277
ಮಕ್ಕಳು ಸಣ್ಣ ಪುಟ್ಟ ತಪ್ಪು ಮಾಡುವುದು ಸಾಮಾನ್ಯ ವಿಚಾರ ಅಂತಹ ಸಣ್ಣಪುಟ್ಟ ತಪ್ಪುಗಳನ್ನು ನಿರ್ಲಕ್ಷಿಸುವುದು ಅಥವಾ ಅವರ ತಪ್ಪುಗಳಿಗೆ ಅತಿಯಾಗಿ ಶಿಕ್ಷಿಸುವುದು ಪೋಷಕರು ಮಾಡುವ ಬಹುದೊಡ್ಡ ಪೋಷಕ ಸಮಾಜವನ್ನು ನಾವಿಂದು ಕಾಣುತ್ತಿದ್ದೇವೆ. ಹೀಗಾಗಿ ಏನನ್ನೂ ಅರಿಯದ ಮಕ್ಕಳ ಮೇಲೆ ಪೋಷಕರ ಅಜಾಗರೂಕತೆಯ ವರ್ತನೆಗಳು ಗಂಭೀರ ಪರಿಣಾಮವನ್ನು ಬೀರಬಹುದು. ಒಂದು ಹಂತದಲ್ಲಿ ಮಗು ಎಲ್ಲವನ್ನು ನಿಭಾಯಿಸಲು ಸಾಧ್ಯವಾದರೂ, ಹಂತ ಹಂತವಾಗಿ ಗಮನಿಸುತ್ತಾ ಸಾಗಿದರೆ, ಕೊನೆಗೊಮ್ಮೆ ದೊಡ್ಡವರ ದೊಡ್ಡತನಕ್ಕೆ ಮಗು ದಾರಿ ಕಾಣದ ಸ್ಥಿತಿಗೆ ತಲುಪಿ ಬಿಡಬಹುದು.
ಇವುಗಳ ಜೊತೆಗೆ ಪೋಷಕರ ವರ್ತನೆಯ ತೊಂದರೆಗಳು ಮಕ್ಕಳ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳೂ ಇರುತ್ತದೆ. ಮಗುವಿನ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಬಲಪಡಿಸುವುದು ಪೋಷಕರ ಕರ್ತವ್ಯವಾಗಿದ್ದು, ಅದಕ್ಕೆ ಸಂಬಂಧಿಸಿದಂತೆಯೇ ಪೋಷಕರು ತಮ್ಮ ಕ್ರಿಯಾ ಚಟುವಟಿಕೆಗಳನ್ನು ನಡೆಸುವುದು ಅನಿವಾರ್ಯವೂ ಕೂಡಾ. ಅವುಗಳ ಕುರಿತಾದ ಚಿಂತನಾ ಗುಚ್ಚ ಇಲ್ಲಿದೆ.
ನಿಧಾನವಾಗಿ ಕಲಿಯಲು ಬಿಡುವುದಿಲ್ಲ.
ಪುಟ್ಟ ಮಕ್ಕಳು ಕೆಲವೊಂದು ವಿಷಯಗಳಿಗೆ ನಿಧಾನಿಸುತ್ತಾರೆ. ಕೆಲವರು ವೇಗವಾಗಿ ಕೆಲಸಮಾಡುತ್ತಾರೆ. ಇದೆರಡೂ ಸ್ವಾಭಾವಿಕವೇ ಆದರೂ ಪಾಲಕರಾದ ನಾವು ನಿಧಾನಿಸುವ ಮಗುವನ್ನು ನೋಡುವ ರೀತಿಯೇ ಬೇರೆ. ನೀನು ಯಾವಾಗಲೂ ಹೀಗೆ, ಎಂದಿಗೂ ಹೀಗೆ ಮಾಡುತ್ತೀ ಎಂದು ವಿಪರೀತವಾಗಿ ಹೇಳುತ್ತಿದ್ದರೆ ಅದು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಇದರಿಂದ ಅವರು ತಮ್ಮ ಸಾಮರ್ಥ್ಯದ ಬಗ್ಗೆ ನಕಾರಾತ್ಮಕ ಮನಸ್ಥಿತಿ ಬೆಳೆಸಿಕೊಳ್ಳಲು ಕಾರಣವಾಗುವುದು. ಇದರಿಂದ ಖನ್ನತೆ, ಅಸಮಾಧಾನ ಉಂಟಾಗಬಹುದು.
