ಆಕೆಯ ಹೆಸರು ದೀಪ್ತಿ, ತಂದೆ ವಿಘ್ನರಾಜ, ತಾಯಿ ಮಾಲಿನಿ. ಸಾಮಾನ್ಯ ಕುಟುಂಬ ವರ್ಗದಲ್ಲಿ ಹುಟ್ಟಿದ ಈಕೆ, ಹುಟ್ಟುವಾಗಲೇ ಎಲ್ಲರನ್ನೂ ತನ್ನತ್ತ ಸೆಳೆಯುವ ಆ ಸೌಂದರ್ಯವನ್ನು ತನ್ನೊಳಗೆ ಇಟ್ಟುಕೊಂಡು ಬಂದವಳು. ಬೆಳೆಯುತ್ತಿದ್ದಂತೆ ಮನೆಯಲ್ಲಿ ಅಚ್ಚುಮೆಚ್ಚಿನ ಬಾಲಕಿಯಾಗಿ, ಊರವರ ಮನೆಮಗಳಂತೆ ಬೆಳೆದವಳು. ತಂದೆ ತಾಯಿ ಈಕೆಯ ಬಗ್ಗೆ ಹತ್ತಾರು ಕನಸುಗಳನ್ನು ಕಟ್ಟಿ ತಮ್ಮ ಜೀವನದ ಮುಂದಿನ ನೆಲೆ ಈಕೆಯೇ ಎಂಬುದಾಗಿ ನಿರ್ಧರಿಸಿದ್ದರು.
ದುರ್ದೈವ ಎಂಬAತೆ ನಾಲ್ಕು ವರ್ಷದ ಪುಟ್ಟ ಬಾಲಕಿಗೆ ಯಾರಿಗೂ ತಿಳಿಯದ ಖಾಯಿಲೆಯೊಂದು ಕಾಣಿಸಿಕೊಂಡಿತು. ಇದ್ದಕ್ಕಿದ್ದಂತೆ ಕಾಲುಗಳ ಸೆಳೆತ ಪ್ರಾರಂಭವಾಯಿತು. ದಿನೇ ದಿನೇ ಈ ನೋವು ಹೆಚ್ಚಾಗುತ್ತಾ ನಿಧಾನಕ್ಕೆ ಕಾಲಿನ ಬೆಳವಣಿಗೆಯೇ ನಿಂತು ಹೋಯಿತು. ದೇಹದ ಇತರ ಅಂಗಗಳು ಬೆಳೆಯುತ್ತಾ ಹೋದರು ಕಾಲು ಮಾತ್ರ ಬೆಳವಣಿಗೆ ಕಾಣಲೇ ಇಲ್ಲ. ಮನೆಯ ತುಂಬಾ ಓಡಾಡಿಕೊಂಡಿದ್ದ ಬಾಲಕಿ, ಊರಿನವರ ಜೊತೆಗೆ ಚಟಪಟ ಮಾತನಾಡುತ್ತಿದ್ದ ಚಾಲಾಕಿ ಬಾಲಕಿ, ಮನೆಯ ಕೋಣೆಯಲ್ಲಿ ಒಂಟಿಯಾಗಬೇಕಾಗಿಬAತು.

ತಂದೆ ವಿಘ್ನರಾಜ ಮಗಳನ್ನು ಚಿಕಿತ್ಸೆಗಾಗಿ ಕರೆದೊಯ್ಯದ ಊರುಗಳಿಲ್ಲ. ತೋರಿಸದ ವೈದ್ಯರಿಲ್ಲ. ಆದರೆ ಕಾಯಿಲೆ ಬಗ್ಗೆ ಯಾರೂ ನಿಖರವಾಗಿ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ತಾಯಿಯಾದರೋ ಮಗಳಿಗಾಗಿ ಹರಕೆ ಹೊತ್ತು ದೇವಾಲಯ ಮಠ ಮಾನ್ಯಗಳನ್ನು ಸುತ್ತಿ, ಕಂಡ ಕಂಡ ಕಲ್ಲಿಗೆ ಪೂಜೆ ಮಾಡಿ ಪ್ರಸಾದ ತಂದು ಮಗಳು ಮೊದಲಿನಂತಾಗುವುದನ್ನು ಕಾಣಬೇಕೆಂಬ ಕನಸಿನಲ್ಲಿಯೇ ಉಳಿದು ಬಿಟ್ಟರು. ಕೊನೆ ಕೊನೆಗೆ ಏನಾದರೂ ಮಾಡಬಹುದು ಎಂದು ಭರವಸೆಯನ್ನೂ ಕಳೆದುಕೊಂಡರು.
