ಯಕ್ಷಗಾನ ,ನಾಟಕ ,ಛದ್ಮವೇಷ ಹೀಗೆ ಎಲ್ಲಾ ಬಗೆಯ ಕಲಾವಿದರುಗಳ ಮುಖವರ್ಣಿಕೆಯನ್ನು ಬಹಳ ಪ್ರೀತಿಯಿಂದ ಸುಂದರವಾಗಿ ಚಿತ್ರಿಸಿಕೊಡುತ್ತಿದ್ದ ಸುರೇಶ ದೇಶಭಂಡಾರಿಯವರು ನಿನ್ನೆ ಎಪ್ರಿಲ್ ಹತ್ತನೇ ತಾರೀಖನ ಶುಕ್ರವಾರ ಹೊನ್ನಾವರ ತಾಲೂಕಿನ ಗ್ರಾಮೀಣ ಪ್ರದೇಶವೊಂದರಲ್ಲಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗವಾಗ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ಮರಣಿಸಿದರು .
ಶಾಲಾ ಮಕ್ಕಳ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಗೆ ಬಣ್ಣಬಳಿದು ಸಿದ್ಧಗೊಳಿಸಲು ಕುಮಟಾದ ಬಾಡದಿಂದ ಸ್ವಂತ ವಾಹನದಲ್ಲಿ ಹೊರಟಾಗ ಮಾರ್ಗ ಮಧ್ಯೆ ಈ ದುರ್ಘಟನೆ ಜರುಗಿದೆ ನಿಜಕ್ಕೂ ಅತ್ಯಂತ ನೋವಿನ ಸಂಗತಿ..

ಸುರೇಶಣ್ಣ ಹಾಗೂ ಬಂಗಾರಿ ಮಾಸ್ತರರ ಜೋಡಿ ಬಹುತೇಕ ನಮ್ಮ ತಾಲೂಕಿನ ಅಷ್ಟೇ ಅಲ್ಲ ಜಿಲ್ಲೆಯ ಹೆಚ್ಚಿನ ಕಲಾವಿದರಿಗೆ ಚಿರಪರಿಚಿತ,ಬಯಲಾಟ,ಪ್ರತಿಭಾ ಕಾರಂಜಿ, ವಾರ್ಷಿಕಸ್ನೇಹ ಸಮ್ಮೇಳನದಲ್ಲಿನ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಸುರೇಶಣ್ಣನ ಬಣ್ಣಗಾರಿಕೆ ಇದ್ದೇ ಇರುತ್ತದೆ.ನಮ್ಮೂರಿನ ಚಿಣ್ಣರ ಮೇಳದ ಹೆಚ್ಚಿನ ಕಲಾವಿದರಿಗೆ ಸುರೇಶಣ್ಣನ ಬಣ್ಣಗಾರಿಕೆ ಅಚ್ಚುಮೆಚ್ಚು.ಈ ಕಾರಣಕ್ಕಾಗಿ ಕೆಲವೆಡೆ ಇವರನ್ನು ಸನ್ಮಾನಿಸಿ ಗೌರವಿಸಿದ್ದಿದೆ.
ನಾನು ಜೇಷ್ಠ ಪುರಕ್ಕೆ ಬಂದು ನೆಲಸಿದ ವರ್ಷದಿಂದ ಆರಂಭವಾದ ಕಾಂಚಿಕಾಂಬಾಯಕ್ಷಗಾನ ಮಂಡಳಿಯ ನವರಾತ್ರಿಯ ವಿಶೇಷ ಯಕ್ಷಗಾನ ಕಾರ್ಯಕ್ರಮದಲ್ಲಿ ನಾನು ಮೊದಲ ಬಾರಿಗೆ ಮಹಿಷಾಸುರನ ವೇಷ ಮಾಡಿದಾಗ ಅದರ ಮುಖ ವರ್ಣಿಕೆ ಸುರೇಶಣ್ಣ ಬರೆದಿದ್ದರು.
ವಿಶೇಷ ಪ್ರಸಾದನಗಳು ಇಲ್ಲದೇ ಇದ್ದರೂ
ಬೀರಪ್ಪ ಗುನಗರ ಜೊತೆ ಸೇರಿ ಇವರು ಕಟ್ಟಿಕೊಟ್ಟ ನನ್ನ ಚೊಚ್ಚಲ ಮಹಿಷಾಸುರ ಇಂದಿಗೂ ಹಲವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
ಕೊಂಕಣ ಎಜ್ಯುಕೇಶನ್ ಟ್ರಸ್ಟನ ವಾರ್ಷಿಕ ಸ್ನೇಹ ಸಮ್ಮೇಳನದಂದು ಸುರೇಶಣ್ಣ ನನ್ನನ್ನು ಗೌಪ್ಯವಾಗಿ ಒಂದುಕಡೆ ಕೂರಿಸಿಕೊಂಡು ಹಣ್ಣು ಹಣ್ಣು ಮುದುಕನ ಛದ್ಮ ವೇಷ ಸಿದ್ಧಪಡಿಸಿದ್ದರು.ಅದು ಹೇಗಾಗಿತ್ತು ಎಂದರೆ ಕತ್ತಲೆಯಲ್ಲಿ ನಾನು ರಂಗಸ್ಥಳದ ಕಡೆಗೆ ಹೋಗುತ್ತಿದ್ದರೆ ಸಂಸ್ಥೆಯ ವಿಶ್ವಸ್ಥರೊಬ್ಬರು ಈ ರಾತ್ರಿ ಕತ್ಲೆಲಿ ಈ ಮುದುಕ ಯಾಕೆ ಓಡಾಡ್ತಿದ್ದಾನೆ ಬಿದ್ರೆ ಪರಾಮಷಿ ಆಗುದು ಎಂದು ಕೊಂಕಣಿ ಭಾಷೆಯಲ್ಲಿ ಗದರಿಸಿದ್ದರು ನಾನು ಆಕಸ್ಮಿಕವಾಗಿ ರಂಗಸ್ಥಳ ಏರಿ ಮಾತಾಡಿದ್ದಾಗಲೇ ಕೆಲವರಿಗೆ ನನ್ನ ಪರಿಚಯ ಆಗಿತ್ತು.ಇದು ಸುರೇಶಣ್ಣನ ಬಣ್ಣಗಾರಿಕೆಯ ವಿಶೇಷತೆ.
ಕುಮಟಾ ಗೋವಿಂದ ನಾಯ್ಕರ ಮೇಳದ ಕಲಾವಿದರಾಗಿ,ಅವರ ಕುಟುಂಬದ ಅಭಿಮಾನಿಯಾಗಿ,ಬ್ಯಾಂಕ್ ಉದ್ಯೋಗಿಯಾಗಿದ್ದರೂ ಬಿಡುವಿನ ವೇಳೆ ಎಲ್ಲೇ ಯಾರೇ ಕರೆದರೂ ಪ್ರೀತಿಯಿಂದ ಸಹಕಾರ ನೀಡುತ್ತಿದ್ದ ಸುರೇಶಣ್ಣ ಇನ್ನು ಕೇವಲ ನೆನಪು ಮಾತ್ರ. ಅವರ ಆತ್ಮಕ್ಕೆ ಸದ್ಗತಿ ನೀಡೆಂದು ಭಗವಂತನಲ್ಲಿ ಬೇಡುವುದನ್ನು ಬಿಟ್ಟು ಬೇರೆ ದಾರಿ ಇಲ್ಲ.
ನಮಸ್ಕಾರ….
ಕಾಗಾಲ ಚಿದಾನಂದ ಭಂಡಾರಿ.