329
ಬಹುತೇಕ ಮಕ್ಕಳಿಗೆ ಹಟದ ಸ್ವಭಾವ ಇರುತ್ತದೆ. ಹೆತ್ತವರು ಹೇಳಿದಂತೆ ಕೇಳುವುದಿಲ್ಲ. ಊಟ ತಿಂಡಿ ವಿಚಾರದಲ್ಲಿ ಇದು ಬೇಕು, ಅದು ಬೇಡ ಎಂದು ಹಟ ಹಿಡಿಯುತ್ತಾರೆ. ಇನ್ನು ಹೋಂ ವರ್ಕ್ ವಿಚಾರ ಬಂದಾಗ ಕೇಳೋದೇ ಬೇಡ. ಒಂದು ಸಾಲು ಬರೆಯಲೂ ಬಹಳ ಹಟ ಮಾಡುತ್ತಾರೆ. ಹೋಂ ವರ್ಕ್ ಮಾಡಿಸುವಂತಿಲ್ಲ, ಬಿಡುವಂತಿಲ್ಲ. ಅವನ್ನು ಸಮಾಧಾನ ಮಾಡಿ, ಪುಸಲಾಯಿಸಿ ಬರೆಸುವಷ್ಟರಲ್ಲಿ ಹೆತ್ತವರಿಗೆ ಏಳು ಹಂದದ್ದು ಆಗಿರುತ್ತದೆ.
ಮನೆಯೇ ಮಗುವಿಗೆ ಮೊದಲ ಪಾಠಶಾಲೆ. ಇಲ್ಲಿಂದ ಆರಂಭವಾಗುವ ಕಲಿಕೆ ಶಾಲೆಗೆ ಹೋಗುತ್ತಲೇ ವಿಸ್ತಾರಗೊಳ್ಳುತ್ತದೆ. ತಮ್ಮ ಮಗು ಶಾಲೆಯಲ್ಲಿ ಉತ್ತಮ ಶಿಕ್ಷಣ ಪಡೆಯಬೇಕು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಯಾವಾಗಲು ಮುಂದಿರಬೇಕು ಎನ್ನುವುದು ಪ್ರತಿಯೋಬ್ಬ ಪೋಷಕರ ಆಶಯ ಮತ್ತು ಕನಸಾಗಿರುತ್ತದೆ.
ಅದಕ್ಕಾಗಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಜವಾಬ್ದಾರಿ ಮುಗಿಯುವುದಿಲ್ಲ. ಪೋಷಕರ ಹೊಣೆಗಾರಿಕೆ ಆರಂಭವಾಗುವುದೇ ಈಗ. ಮಗು ಶಾಲೆಯಲ್ಲಿ ಮುಂದುವರೆಯ ಬೇಕೆಂದರೆ ಶಿಕ್ಷಕರಷ್ಟೇ ಪೋಷಕರ ಪಾತ್ರವೂ ಮಹತ್ವದಾಗಿದೆ. ಇದನ್ನು ಅರಿತರೆ ಮಗುವಿನ ಸರ್ವತೋಮುಖ ಬೆಳೆವಣಿಗೆಗೆ ನಾಂದಿ ಹಾಡಿದಂತೆ. ಮಕ್ಕಳ ಹೋಂಮ್ ವರ್ಕ ಬಗ್ಗೆ ಪಾಲಕರ ಗಮನ ಅತ್ಯಗತ್ಯ. ಹಟ ಹಿಡಿದು ಕುಳ್ಳುವ ಮಕ್ಕಳನ್ನು ಸಂಬಾಳಿಸಿ ಅಭ್ಯಾಸದಲ್ಲಿ ತೊಡಗಿಸುವ ಪ್ರಯತ್ನದಲ್ಲಿ ಹಲವು ಮೈಲುಗಲ್ಲುಗಳು ಇದೆ.
* ಹೋಂ ವರ್ಕ್ ಪ್ಲಾನ್ ಸೆಟ್ ಮಾಡಿ.
