Home ಅಂಕಣಸಾಲು ಸಾಲು ರಜೆಯ ಜಾಡ್ಯ ಮಕ್ಕಳನ್ನು ಆವರಿಸದಿರಲಿ.

ಸಾಲು ಸಾಲು ರಜೆಯ ಜಾಡ್ಯ ಮಕ್ಕಳನ್ನು ಆವರಿಸದಿರಲಿ.

by Editor
0 comments
ಯಾವಾಗಲೂ ತಮ್ಮದೇ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡು ತಮ್ಮ ಪಾಡಿಗೆ ತಾವಿರಬೇಕೆಂದು ಬಯಸುವ ಮಕ್ಕಳಿಗೆ ಅದರಾಚೆಗೂ ವಿಶಾಲವಾದ ಜಗತ್ತು ಇದೆ ಎಂಬುದನ್ನು ತೋರಿಸಬೇಕಾದ ಅಗತ್ಯತೆ ಇದೆ. ಇದನ್ನು ಅಪ್ಪ, ಅಮ್ಮ, ಅಜ್ಜಿ, ತಾತ, ಶಿಕ್ಷಕರು, ಹಿರಿಯರು, ಸ್ನೇಹಿತರು ಪ್ರೀತಿಯಿಂದ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಮಳೆಗಾಲದ ಕಾರಣ ಸಾಲು ಸಾಲು ರಜೆಗಳು ಮಕ್ಕಳಲ್ಲಿ ಜಾಡ್ಯವನ್ನು ತಂದಿದೆ. ಹೊರಪ್ರಪಂಚವನ್ನು ಕಾಣಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅನಿಯಮಿತ ರಜೆಗಳಿಂದ ಅಭ್ಯಾಸದ ಮೇಲೆಯೂ ಪರಿಣಾಮ ಬೀರಿದ್ದು, ಹೊಸ ಹುಮ್ಮಸ್ಸಿನೊಂದಿಗೆ ಶಾಲೆ ಸೇರಿದ್ದ ಮಕ್ಕಳ ಕಲಿಕೆಯ ಪ್ರಗತಿಯೂ ಕೊಂಚ ಏರಿಳಿತವಾಗಿದೆ. ಮನೆಯಲ್ಲಿ ಮಕ್ಕಳನ್ನು ನಿಭಾಯಿಸುವುದೂ ಪಾಲಕರಿಗೆ ಸವಾಲಾಗಿದೆ. ಶಿಕ್ಷಕರಿಗೂ ಮುಂದಿನ ಪ್ರಕ್ರಿಯೆಗಳು ಹೇಗೆ ಎಂಬುದು ಗೊಂದಲ ತಂದೊಡ್ಡಿದೆ. ಇವೆಲ್ಲವುದರ ನಡುವೆ ಮಕ್ಕಳಿಗೆ ಒಂದಿಷ್ಟು ಶಿಕ್ಷಣ ನೀಡಬೇಕಾದ ಜವಾಬ್ದಾರಿ ಪಾಲಕರದ್ದಾಗಿದೆ. ಹಾಗಾದರೆ ಈ ರಜೆಯಲ್ಲಿ ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಮಕ್ಕಳಿಗೆ ಸಣ್ಣ–ಪುಟ್ಟ ಪುಸ್ತಕಗಳನ್ನು ಓದುವ ರೂಢಿಯನ್ನು ಮಾಡಿಸಬಹುದು. ಜೊತೆಗೆ ಪತ್ರಿಕೆಗಳ ತಲೆಬರಹವನ್ನು ಓದುವ ಅಭ್ಯಾಸ ಮಾಡಿಸುವುದು ಅದರಲ್ಲಿರುವ ವಿಶೇಷ ವಿಷಯಗಳನ್ನು ಕತ್ತರಿಸಿ ಒಂದು ಪುಸ್ತಕದಲ್ಲಿ ಅಂಟಿಸಿಡುವುದು ಇತ್ಯಾದಿ ಕಾರ್ಯಗಳನ್ನು ಮಾಡಿಸಿ ಮನ ಗೆಲ್ಲಬಹುದು. ಇದು ಮಕ್ಕಳಲ್ಲಿ ಮನನಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಪ್ರಾಜೆಕ್ಟ್ ಕೊಟ್ಟಾಗ ಅದನ್ನು ಸರಾಗವಾಗಿ ಮಾಡಿ ಮುಗಿಸಲು ಅನುಕೂಲವಾಗುತ್ತದೆ.