ಇನ್ನು ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ದಡ್ಡ, ಹೆಡ್ಡ, ಸೋಂಬೇರಿ, ಕಳ್ಳ ಎಂಬೆಲ್ಲಾ ಸೂಕ್ತವಲ್ಲದ ಹೆಸರಿನಿಂದ ಕರೆಯುತ್ತಾರೆ. ಇದು ಸಾಮಾನ್ಯ ಎಂದೇ ಪೋಷಕರು ಭಾವಿಸಬಹುದು. ಆದರೆ ಮಗು ತನ್ನ ಮನದಲ್ಲಿ ಅದನ್ನು ತನ್ನ ಸಾಮರ್ಥ್ಯಕ್ಕೆ ತೋರುವ ಅಗೌರವ ಎಂದೇ ಭಾವಿಸುತ್ತದೆ. ಇದರಿಂದ ಅದು ಪ್ರತಿಯೊಂದು ಕಾರ್ಯದಲ್ಲೂ ಹಿನ್ನಡೆ ಸಾಧಿಸಬಹುದು. ಅವರಲ್ಲಿ ಆತಂಕದ ವಾತಾವರಣ ಸೃಷ್ಟಿಸಬಹುದು ಎಂಬುದು ಪಾಲಕರ ಗಮನಕ್ಕಿರಲಿ.
ರೇಗಾಡಿದರೇನು ಉಪಯೋಗ?
ಮಕ್ಕಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂಬುದೊಂದೇ ಉದ್ದೇಶದಿಂದ ಚಿಂತನೆ ಮಾಡುವ ಪಾಲಕರು, ಮಕ್ಕಳ ಮೇಲೆ ಪದೇಪದೇ ಜೋರಾದ ಧ್ವನಿಯಲ್ಲಿ ರೇಗಾಡುವುದನ್ನು ಕಾಣುತ್ತೇವೆ. ಯಾವ ಕಾಲಕ್ಕೆ ಯಾವ ಪ್ರಕ್ರಿಯೆಗೆ ಸಂಬಂಧಪಟ್ಟು ರೇಗಾಡುತ್ತಿದ್ದೇವೆ ಎಂಬುದನ್ನು ಮಗು ಸೂಕ್ಷ್ಮವಾಗಿ ಗಮನಿಸುತ್ತದೆ. ಈ ರೀತಿಯಾಗಿ ರೇಗಾಡಿದರೆ ಮಗುವಿನ ಭಯಕ್ಕೆ ಇದು ಕಾರಣವಾಗುವುದು. ಅಗತ್ಯವಿದ್ದಾಗ ಮಾತ್ರ ಅವರ ಮೇಲೆ ರೇಗಾಡಿ. ಆದರೆ ನಿಮ್ಮ ಮುಖ ಭಾವ, ದೇಹ ಭಾಷೆಯನ್ನು ಅರಿಯಲು ಅವರಿಗೆ ಸಮಯಕೊಡಿ. ಯಾವುದೇ ಕಾರಣಕ್ಕೂ ಅವರಲ್ಲಿ ಭಯದ ವಾತಾವರಣ ಸೃಷ್ಟಿಸಬೇಡಿ.
ಮಕ್ಕಳಿಗೂ ವೈಯಕ್ತಿಕ ವಿಚಾರಗಳಿದೆ.
ಮಗು ಇನ್ನೂ ಚಿಕ್ಕದು, ಎಲ್ಲವೂ ನಾವಂದುಕೊಂಡಂತೆ ಆಗಬೇಕು ಎಂದು ಪಾಲಕರು ವರ್ತಿಸುತ್ತಾರೆ. ಇದೇ ಕಾರಣಕ್ಕೆ ಮಗುವಿನ ವೈಯಕ್ತಿಕ ಬದುಕನ್ನು ಗೌರವಿಸುವ ಅಗತ್ಯವನ್ನು ಪೋಷಕರು ಹೆಚ್ಚಾಗಿ ಕಡೆಗಣಿಸುತ್ತಾರೆ. ಮಕ್ಕಳಿಗೂ ಅವರ ಆಲೋಚನೆಗಳನ್ನು ಪ್ರತಿಬಿಂಬಿಸಲು, ಸಂಗ್ರಹಿಸಲು ಸೂಕ್ತ ಸಮಯ ಬೇಕಾಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ತಪ್ಪುಗಳನ್ನು ಮಾಡುತ್ತಾರೆ ಮತ್ತು ವಿಫಲರಾಗುತ್ತದೆ. ಆದರೆ ಅದು ಪೂರ್ಣ ನಿಲುಗಡೆಯಲ್ಲ. ಮಕ್ಕಳು ಎಲ್ಲರಂತೆ ತಮ್ಮ ತಪ್ಪುಗಳಿಂದ ಕಲಿಯುತ್ತಾರೆ. ನಿರ್ಧಾರ ತೆಗೆದುಕೊಳ್ಳಲು ಬಿಡಿ. ಇದರಿಂದ ಹೆಚ್ಚು ಆತ್ಮವಿಶ್ವಾಸ ಮತ್ತು ಜಾಗರೂಕರಾಗುತ್ತಾರೆ. ಮಕ್ಕಳಿಗೆ ವೈಯಕ್ತಿಕ ಸಮಯವನ್ನು ಆನಂದಿಸಲು ಅನುಮತಿಸಿ. ಅವರ ನಿರ್ಧಾರ ಸರಿಯಾಗಿಲ್ಲದಿದ್ದರೆ ಅದನ್ನು ಸ್ಪಷ್ಟ ರೂಪದಲ್ಲಿ ತಿಳಿಸಿ.