ನಿತ್ಯ ಕಾಯಕ ಮಾಡಿ ಬದುಕಬೇಕಾದ ಅನಿವಾರ್ಯತೆಗೆ ಬಂದಿದ್ದ ತಂದೆ ತಾಯಿ, ಮಗಳ ಬಗ್ಗೆ ಏನು ಮಾಡಬೇಕೆಂದು ತೋಚದೆ ಕೈಚೆಲ್ಲಿದರು. ತಮ್ಮೂರಿನ ಪಕ್ಕದಲ್ಲಿರುವ ವಿಶೇಷ ಮಕ್ಕಳ ಶಾಲೆಗೆ ಈಕೆಯನ್ನು ಸೇರಿಸುವ ಮಾತುಕತೆ ಜೋರಾಗಿ ನಡೆದಿತ್ತು. ಊರಿನ ಹಿರಿಯರಾದ ಶಂಭು ಭಟ್ಟರು ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದರು. ಎಲ್ಲರಂತೆ ಬದುಕಬೇಕಿದ್ದ ದೀಪ್ತಿ ಬದುಕಿನ ಭರವಸೆ ಕಳೆದುಕೊಂಡಳು. ಆಗ ಆಕೆಗೆ ೬ ವರ್ಷ ವಯಸ್ಸು.
ನಿತ್ಯವೂ ಈ ಊರಿನಿಂದ ಪಕ್ಕದ ಊರಿಗೆ ಹೋಗಿ ತನ್ನ ಆಟೋರಿಕ್ಷಾ ನಡೆಸುತ್ತಿದ್ದ ಯೋಗೇಂದ್ರ ತನ್ನ ಆಟೋದಲ್ಲಿ ಈಕೆಯನ್ನು ಕರೆದುಕೊಂಡು ಹೋಗಿ ವಿಶೇಷ ಶಾಲೆಗೆ ಬಿಡುವ ಮಾತಿಗೆ ಒಪ್ಪಿಕೊಂಡರು. ಬೆಳಗಾಗುತ್ತಿದ್ದಂತೆ ದೀಪ್ತಿ ಮನೆಗೆ ಬರುತ್ತಿದ್ದ ಯೋಗೇಂದ್ರ, ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ವಿಶೇಷ ಶಾಲೆಯವರೆಗೆ ಹೋಗಿ ಆಕೆಯನ್ನು ಸೇರಿಸಿ, ಅಣ್ಣನೊಬ್ಬನಿದ್ದರೆ ಹೇಗೆ ಎಲ್ಲಾ ಕಾರ್ಯ ಮಾಡುತ್ತಿದ್ದನೋ ಅಂತೆಯೇ ಕಾಯಕ ಮಾಡಿದರು. ದೀಪ್ತಿಗೆ ಜೀವನದಲ್ಲಿ ಭ್ರಾತೃತ್ವ ಕಾಣಿಸಿದ್ದೂ ಇವರಲ್ಲಿಯೇ. ಇದೇ ಬಾಂಧವ್ಯ ಬೆಳೆಯುತ್ತಾ ಹೋಯಿತು.
ವಿಶೇಷ ಶಾಲೆಯಲ್ಲಾದರೋ ದೀಪ್ತಿಯ ಕಾಲುಗಳನ್ನು ಸರಿಪಡಿಸಲು ಕೆಲವೊಂದಿಷ್ಟು ವ್ಯಾಯಾಮಗಳನ್ನು ಮಾಡಿಸಲಾಯಿತು. ಆದರೆ ಪ್ರಯೋಜನವಾಗಿದ್ದು ಕಡಿಮೆ. ಇದಲ್ಲದೆ ಚುರುಕಾಗಿದ್ದ ಈಕೆ ಶಿಕ್ಷಣದಲ್ಲಿಯೂ ಮುಂದೆ ಬರಲಾರಂಭಿಸಿದಳು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಈಕೆಯೇ ಟಾಪರ್..!. ದಿನೇ ದಿನೇ ಬೆಳೆಯುತ್ತಿರುವ ಮಗಳನ್ನು ಕಂಡರೂ ಈಕೆಯ ಅಂಗ ವೈಕಲ್ಯತೆಯ ನೋವಿನ ಮಾತುಗಳೇ ಮನೆಯಲ್ಲಿ ಅನುರಣಿಸುತ್ತಿತ್ತು. ಆದರೆ ಆಟೋ ಚಾಲಕ ಯೋಗೇಂದ್ರ ಆಡುತ್ತಿದ್ದ ಮಾತುಗಳು ದೀಪ್ತಿಯ ಬಲ ಹೆಚ್ಚಿಸುತ್ತಿತ್ತು.
