ಕುಮಟಾ: ರೋಟರಿ ಏನ್ಸ್ ಕ್ಲಬ್ ಹಾಗೂ ಹೊಂಗಿರಣ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ರೋಟರಿ ನಾದಶ್ರೀ ಕಲಾಕೇಂದ್ರದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ದಾಂಡಿಯಾ ಕಾರ್ಯಕ್ರಮ ವೈಭವದಿಂದ ನೆರವೇರಿತು.
ರೋಟರಿ ಏನ್ಸ್ ಕ್ಲಬ್ ಅಧ್ಯಕ್ಷೆ ಏನ್ ದೀಪಾ ಕಿರಣ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿ, “ದಾಂಡಿಯಾ ನೃತ್ಯವು ಮಹಿಷಾಸುರ ಮರ್ಧಿನಿ ದುರ್ಗಿಯ ಶೌರ್ಯವನ್ನು ಪ್ರತಿನಿಧಿಸುವ ಕಲಾತ್ಮಕತೆಯ ರೂಪ. ಇದರಲ್ಲಿದೆ ಸಾಂಸ್ಕೃತಿಕ ಮಹತ್ವ, ಸಮೂಹಸ್ಪೂರ್ತಿ ಮತ್ತು ಉಲ್ಲಾಸ” ಎಂದು ಸಾರಿದರು. ಕಾರ್ಯಕ್ರಮದ ಅಂಗವಾಗಿ ಏನ್ಸ್ ಖಜಾಂಚಿ ಪ್ರಿಯಾಂಕಾ ಗುರುಪ್ರಸಾದ ಕಾಮತ, ಹೊಂಗಿರಣ ಮಹಿಳಾ ಒಕ್ಕೂಟದ ಅಧ್ಯಕ್ಷೆ ರೇಖಾ ಶೆಟ್ಟಿ, ಕಾರ್ಯದರ್ಶಿ ವರ್ಷಾ ವೆರ್ಣೇಕರ ಹಾಗೂ ಖಜಾಂಚಿ ಪ್ರಿನ್ಸಿ ಜಸವಾಲ ದೀಪ ಪ್ರಜ್ವಲನಗೈದು ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷೆ ದೀಪಾ ನಾಯಕ ದುರ್ಗಾ ಶ್ಲೋಕ ಪಠಣದೊಂದಿಗೆ ಸಾಂಸ್ಕೃತಿಕ ಸಂಭ್ರಮ ಆರಂಭವಾಯಿತು. ಬಣ್ಣ ಬಣ್ಣದ ಉಡುಪು, ಆಭರಣ, ಸಂಗೀತದ ನಾದ, ಚಪ್ಪಾಳೆ ಮತ್ತು ದಂಡಿಯ ತಟ್ಟಾಟ ೩೦ ಮಹಿಳಾ ಮಣಿಗಳಿಂದ ಪ್ರದರ್ಶಿತ ನೃತ್ಯ ಪ್ರೇಕ್ಷಕರ ಮನವನ್ನು ಸೂರೆಗೊಂಡಿತು. ಸರ್ವಾಲಂಕೃತ ಅಭಿನಯಕ್ಕಾಗಿ ಪ್ರಿನ್ಸಿ ಜಸವಾಲ ಮತ್ತು ಪ್ರಿಯಾಂಕಾ ಕಾಮತರಿಗೆ ಬಹುಮಾನ ನೀಡಲಾಯಿತು.