ಮಕ್ಕಳಿಗೆ ಏನು ಹೋಂ ವರ್ಕ್ ಕೊಟ್ಟಿದ್ದಾರೆ ಅನ್ನೋದನ್ನು ಮೊದಲು ನೀವು ಅರ್ಥ ಮಾಡಿಕೊಳ್ಳಿ. ಒಂದು ಪುಸ್ತಕದಲ್ಲಿ ಎಲ್ಲವನ್ನೂ ನೋಟ್ ಮಾಡಿಕೊಳ್ಳಿ. ಅನುಮಾನ ಇದ್ದಲ್ಲಿ ನಿಮ್ಮ ಮಕ್ಕಳ ಟೀಚರ್‌ಗಳಿಗೆ ಕರೆ ಮಾಡಿ ತಿಳಿದುಕೊಳ್ಳಿ. ಮಕ್ಕಳು ಮನೆಗೆ ಬರುವಷ್ಟರಲ್ಲಿ ನಿಮ್ಮ ಮನೆ ಕೆಲಸ ಮುಗಿದಿರಲಿ. ಅವರು ಬಂದ ಕೂಡಲೇ ಹೋಂ ವರ್ಕ್ ಶುರು ಮಾಡಿಸಬೇಡಿ, ಮನೆಗೆ ಬಂದ ನಂತರ ಮೊದಲು ಫ್ರೆಶ್ ಅಪ್ ಆಗಲಿ. ನಂತರ ಸ್ನಾಕ್ಸ್ ಕೊಡಿ, ಅವರೊಂದಿಗೆ ಸ್ವಲ್ಪ ಸಮಯ ಕಾಲ ಕಳೆಯಿರಿ. ನಂತರವಷ್ಟೇ ಹೋಂ ವರ್ಕ್ ಶುರು ಮಾಡಿಸಿ, ತಪ್ಪು ಮಾಡಿದಾಗ ಬೈಯ್ಯದೆ ನಗುತ್ತಲೇ ಅವರ ತಪ್ಪನ್ನು ತಿದ್ದಿ.
* ಮನೆಯಲ್ಲಿ ನಿಗದಿತ ಸ್ಥಳದಲ್ಲಿ ಕುಳಿತುಕೊಳ್ಳಿರಿ.
ಕಿಚನ್, ದೇವರಮನೆ ಎಲ್ಲೆಂದರಲ್ಲಿ ಮಕ್ಕಳಿಗೆ ಹೋಂ ವರ್ಕ್ ಮಾಡಿಸಬೇಡಿ. ಅವರು ಖುಷಿಯಿಂದ ಹೋಂ ವರ್ಕ್ ಮಾಡುವಂತ ಸ್ಥಳವನ್ನು ನೀವೇ ಗುರುತಿಸಿ. ನೀವು ಟಿವಿ ನೋಡುತ್ತಾ, ಅವರಿಗೂ ಟಿವಿ ತೋರಿಸುತ್ತಾ ಅಥವಾ ಮೊಬೈಲ್ ನೋಡುತ್ತಾ ಮಕ್ಕಳಿಗೆ ಹೋಂ ವರ್ಕ್ ಮಾಡಿಸುವುದು ಬಹಳ ತಪ್ಪು. ಮಕ್ಕಳಿಗೆ ಹೋಂ ವರ್ಕ್ ಮಾಡಿಸುವಾಗ ವಾತಾವರಣ ಶಾಂತಿಯಿಂದ ಇರಲಿ. ಟಿವಿ ಆನ್ ಮಾಡಲೇಬೇಡಿ. ನಿಮ್ಮ ಖುಷಿಗಿಂತ ಮಕ್ಕಳ ವಿದ್ಯಾಭ್ಯಾಸ ಮುಖ್ಯ ಅನ್ನೋದು ಗಮನದಲ್ಲಿ ಇರಲಿ. ಇಲ್ಲದಿದ್ದರೆ ನಿಮ್ಮ ಮಕ್ಕಳಿಗೆ ಹೋಂ ವರ್ಕ್ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ.