ಪಿ.ಯು ಮುಗಿಸಿದ ದೀಪ್ತಿಯ ಜೊತೆಗೆ ಮಾತನಾಡುತ್ತಾ, ಯೋಗೇಂದ್ರ ಹೀಗೆ ಹೇಳಿದ. ಸಾಕಷ್ಟು ಕಲಿತು ಬೇಕಷ್ಟು ಸಂಪಾದನೆ ಮಾಡುವ ಮನಸ್ಸು ಹಾಗೂ ಶಕ್ತಿ ನಿನಗಿದೆ. ಆದರೆ ಒಮ್ಮೆ ಯೋಚಿಸು ದೀಪ್ತಿ, ನಿನ್ನಂತೆ ಅಂಗವಿಕಲರಾದ ಅದೆಷ್ಟೋ ಮಕ್ಕಳು ಯಾರ ಬೆಂಬಲವಿಲ್ಲದೆ, ಕಡು ಕಷ್ಟದ ಜೀವನ ನಡೆಸುತ್ತಿದ್ದಾರೆ. ಅವರಿಗಾಗಿ ನೀನೇನು ಮಾಡುತ್ತಿದ್ದೀಯಾ ಎಂಬುದನ್ನು ಚಿಂತಿಸು? ಎಂದ. ಈ ಮಾತು ಆಕೆಗೆ ಹೊಸ ಪ್ರೇರಣೆ ನೀಡಿತು. ಹತ್ತಾರು ಜನರನ್ನು ಭೇಟಿಮಾಡಿ ತನ್ನ ಮನದ ಇಂಗಿತ ಹೇಳಿಕೊಂಡಳು. ತನ್ನ ಶಿಕ್ಷಣ ಮುಂದುವರಿಸುತ್ತಲೇ ಅಂಗವಿಕಲರ ಶಾಲೆಯೊಂದನ್ನು ಪ್ರಾರಂಭಿಸುವ ಕನಸು ನನಸಾಗಿಸಲು ಸಿದ್ಧತೆ ಮಾಡಿಕೊಂಡಳು. ತಾನು ಬೆಳೆದ ಅಂಗವಿಕಲರ ಶಾಲೆಗಿಂತ ವಿಭಿನ್ನವಾದ, ಪ್ರೇರಣಾದಾಯಿಯಾದ ಅಂಗವಿಕಲರ ಶಾಲೆಯನ್ನು ಪ್ರಾರಂಭಿಸಿದರು. ಕೆಲವೇ ವರ್ಷದಲ್ಲಿ ಹತ್ತಾರು ಅಂಗವಿಕಲರಿಗೆ ಆಶ್ರಯ ನೀಡಿದ್ದಳು ದೀಪ್ತಿ. ಸಂಸ್ಥೆ ನಡೆಸುವುದಕ್ಕೂ ಸಂಪನ್ಮೂಲಗಳ ಕೊರತೆ ಇರದಂತೆ ಯೋಗೇಂದ್ರ ಜೊತೆಗೆ ನಿಂತು ಬೆಂಬಲಿಸಿದ.
ನAತರದಲ್ಲಿ ಈಕೆಯ ಜೀವನ ಗಾಥೆ ಕೇಳುವಾಗಲೇ ಸತ್ಯದ ಅನಾವರಣವಾಗಿದ್ದು, ಮನೆಯಲ್ಲಿಯೂ ಈಕೆಗೆ ಓಡಾಟ ಸಾಧ್ಯವಿಲ್ಲ, ಹೇಗೆ ಬದುಕಿಯಾಳು ಎಂಬುದೇ ಮಾತಾದರೆ ಶಾಲೆಯಲ್ಲಿಯೂ, ಊರಲ್ಲಿಯೂ ಈಕೆ ಹೇಗೆ ಜೀವನ ಮಾಡಿಯಾಳು ಎಂಬುದೇ ಮಾತಾಗಿತ್ತು. ಆದರೆ ನಿತ್ಯವೂ ಪ್ರೇರಣೆ ನೀಡುತ್ತಿದ್ದವ ಆಟೋಚಾಲಕ ಯೋಗೇಂದ್ರ ಮಾತ್ರ. ಬೆಳಗ್ಗೆ ಶಾಲೆಗೆ ಬಿಡುವಾಗ, ಪುನಃ ಮನೆಗೆ ಕರೆತರುವಾಗ ಯೋಗೇಂದ್ರ ಈಕೆಗೆ ಧೈರ್ಯ ತುಂಬುತ್ತಿದ್ದ. ಬದುಕಿನ ಬೆಳಕಾಗಿ ಬಂದ ಯೋಗೇಂದ್ರ ಈಕೆಯ ಮೂಲಕ ಅನೇಕರ ಜೀವನ ಬೆಳೆಸಿದ ಎಂಬುದು ಗಮನಾರ್ಹ ಸಂಗತಿಯಾಯಿತು.
