ ತೋರಿಸುವ ಮನೆ ಒಂದು ಕಡೆ ಇದ್ದರೆ ಇನ್ನೊಂದು ಮನೆ ಅದೆಷ್ಟೋ ದೂರದಲ್ಲಿ ಇರುತ್ತದೆ ಈ ರೀತಿಯಾಗಿ ತಾಂತ್ರಿಕವಾಗಿಯೂ ಕೂಡಾ ತುಂಬಾ ತೊಂದರೆಯಾಗುತ್ತಿದೆ. ಇದು ಶಿಕ್ಷಕರನ್ನು ಗೋಳು ಹೊಯ್ದುಕೊಳ್ಳುತ್ತಿದೆ. ಅದರಲ್ಲಿಯೂ ಚಿಕ್ಕ ಮಗುವನ್ನು ಹೊಂದಿರುವ ತಾಯಂದಿರನ್ನೂ ಈ ಸಮೀಕ್ಷೆಗೆ ಬಳಸುತ್ತಿರುವುದು ಅಮಾನವೀಯ ಕೃತ್ಯವಾಗಿದೆ. ಇದು ಸರ್ಕಾರಕ್ಕೆ ಶಿಕ್ಷಕರ ಮೇಲೆ ಯಾವುದೇ ಗೌರವ ಇಲ್ಲ ಎನ್ನುವುದನ್ನು ತೋರಿಸುತ್ತದೆ.

ಅಂಗವಿಕಲರನ್ನೂ, ಆರೋಗ್ಯದಲ್ಲಿ ತೀರಾ ತೊಂದರೆಯನ್ನು ಅನುಭವಿಸುತ್ತಿರುವ ವ್ಯಕ್ತಿಗಳನ್ನು ಕೂಡ ಬಳಸಿಕೊಂಡು ಅವರನ್ನು ಹೈರಾಣ ಮಾಡುತ್ತಿರುವ ಸರ್ಕಾರ ಹಾಗೂ ಮಂತ್ರಿಗಳು ತಕ್ಷಣ ಇಂತಹ ಅಮಾನವೀಯ ವರ್ತನೆಯನ್ನು ನಿಲ್ಲಿಸಿ, ಸರಿಯಾದ ಹಾಗೂ ಸೂಕ್ತವಾದ ವ್ಯವಸ್ಥೆಯನ್ನು ಮಾಡಕೊಳ್ಳಬೇಕು. ಸರಕಾರ ಮೊಂಡುತನವನ್ನು ತೋರಿಸುತ್ತಿದೆ. ಈ ಅವೈಜ್ಞಾನಿಕ ಹಾಗೂ ಅರ್ಥವಿಲ್ಲದ ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಚ್ಚಿರುವ ಈ ಜಾತಿ ಗಣತಿಯನ್ನು ತಕ್ಷಣ ನಿಲ್ಲಿಸಲಿ ಎಂದು ಎಂ. ಜಿ ಭಟ್ ಅಗ್ರಹಿಸಿದ್ದಾರೆ.