ಕುಮಟಾ: ರಾಷ್ಟ್ರ ಪ್ರಶಸ್ತಿ ವಿಜೇತ ಗೌರವಾನ್ವಿತ ಶಿಕ್ಷಣ ತಜ್ಞ, ನಿವೃತ್ತ ಮುಖ್ಯ ಶಿಕ್ಷಕರಾದ ಡಿ.ಎಂ. ಕಾಮತ್ (79) ಅವರು ಶನಿವಾರ ರಾತ್ರಿ ನಿಧನರಾದರು. ನಿನ್ನೆ ನಡೆದ ಗುಪ್ತಗಾಮೀ ರಾಷ್ಟ್ರಪ್ರೇಮಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಅವರು ಮನೆಗೆ ತೆರಳಿದಾಗ ಹೃದಯಾಘಾತಕ್ಕೊಳಗಾದರು.
ಹಲವು ದಶಕಗಳ ಕಾಲ ಶಿಕ್ಷಕ ವೃತ್ತಿಗೆ ಅಳಿಸಲಾಗದ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕೆನರಾ ಕಾಲೇಜು ಸೊಸೈಟಿಯ ಉಪಾಧ್ಯಕ್ಷರಾಗಿದ್ದರು. ಹೆಗಡೆ ಶಾಂತಿಕಾಂಬಾ ಪ್ರೌಢಶಾಲೆಯ ಉನ್ನತಿಗಾಗಿ ಶ್ರಮಿಸಿದ್ದರು. ಗಿಬ್ ಹೈಸ್ಕೂಲಿನ ಶತಮಾನೋತ್ಸವ ಸಮಿತಿಯಲ್ಲಿ ಸಕ್ರಿಯರಾಗಿದ್ದರು. ಸರಳ ಜೀವನ–ಉನ್ನತ ಚಿಂತನೆ, ಶಿಸ್ತಿನ ಅಧ್ಯಾಪನ ಹಾಗೂ ಮೌಲ್ಯಾಧಾರಿತ ಶಿಕ್ಷಣ ಎನ್ನುವುದೇ ಅವರ ಗುರುತಾಗಿತ್ತು.

ಅನೇಕ ಶಾಲೆಗಳ ಅಭಿವೃದ್ಧಿಯಲ್ಲಿ ಅವರ ಮಾರ್ಗದರ್ಶನ ಪ್ರಮುಖವಾಗಿದ್ದಷ್ಟೇ, ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಅವರ ಪಾತ್ರ ಅಪ್ರತಿಮವಾಗಿತ್ತು. ಇಂದು ಶಿಕ್ಷಣ ಕ್ಷೇತ್ರದಲ್ಲಿ ದುಃಖದ ತೀವ್ರ ಅಲೆ ಮೂಡಿಸಿದೆ.
ರಾಷ್ಟ್ರ ಸರ್ಕಾರದಿಂದ ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಅವರು, ಶಿಕ್ಷಕ ವೃಂದದಲ್ಲಿ ನಿಸ್ವಾರ್ಥ ಸೇವೆ, ನಿಖರ ಕೆಲಸ ಮತ್ತು ಮೃದು ಸ್ವಭಾವದಿಂದ ಎಲ್ಲರ ಮನಗೆದ್ದಿದ್ದರು. ನಿವೃತ್ತಿಯಲ್ಲಿಯೂ ಸಹ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ವಿದ್ಯಾರ್ಥಿ–ಪೋಷಕರಿಗೆ ಸಲಹೆ ಹಾಗೂ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಿದ್ದರು. ‘ಕಾಮತ ಸರ್ ಅವರ ಅಗಲಿಕೆಯಿಂದ ಶಿಕ್ಷಣ ಕ್ಷೇತ್ರವು ನಿಸ್ವಾರ್ಥ ಸೇವೆಯನ್ನು ಮಾಡಿದ ನಿಜವಾದ ಗುರುವರ್ಯರನ್ನು ಕಳೆದುಕೊಂಡಂತಾಗಿದೆ’ ಎಂದು ಅವರ ಒಡನಾಡಿ ನಿವೃತ್ತ ಶಿಕ್ಷಕ ಎನ್. ಆರ್. ಗಜು ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಆಳವಾದ ದುಃಖ ವ್ಯಕ್ತಪಡಿಸಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.