ಈ ಘಟನೆ ಗಮನಿಸಿದಾಗ ಅರಿವಾಗುವುದು, ಜೀವನದಲ್ಲಿ ಪ್ರೇರಣೆ ಬಹು ಮುಖ್ಯವಾದುದು. ಜೀವನದ ನೆಲೆಗೆ ಸೆಲೆಗೆ ಪ್ರೇರಣೆಯೇ ಮಹತ್ವಪೂರ್ಣವಾದದ್ದು. ಪ್ರೇರಣೆ ಎನ್ನುವುದು ಪದಗಳಿಂದ ಅರ್ಥವಾಗದ ವಿಷಯ ಆದರೆ ಅನುಭವದಿಂದ ತಿಳಿಯುತ್ತದೆ. ಜೀವನದ ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಸ್ಪೂರ್ತಿಯ ರೂಪವಾಗಿದೆ.
ವ್ಯಕ್ತಿತ್ವ ಮತ್ತು ಮನಸ್ಸಿನ ಸಮಗ್ರ ಬೆಳವಣಿಗೆಗೆ ಪ್ರೇರಣೆ ಬಹಳ ಮುಖ್ಯ. ಇದು ವ್ಯಕ್ತಿಯನ್ನು ಕ್ರಿಯೆಯಲ್ಲಿ ಮತ್ತು ಸ್ಪರ್ಧಾತ್ಮಕ ಸ್ಥಿತಿಯಲ್ಲಿ ಇರಿಸುತ್ತದೆ. ಇದಲ್ಲದೆ, ಇದು ಗುರಿಯನ್ನು ಸಾಧಿಸುವ ದಕ್ಷತೆ ಮತ್ತು ಬಯಕೆಯನ್ನು ಸುಧಾರಿಸುತ್ತದೆ. ಇದು ಕೆಲಸದಲ್ಲಿ ಸ್ಥಿರತೆ ಮತ್ತು ಸುಧಾರಣೆಗೆ ಕಾರಣವಾಗುತ್ತದೆ.
ಪಾಲಕರೇ ಗಮನಿಸಿ.
* ಮಕ್ಕಳಿಗೆ ಸ್ಪೂರ್ತಿ ತುಂಬುವುದು ಪಾಲಕರ ಕರ್ತವ್ಯ ಎಂಬುದನ್ನು ಮರೆಯದಿರಿ.
*ಧನಾತ್ಮಕ ಪ್ರೇರಣೆ ಎಂತಹ ಕಠಿಣ ಪರಿಸ್ಥಿತಿಯನ್ನೂ ಗೆಲ್ಲಲು ಸಹಾಯ ಮಾಡುತ್ತದೆ. ಹೀಗಾಗಿ ಮಕ್ಕಳೊಂದಿಗೆ ಧನಾತ್ಮಕ ಭಾವದಿಂದ ವರ್ತಿಸಿ.
*ನಕಾರಾತ್ಮಕ ಮಾತುಗಳನ್ನು ಮಕ್ಕಳಿಂದ ಸಾಧ್ಯವಾದಷ್ಟು ದೂರಾಗಿಸಿ. ಇದರಿಂದ ನಿಮಗೂ ಮಕ್ಕಳಿಗೂ ಶ್ರೇಯಸ್ಸು ಖಚಿತ.
*ಸ್ವಯಂ ಪ್ರೇರಣೆ ನೀಡುವ ಸಂದರ್ಭ ಸೃಷ್ಟಿಸುವುದೂ ಒಂದು ಜಾಣ್ಮೆಯ ಕಾಯಕ ಎಂಬುದನ್ನು ನೆನಪಿಡಿ.
*ಸುತ್ತಲ ಪರಿಸರದಿಂದ ಮಕ್ಕಳಿಗೆ ಸಿಗುವ ಪ್ರೇರಣೆಗಳ ಬಗ್ಗೆ ಗಮನ ಇರಲಿ.
*ನಿರ್ದಿಷ್ಟವಾದ ಗುರಿ ಹೊಂದಲು ಪ್ರೇರಣೆಯೇ ಮುಖ್ಯವಾದುದ್ದರಿಂದ ಮಕ್ಕಳ ಮನಸ್ಸಿನಲ್ಲಿ ಗುರಿ ನಿಗದಿಗೆ ನೀವುಗಳೂ ಪ್ರೇರಣೆಯ ಮೂಲಕ ಬೆಂಬಲ ನೀಡಿ.