ಶಾಲೆಯ ವಿರಾಮವು ಮಕ್ಕಳಿಗೆ ಕಡಿಮೆ ದೈಹಿಕ ಚಟುವಟಿಕೆಯನ್ನು ಉಂಟುಮಾಡುತ್ತದೆ. ಆದಾಗ್ಯೂ, ಪ್ರತಿ ಮಗು ಕನಿಷ್ಠ 60 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿರಬೇಕು. ಆದ್ದರಿಂದ, ಈಜು, ಕರಾಟೆ, ಯೋಗ ಅಥವಾ ಇತರ ಕ್ರೀಡೆಗಳಲ್ಲಿ ಅವರನ್ನು ಕಾರ್ಯನಿರತವಾಗಿಸುವುದು ಅಗತ್ಯವಾಗಿದೆ. ಇದರಿಂದ ಮಕ್ಕಳ ಆರೋಗ್ಯವೃದ್ದಿಸುವ ಜೊತೆಗೆ ಅವರ ಮಾನಸಿಕ ಸ್ಥಿರತೆಯು ಹೆಚ್ಚುತ್ತದೆ.
ಹೊರಗೆ ಜೋರಾಗಿ ಮಳೆ ಸುರಿಯುತ್ತಿದೆ. ಹೊರಗೆ ಹೋಗಲು ಸಾಧ್ಯವಿಲ್ಲದ ಈ ಸಂದರ್ಭದಲ್ಲಿ ಅಡುಗೆ ಕಲೆಯನ್ನೂ ಕಲಿಸಲು ಪ್ರಯತ್ನ ಮಾಡಬಹುದು. ಹೆಚ್ಚಾಗಿ ಒಲೆಯ ಮುಂದೆ ನಿಲ್ಲದಂತಹ ತಿಂಡಿ ತಿನಿಸುಗಳನ್ನು ಮಾಡುವುದನ್ನು ಮಕ್ಕಳಿಗೆ ಕಲಿಸಬಹುದು. ಉದಾ. ಕೋಸಂಬರಿ, ಬ್ರೆಡ್ ಟೋಸ್ಟ್, ಚುರುಮುರಿ ಇತ್ಯಾದಿಗಳನ್ನು ತಯಾರಿಸಿ ಹಂಚಿ ತಿನ್ನುವಂತೆ ಮಾಡಬಹುದು.
