ಕುಮಟಾ : ಹೊಸ ತಲೆಮಾರಿನ ಮಕ್ಕಳಿಗೆ ಕೂಡು ಕೌಟುಂಬಿಕ ಅನುಬಂಧ, ಗ್ರಾಮೀಣ ಸೊಗಡಿನ ವಾತಾವರಣ, ದೇಶಿಯ ಸಾಂಸ್ಕೃತಿಕ ಚಟುವಟಿಕೆಗಳ ಲಭ್ಯತೆ ದುರ್ಲಭವಾಗುತ್ತಿದ್ದು, ಕೇವಲ ಏಕಾಂತದಲ್ಲಿ ಏಕಾಂಗಿಯಾಗಿ ಆಧುನಿಕ ತಂತ್ರಜ್ಞಾನದ ಆಟ ಪಾಠಗಳಲ್ಲಿ ತೊಡಗಿಕೊಳ್ಳುತ್ತಿರುವ ಅಪಾಯಕಾರಿ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಇವಕ್ಕೆಲ್ಲ ಪ್ರಮುಖವಾಗಿ ಶಹರಗಳಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪೋಷಕರು ಅನುಭವಿಸುತ್ತಿರುವ ಒತ್ತಡದ ಜೀವನ ಮಕ್ಕಳ ಮೇಲೂ ಪ್ರಭಾವಿಸುತ್ತಿರುವುದೇ ಕಾರಣವಾಗಿದೆ.
ರಜೆ ಬಿದ್ದಾಗ ಅಜ್ಜ-ಅಜ್ಜಿಯರ ಜೊತೆಗೆ ಊರಿಗೆ ಬಂದಾಗ ಗ್ರಾಮೀಣ ಪರಿಸರದಲ್ಲಿ ನಡೆಯುವ ಬೇಸಿಗೆ ತರಗತಿಗಳು ಇಂತಹ ಮಕ್ಕಳನ್ನು ಒಗ್ಗೂಡಿಸಿ ಸಂಸ್ಕೃತಿ ಪಾಲನೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳಲ್ಲಿ ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹೊಸ ದಾರಿ ತೆರೆದುಕೊಳ್ಳುವಂತಾಗುತ್ತದೆ. ಬೇಸಿಗೆ ಶಿಬಿರಗಳು ಕೇವಲ ಪಠ್ಯಪೂರಕ ಚಟುವಟಿಕೆಗಳ ಸೇತುಬಂಧವಾಗಿರದೇ ಪಠ್ಯೇತರ ಸಾಮಾನ್ಯ ವಿಷಯ ಗ್ರಹಿಕೆಯ ಮೂಲಕ ಮನೋವಿಕಾಸಕ್ಕೂ ಕಾರಣವಾಗಬೇಕು ಎಂದು ವಿಶ್ರಾಂತ ಮುಖ್ಯಾಧ್ಯಾಪಕ ಮತ್ತು ಬರಹಗಾರ ಎನ್. ಆರ್. ಗಜು ಅಭಿಪ್ರಾಯಪಟ್ಟರು.

ಅವರು ಇಲ್ಲಿಯ ಬಸ್ತಿಪೇಟೆಯಲ್ಲಿಯ ಶಂಕರ ನಾರಾಯಣ ದೇವಾಲಯದ ಪ್ರಾಂಗಣದಲ್ಲಿ ನಡೆಯುತ್ತಿರುವ ಚಿತ್ರಕಲಾ ಶಿಕ್ಷಕ ಮನೋಜ ಗುನಗಾ ನೇತೃತ್ವದ ಎರಡನೆಯ ಹಂತದ ಹತ್ತು ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಪೋಷಕ ವರ್ಗದಲ್ಲಿಯ ಹವ್ಯಾಸೀ ಮಾರ್ಗದರ್ಶಕರಾದ ದೇಹದಾರ್ಢ್ಯ ಪಟು ರಾಜೇಶ ಮಡಿವಾಳ, ನಿರೂಪಕಿ ಶೀಲಾ ಮೇಸ್ತಾ, ಮೇಧಾ ಆರ್, ಲತಾಶ್ರೀ, ಶಿಕ್ಷಕಿ ಜ್ಯೋತಿ ನಾಯ್ಕ ಮೊದಲಾದವರು ಉಪಸ್ಥಿತರಿದ್ದು ದಿನದ ಗೌರವಕ್ಕೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಕುಮಟಾ ಅಗ್ನಿಶಾಮಕ ದಳದವರು ಪುಟ್ಟ ಮಕ್ಕಳಿಗಾಗಿ ಅಗ್ನಿಯ ಸುರಕ್ಷತೆ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಿಸಿದರು. ಚಿತ್ರಕಲೆ, ರಂಗೋಲಿ, ಮೋಜಿನ ಗಣಿತ ಮತ್ತು ರಂಜನೀಯ ವಿಜ್ಞಾನವನ್ನು ಶಿಬಿರದ ಶಿಕ್ಷಕರು ಬೋಧಿಸುತ್ತಾ ಮಕ್ಕಳನ್ನು ಉತ್ತೇಜಿಸುವಲ್ಲಿ ನಿರತರಾಗಿರುವುದನ್ನು ಪೋಷಕ ವರ್ಗದವರು ನಿಂತು ವೀಕ್ಷಿಸುತ್ತಾ ಆನಂದಿಸುತ್ತಿದ್ದರು. ಶಿಬಿರಾರ್ಥಿಗಳ ಪರವಾಗಿ ಶಿಕ್ಷಕ ಮನೋಜ ಗುನಗಾ ಸ್ವಾಗತಿಸಿ, ಪರಿಚಯಿಸಿ, ವಂದಿಸಿದರು.