ಗಣೇಶ ಜೋಶಿ ಸಂಕೊಳ್ಳಿ
ಸೌಂದರ್ಯಾಲಯ ಬರಿ ದ್ವಂದ್ವವೇನಲ್ಲ ।
ದ್ವಂದ್ವದೊಳಗನುವು; ಅದು ಪರಿಮಾಣದುಚಿತ ॥
ಸಂಧಾನ ರೀತಿಯದು, ಸಹಕಾರ ನೀತಿಯದು ।
ಸಂದರ್ಭ ಸಹಜತೆಯೊ – ಮಂಕುತಿಮ್ಮ ॥

ಕೇವಲ ದ್ವಂದ್ವಗಳು ಇದ್ದರೆ ಸಾಲದು, ಅವು ಒಂದಕ್ಕೊಂದು ಅನುಗುಣವಾಗಿರಬೇಕು, ಪರಿಮಾಣಗಳ ಔಚಿತ್ಯವನ್ನು ಹೊಂದಿರಬೇಕು, ಒಂದಕ್ಕೊಂದು ಸಮರ್ಪಕವಾಗಿ ಅನುಸಂಧಾನದಿಂದಿರಬೇಕು ಮತ್ತು ಪರಸ್ಪರ ಸಹಕಾರಯುತವಾಗಿರಬೇಕು. ಈ ಎಲ್ಲ ರೀತಿಯ ಸಂದರ್ಭಗಳು ಇದ್ದಾಗ ಅದು ನಿಜವಾದ ಸೌಂದರ್ಯ ಎಂದು ಉಲ್ಲೇಖಮಾಡಿದ್ದಾರೆ ಕಗ್ಗದ ಕವಿ ಡಿವಿಜಿ.
ಅದು ಬದುಕಿನ ಸೌಂದರ್ಯವೂ ಇರಬಹುದು. ಸಾಮಾಜಿಕ ಸೌಂದರ್ಯವೂ ಇರಬಹುದು. ಇಂತಹದೊಂದು ಸಾಮಾಜಿಕ ಸಾಮರಸ್ಯಕ್ಕೆ ಮುನ್ನುಡಿ ಬರೆಯಬೇಕಿದೆ. ನಮ್ಮೊಳಗಿನ ಅಹಂ ಭಾವವನ್ನು ಸುಟ್ಟು ಇತರರಿಗೆ ನೆರವಾಗುವ ದೊಡ್ಡತನ ನಾವು ತೋರಿಸಬೇಕು. ಇದು ಇಂದಿನ ಅಗತ್ಯತೆಯೂ ಹೌದು. ನಮ್ಮೊಳಗೆ ನಾವಾಗಿ ನಮ್ಮ ಪರಿಧಿಯಲ್ಲಿ ನಾವು ಬದುಕುವುದನ್ನು ಬಿಟ್ಟು ಇತರರಿಗಾಗಿ ಬದುಕುವುದನ್ನು ರೂಢಿಸಿಕೊಂಡಾಗ ಮಾತ್ರವೇ ಸಮಾಜವು ಸುಂದರವಾಗುತ್ತದೆ ಅಂತಹ ಸಮಾಜವನ್ನು ಕಟ್ಟಲು ಕಟಿಬದ್ಧರಾಗುವ ಸಮಯವಿದು.
ವೈವಿಧ್ಯಮಯ ಈ ಜಗತ್ತಿನಲ್ಲಿ ಎಲ್ಲವೂ ಇದೆ. ಪ್ರತಿಯೊಂದೂ ತನ್ನ ವೈಯಕ್ತಿಕ ಸ್ವರೂಪವನ್ನು ಹೊಂದಿ ತಮ್ಮಷ್ಟಕ್ಕೆ ತಾವು ಸಮರ್ಪಕವಾಗೇ ಇವೆ. ಒಂದು ವಸ್ತು, ವಿಷಯ ಅಥವಾ ವ್ಯಕ್ತಿ ಮತ್ತೊಂದರೊಂದಿಗೆ ಸೂಕ್ತ ಪ್ರಮಾಣ ಮತ್ತು ಪರಿಮಾಣಗಳೊಂದಿಗೆ ಹೊಂದಿಕೊಂಡಾಗ ಆ ಮಿಶ್ರಣಕ್ಕೆ ಒಂದು ಸುಂದರತೆ ಉಂಟಾಗುತ್ತದೆ. ಆ ಸುಂದರತೆ ಆನಂದ ಮತ್ತು ಸಂತೋಷವನ್ನು ಉಂಟುಮಾಡುತ್ತದೆ. ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿಯ ಬೇರೊಂದು ಇಲ್ಲ ಎಂದು ಹಲವರಿಗೆ ಗೊತ್ತಾಗಿದ್ದು ಕುಮಟಾದಲ್ಲಿ ನಡೆದ ಗಣೇಶ ಚತುರ್ಥಿ ಹಾಗೂ ಯುಗಾದಿ ಮೆರವಣಿಗೆ ಆ ಅಮೃತಗಳಿಗೆಯಲ್ಲಿ.