ಇನ್ನು ಮಕ್ಕಳಿಗೆ ಚಳಿಗೆ ನೆಗಡಿ, ಕೆಮ್ಮು, ಕಫ ಸಾಮಾನ್ಯ. ಹಾಗಾಗಿ ಕೆಲವು ಸುಲಭ ಕಷಾಯಗಳನ್ನು ಮಾಡಿಕೊಳ್ಳುವುದರ ಜೊತೆಗೆ ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರೆ ಆರೋಗ್ಯದ ಬಗ್ಗೆಯೂ ಜಾಗೃತಿ ಉಂಟುಮಾಡಿದಂತಾಗುತ್ತದೆ
ಇದೇ ರಜೆಯನ್ನು ಸದುಪಯೋಗಪಡಿಸಿಕೊಂಡು ಕೈಬರಹ ಅಂದವಾಗಿಸುವ ಅಲ್ಪಕಾಲದ ಕೋರ್ಸ್‌ಗಳನ್ನು ಪಾಲಕರೇ ಸೃಷ್ಟಿಸಲು ಸಾಧ್ಯವಿದೆ. ಚೆನ್ನಾದ ತಿಳಿವಳಿಕೆ ಇದ್ದರೂ, ಅನೇಕ ಬಾರಿ ಸಹ್ಯವಲ್ಲದ ಕೈಬರಹದಿಂದ ಮೌಲ್ಯಮಾಪಕರಿಗೆ ಮಕ್ಕಳ ಉತ್ತರಪತ್ರಿಕೆಯ ಬಗೆಗೆ ಅನಾದರ ಮೂಡಬಹುದು, ಮತ್ತು ಅದರಿಂದಾಗಿಯೇ ಕಡಿಮೆ ಅಂಕ ಬರಬಹುದು. ಹೀಗಾಗಿ ಉತ್ತಮ ಕೈಬರಹ ರೂಡಿಸಲು ಇದು ಸಕಾಲ ಎಂಬುದು ನಿಮ್ಮ ನೆನಪಿಗೆ ಇರಲಿ.
ಭೌಗೋಳಿಕತೆ, ಇತಿಹಾಸ ಅಥವಾ ನಿಮ್ಮ ಮಕ್ಕಳು ಇತ್ತೀಚೆಗೆ ಶಾಲೆಯಲ್ಲಿ ಕಲಿಸಿದ ಯಾವುದೇ ವಿಷಯದಿಂದ ಪ್ರಶ್ನೆಗಳನ್ನು ತಯಾರಿಸಿ. ಅದನ್ನು ಸ್ಪರ್ಧೆಯಾಗಿ ಪರಿವರ್ತಿಸಿ ಮತ್ತು ವಿಜೇತರಿಗೆ ಬಹುಮಾನ ನೀಡಿ. ಇದರಿಂದ ಓದು ಮುನ್ನಡೆಯುವ ಜೊತೆಗೆ, ಅಭ್ಯಾಸವು ಮನನವಾಗುತ್ತದೆ.
ಈ ಅನಿಯಮಿತ ರಜೆಯನ್ನು ನಿಘಂಟುವನ್ನು ನೋಡುವ ಕ್ರಮ ಹೇಗೆ ಎನ್ನುವುದನ್ನು ಮಕ್ಕಳಿಗೆ ಕಲಿಸುವ ಸದ್ಸಮಯವನ್ನಾಗಿಸಬಹುದು. ನೋಡುವ ಪ್ರಕ್ರಿಯೆಯಲ್ಲಿ ಹೊಸ ಹೊಸ ಪದಗಳ ಪರಿಚಯವೂ ಆದಂತಾಗುತ್ತದೆ. ದಿನಕ್ಕೊಂದು ಪದ ಕಲಿಯುವಿಕೆ. ಅಥವಾ ಒಂದು ಪದಕ್ಕಿರುವ ಬೇರೆ ಬೇರೆ ಅರ್ಥಗಳು, ಸಮಾನಾಂತರ ಪದಗಳು, ಪದಬಂಧ ಇತ್ಯಾದಿಗಳನ್ನು ಮಾಡಿಸಬಹುದು.
ಪೇಪರ್ ಆರ್ಟ್ ಮಾಡುವುದು, ಸಣ್ಣ ಪುಟ್ಟ ರೆಪೇರಿ ಕೆಲಸಗಳನ್ನು ಮಾಡಿಸುವುದು ಪ್ರಯೋಜನಕಾರಿ. ಇದರಿಂದಾಗಿ ಹೊಸ ಹೊಸ ಯೋಚನೆಗಳನ್ನು ಮಕ್ಕಳು ಅನುಭವಿಸಲು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ಸಹಕಾರಿಯಾಗುತ್ತದೆ.