ಪ್ರೀತಿ, ಕಾಳಜಿಯ ಅರಿವಿರಲಿ
ಮಕ್ಕಳ ಚಟುವಟಿಕೆಗಳ ಕುರಿತು ಸುಮ್ಮನಿರುವುದು, ಭಾವನೆಗಳನ್ನು ವ್ಯಕ್ತಪಡಿಸದೇ ಇರುವುದು ಮಗುವಿಗೆ ನಿಯಂತ್ರಣ ಮತ್ತು ಅಸ್ಥಿರ ವಾತಾವರಣ ಸೃಷ್ಟಿಸುತ್ತದೆ ಎಂಬುದನ್ನು ಮರೆಯದಿರಿ.
ಹೋಲಿಸುವುದು ತಪ್ಪು.
ಪ್ರತಿಯೊಂದು ಮಗುವಿಗೆ ತನ್ನದೇ ಆದ ಸಾಮರ್ಥ್ಯವಿರುವುದು. ಹೀಗಾಗಿ ಬೇರೆ ಮಕ್ಕಳೊಂದಿಗೆ ಅವರನ್ನು ಹೋಲಿಸುವುದು ಸರಿಯಲ್ಲ. ಅವರಲ್ಲಿರುವ ಜ್ಞಾನ, ಕೌಶಲಕ್ಕೆ ಪ್ರೋತ್ಸಾಹ ಕೊಡಬೇಕು. ಒಂದು ವೇಳೆ ಇತರ ಮಕ್ಕಳೊಂದಿಗೆ ಅವರನ್ನು ನಿರಂತರ ಹೋಲಿಕೆ ಮಾಡಿದರೆ ಮಗುವ ಹಂತ ಹಂತವಾಗಿ ಆತ್ಮವಿಶ್ವಾಸ ಕುಗ್ಗಿಸಿಕೊಳ್ಳುತ್ತಾ ಸಾಗುತ್ತದೆ.
ಶಿಸ್ತು ಕಲಿಸಲು ಹೋಗಿ ಸಮಸ್ಯೆ ತಂದುಕೊಂಡವರು ಎಷ್ಟು ಜನ ಇಲ್ಲ ಹೇಳಿ ಪೋಷಕರು ಮಕ್ಕಳಿಗೆ ಶಿಸ್ತು ಕಲಿಸುವುದು ಒಂದು ಅದ್ಭುತ ಸಂಗತಿಯಾಗಿದೆ. ಆದರೆ ಇದರಲ್ಲಿ ಮಕ್ಕಳ ಮನಸ್ಸನ್ನು ದುರ್ಬಲಗೊಳಿಸುವುದು ಸಾಧ್ಯವಿದೆ. ಸಣ್ಣ ತಪ್ಪುಗಳಿಗೆ ಅವರನ್ನು ದೂಷಿಸುವುದು, ಶಿಕ್ಷಿಸುವುದು, ಎಲ್ಲರ ಮುಂದೆ ಅವಮಾನ ಮಾಡುವುದರಿಂದ ಅವರು ತಮ್ಮನ್ನು ತಾವು ನಿಷ್ಪ್ರಯೋಜಕ, ಶಕ್ತಿಹೀನ ಎಂದು ಭಾವಿಸಬಹುದು.
ಹೀಗಾಗಿ ಪಾಲಕರು ದೊಡ್ಡತನವನ್ನು ಹೊಂದಿರಬೇಕೇ ಹೊರತು, ಸಣ್ಣವರನ್ನು ತಿದ್ದುವ ಭರದಲ್ಲಿ ನಾವು ಸಣ್ಣತನ ಪ್ರದರ್ಶಿಸಿದರೆ, ಬೆಳೆದು ಸಿರಿಯಾಗಬೇಕಾದ ಮಗುವಿನ ಮನಸ್ಸು ದಿಕ್ಕು ಬದಲಿಸುವ ಅವಕಾಶಗಳನ್ನು ನಾವೇ ಕಲ್ಪಿಸಿ ಕೊಟ್ಟಂತಾಗುತ್ತದೆ.