* ಮನಸ್ಥಿತಿ ಗಮನಿಸಿ.
ಹೋಂ ವರ್ಕ್ ಮಾಡಿಸುವ ಮುನ್ನ ಮಕ್ಕಳ ಮನಸ್ಥಿತಿ ಗಮನಿಸಿ, ಯಾವುದೋ ವಿಚಾರಕ್ಕೆ ಅವರು ಡಿಸ್ಟರ್ಬ್ ಆಗಿದ್ದಾರೆ ಎಂದರೆ ಅವರಿಗೆ ಕೂಡಲೇ ಹೋಂ ವರ್ಕ್ ಮಾಡುವಂತೆ ತಾಕೀತು ಮಾಡಬೇಡಿ. ಅವರ ಜೊತೆ ಫನ್ನಿಯಾಗಿ ಮಾತನಾಡಿ, ಇಂದು ಕ್ಲಾಸ್‌ನಲ್ಲಿ ಏನೆಲ್ಲಾ ಆಕ್ಟಿವಿಟಿ ಮಾಡಿದರು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಅವರ ಮೂಡ್ ಬದಲಿಸಲು ಪ್ರಯತ್ನಿಸಿ. ಅವರು ಮಾಡುವ ಹೋಂ ವರ್ಕ್‌ಕ್ಕೆ ತಕ್ಕಂತೆ ಏನಾದರೂ ಉದಾಹರಣೆ ಕೊಡುತ್ತಾ ಕೆಲಸ ಮಾಡಿಸಿ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಕ್ರಮ ಅನುಸರಿಸಿದರೆ ಮಾತ್ರವೇ ಅವರು ಕಲಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.
* ಒತ್ತಡ ಕಡಿಮೆ ಇರಲಿ.
ಕೆಲವೊಂದು ವಿಚಾರಗಳು ಮಕ್ಕಳಿಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಬಲವಂತವಾಗಿ ಅವರಿಗೆ ತಲೆಗೆ ಎಲ್ಲವನ್ನೂ ಸೇರಿಸಬೇಡಿ. ಈ ವಿಚಾರವಾಗಿ ಅವರ ಶಿಕ್ಷಕರ ಜೊತೆಯೂ ಮಾತನಾಡಿ, ಸಾಧ್ಯವಾದರೆ ಮರು ದಿನ ಅಥವಾ ರಜಾ ದಿನಗಳಲ್ಲಿ ಆ ಹೋಂ ವರ್ಕ್ ಮುಗಿಸಲು ಪ್ರಯತ್ನಿಸಿ.
ಇವುಗಳ ಜೊತೆಗೆ ಇತರ ಕ್ರಮಗಳನ್ನೂ ಅನುಸರಿಸುವ ಮೂಲಕ ಮಕ್ಕಳ ಹೋಮ್ ವರ್ಕ ಬಗ್ಗೆ ತಲೆದೋರುವ ಸಮಸ್ಯೆಯನ್ನು ಸಲೀಸಾಗಿ ದಾಟಬಹುದು. ಅವುಗಳೆಂದರೆ
೧) ಶಿಕ್ಷಕರನ್ನು ಭೇಟಿಯಾಗಿ ನಿಮ್ಮ ಮಕ್ಕಳ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ಮಕ್ಕಳಿಗೆ ನಿಜವಾಗಿ ಎಷ್ಟು ಹೋಮ್ವರ್ಕ್ ನೀಡುತ್ತಿದ್ದಾರೆ ಎಂದು ತಿಳಿದುಕೊಳ್ಳಿ. ಅವರ ಹೋಮ್ವರ್ಕ್ ನೀತಿಗಳ ಬಗ್ಗೆ ಮತ್ತು ನೀವು ಹೇಗೆ ಅದರಲ್ಲಿ ಭಾಗಿಯಾಗಬೇಕು ಎಂದು ಮೊದಲು ತಿಳಿದುಕೊಳ್ಳಿ.