ಮನೆಯ ಸನಿಹವೇ ಅಂಗಡಿಗಳಿದ್ದಲ್ಲಿ ತರಕಾರಿ ಹಣ್ಣು ದಿನಸಿಯನ್ನು ಕೊಳ್ಳಲು ಮಕ್ಕಳನ್ನು ಕರೆದೊಯ್ಯುವುದರಿಂದ ನೈಜತೆಯ ಅರಿವು ಬರುತ್ತದೆ. ಅದರ ಬೆಲೆ ತಿಳಿಯುವುದರ ಜೊತೆಗೆ ಮನೆಯ ಅವಶ್ಯಕತೆಗಳ ಅರಿವು ಮೂಡಿಸಿದಂತಾಗುತ್ತದೆ.
ಹೊಸ ಹೊಸ ಬರವಣಿಗೆಗಳಿಗೆ ಪ್ರೇರಣೆ ನೀಡುವುದು, ಪಾಲಕರು ಜೊತೆಗೂಡಿ ಮಕ್ಕಳಿಗೆ ಹೊಸ ಬರಹಗಳನ್ನು ರೂಪಿಸುವುದು. ಹಸ್ತ ಪ್ರತಿಗಳನ್ನು ತಯಾರಿಸುವುದು. ಕಥೆ ಕವನಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸುವುದು. ಇಂಥವುಗಳನ್ನು ಮಾಡಲು ಇದು ಸಕಾಲ. ಮಕ್ಕಳೊಂದಿಗಿರುವಾಗ ಗಾದೆಗಳು, ಅವುಗಳ ಅರ್ಥಗಳು, ಒಗಟನ್ನು ಬಿಡಿಸುವುದೇ ಮುಂತಾದವುದಗಳನ್ನು ಕಲಿಸಬಹುದು.
ನಮ್ಮ ಮಕ್ಕಳೇ ನಮ್ಮ ಬಲ, ಧೈರ್ಯ ಮತ್ತು ಅವರ ಉಜ್ವಲ ಭವಿಷ್ಯವೇ ನಮ್ಮ ಧ್ಯೇಯ. ಹಾಗಾಗಿ ಯಾವುದನ್ನೂ ಮಕ್ಕಳಿಗೆ ಉಪದೇಶ ಮಾಡಬೇಕಿಲ್ಲ. ನಾವು ಕೆಲಸ ಮಾಡುವಾಗ ಮಕ್ಕಳನ್ನು ಜೊತೆಯಲ್ಲಿ ಇರಿಸಿಕೊಂಡರೆ, ತೊಡಗಿಸಿಕೊಂಡರೆ ತಾವೇ ತಾವಾಗಿ ಕಲಿಯುತ್ತಾರೆ.  ಬಹುಮುಖ್ಯವಾದ ಅಂಶವೆಂದರೆ ಇಂಥ ಎಲ್ಲ ಕ್ರಿಯೆಗಳು ತಂದೆ–ತಾಯಿ, ಅಜ್ಜ–ಅಜ್ಜಿಯಂದಿರೊಂದಿಗೆ ಮಕ್ಕಳ ಒಡನಾಟ, ಆತ್ಮೀಯತೆ, ಪ್ರೀತಿಯನ್ನು ಮತ್ತಷ್ಟು ಬಲಪಡಿಸುತ್ತವೆ.
ಮಳೆಯ ರಜೆಯಾದರೂ ಜಾಡ್ಯ ತರಿಸುವ ಮೊದಲು ನಾವು ಹೊಸತನಕ್ಕೆ ತೆರೆದುಕೊಳ್ಳುವ ಯೋಜನೆಯನ್ನು ಮಾಡಿದರೆ, ಮಕ್ಕಳು ನವೊಲ್ಲಾಸದ ಜೊತೆಗೆ ರಜಾದ ಕಹಿ ನೆನಪುಗಳನ್ನು ಮರೆತು ಸವಿಯ ಬುತ್ತಿಯನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".