೨) ನಿಮ್ಮ ಮಕ್ಕಳು ಹೋಮ್ವರ್ಕ್ ಮಾಡುವ ಸಮಯದಲ್ಲಿ ನೀವು ಅವರೊಟ್ಟಿಗೆ ಕುಳಿತುಕೊಳ್ಳಿ ಅಥವಾ ಅದೇ ಕೋಣೆಯಲ್ಲಿ ನಿಮ್ಮ ಮನೆಗೆಲಸ ಮಾಡಿಕೊಳ್ಳಿ. ನೀವು ಸಹ ಆ ಸಮಯದಲ್ಲಿ ಟಿ.ವಿ ಅಥವಾ ಮೊಬೈಲ್ ಬಳಕೆ ಮಾಡುವುದನ್ನು ನಿಲ್ಲಿಸಿ.
೩) ಅಧ್ಯಯನದ ಸಮಯವನ್ನು ನಿಗದಿಪಡಿಸಿ. ಕೆಲವು ಮಕ್ಕಳು ಆಟ ಆಡಿ ಬಂದ ನಂತರ ಹೋಮ್ವರ್ಕ್ ಮಾಡಲು ತಯಾರಾಗುತ್ತಾರೆ. ಇಲ್ಲವಾದರೆ ಆಟವಾಡುವ ಕಡೆಯೇ ತಮ್ಮ ಗಮನ ಇಟ್ಟುಕೊಂಡಿರುತ್ತಾರೆ ಎಂಬುದು ಗಮನಕ್ಕಿರಲಿ.
೪) ಕೆಲವೊಮ್ಮೆ ಮುಗಿಸಲಾರದಷ್ಟು ಬರೆಯಲು ಕೊಟ್ಟಿರಬಹುದು ಅಂಥಹ ಸಮಯದಲ್ಲಿ ನೀವು ಅವರಿಗೆ ಸಹಾಯ ಮಾಡಿ. ರಾತ್ರಿ ಸಮಯದಲ್ಲೂ ಒಂದು ವೇಳಾಪಟ್ಟಿ ಸಿದ್ಧಪಡಿಸಿ. ಬೆಳಿಗ್ಗೆಯೂ ಸ್ವಲ್ಪ ಸಮಯ ಬರವಣಿಗೆಗೆ ಮೀಸಲಿಡಿ.
೫) ಕೆಲಸದ ವೇಳಾಪಟ್ಟಿಯನ್ನು ರಚಿಸಿ ಮತ್ತು ಸಾಧ್ಯವಾದರೆ ಪ್ರತಿ ಗಂಟೆಗೆ 15 ನಿಮಿಷಗಳ ವಿರಾಮ ಸಮಯ ನೀಡುವಂತೆ ಮಾಡಿ. ಹೋಮ್ವರ್ಕ್ ಮುಗಿಸಿದ ನಂತರ ಅವರಿಗಿಷ್ಟವಾದ ತಿಂಡಿ ನೀಡಿ, ಅಥವಾ ಅವರೊಂದಿಗೆ ಸಮಯ ಕಳೆಯಿರಿ.
೬) ಕಾರ್ಯಯೋಜನೆಗಳು, ರಸಪ್ರಶ್ನೆಗಳು ಮತ್ತು ಪರೀಕ್ಷೆಗಳ ಬಗ್ಗೆ ಕೇಳಿ. ಪ್ರೋತ್ಸಾಹವನ್ನು ನೀಡಿ ನಿಮ್ಮ ಮಕ್ಕಳಿಗೆ ಆಗಾಗ ಪ್ರಶ್ನೆ ಕೇಳಿ.
ಈ ಎಲ್ಲಾ ಕ್ರಮಗಳನ್ನು ಅನುಸರಿಸುವ ಮೂಲಕ ಮಕ್ಕಳ ಹೋಮ್ವರ್ಕ ರಾಗವನ್ನು ಬದಲಾಯಿಸಲು ನೀವು ಸಮರ್ಥರಾಗುತ್ತೀರಿ ಎಂಬುದು ನಮ್ಮ ಭಾವನೆ.