ಅಂದು ಗಣೇಶ ಚತುರ್ಥಿಯ ಹಬ್ಬದ ಸಂದರ್ಭದಲ್ಲಿ ಗುಡಿಗಾರಗಲ್ಲಿ ಶಾಲೆಯ ಎದುರಿನಲ್ಲಿ ದಾರಿಯುವುದಕ್ಕೂ ಸಾಗಿ ಬರುತ್ತಿದ್ದ ಮುಸ್ಲಿಂ ಮೆರವಣಿಗೆಯಲ್ಲಿದ್ದವರಿಗೆ ಸವಿಯಾದ ಸಿಹಿ ಪೇಡಾವನ್ನು ಹಂಚಿ ಹಿಂದೂ ಬಾಂಧವರು ಗಣೇಶ ಚತುರ್ಥಿಯ ಸವಿಯನ್ನು ಹೆಚ್ಚಿಸಿದ್ದರು. ಇದು ಬಾಂಧವ್ಯದ ಬೆಸುಗೆ ನಾಂದಿಯಾಯಿತು. ಅಲ್ಲಿಂದ ಮೊದಲ್ಗೊಂಡು ಬಾಂಧವ್ಯದ ಹೂವು ಅರಳಲು ಪ್ರಾರಂಭಿಸಿತು.
ಸ್ಮೃತಿ ಪಟಲದಲ್ಲಿ ಎಂದೂ ಮಾಸದ ಉದ್ವಿಗ್ನ ಪರಿಸ್ಥಿತಿಯು ನೆನಪಿಗೆ ಬಂದು, ಪ್ರತೀ ವರ್ಷ ಯುಗಾದಿ ಉತ್ಸವದ ಮೆರವಣಿಗೆ ಬರುವ ಮಾರ್ಗದಲ್ಲಿ ಅದೇನೋ ಕುತೂಹಲ ಹುಟ್ಟಿಸುತ್ತಿದ್ದು ಮುಸ್ಲಿಂ ಪ್ರಾರ್ಥನಾ ಮಂದಿರದ ಸನಿಹದಲ್ಲಿ. ಈ ವರ್ಷ ಯುಗಾದಿ ಮಾರನೇ ದಿನವೇ ಮುಸ್ಲಿಂ ಬಾಂಧವರು ರಂಜಾನ್ ಕೊನೆಯ ದಿನದ ಆಚರಣೆ. ಈದ್ ಆಚರಣೆಗಳ ಹಿನ್ನೆಲೆಯಲ್ಲಿ ಬಹುತೇಕರು ಸೇರಿದ್ದ ಆ ಪ್ರಾರ್ಥನಾ ಮಂದಿರದ ಎದುರಿಗೆ ಯುಗಾದಿ ಮೆರವಣಿಗೆ ಸಾಗಿಬಂದೊಡನೆಯೇ ಮುಸ್ಲಿಂ ಸಮುದಾಯದವರು ಖರ್ಜೂರ ಹಂಚಿದರು. ದಣಿದವರ ಬಾಯಾರಿಕೆ ನೀಗಿಸಲು ನೀಡು ನೀಡಿದರು. ಹಳೆಯದೆಲ್ಲವ ಬಿಟ್ಟು ಹೊಸ ಬಾಂಧವ್ಯದ ಹಣತೆ ಹಚ್ಚುವ ಯತ್ನ ಪ್ರಾರಂಭವಾಗಿದೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಒಂದಾದ ಬಾಂಧವ್ಯದ ಭಾವ ಮತ್ತೊಮ್ಮೆ ಚಿಗುರೊಡೆಯುತ್ತಿದೆ.
ಪಂಚಭೂತಗಳಿಂದಾದ ಪ್ರಕೃತಿಯಲ್ಲಿ ಎಲ್ಲವೂ ಪರಿಣಾಮದ ಔಚಿತ್ಯವನ್ನು ಹೊಂದಿಕೊಂಡೇ ಇವೆ, ಒಂದಕ್ಕೊಂದು ಪೂರಕವಾಗೆ ಇವೆ. ಆದರೆ ಮನುಷ್ಯ ಮಾತ್ರ ತನ್ನ ಪರಿಧಿಯ ವ್ಯಪ್ತಿಯನ್ನು ತಾನೇ ಸೃಷ್ಟಿಸಿಕೊಂಡು ಇದಕ್ಕೆ ಹೊಂದಿಕೊಳ್ಳದಂತೆ ಆಗಿದ್ದಾನೆ. ತಾನು ಯಾವುದಕ್ಕೂ ಹೊಂದಿಕೊಳ್ಳದಿದ್ದರೂ, ಬೇರೆಲ್ಲವೂ ತನಗೆ ಹೊಂದಿಕೊಳ್ಳಬೇಕೆಂದು ಅಪೇಕ್ಷೆಪಡುತ್ತಾನೆ. ವಿಪರ್ಯಾಸವೆಂದರೆ ಎಲ್ಲ ವಿಷಯಗಳೂ, ಎಲ್ಲ ವಸ್ತುಗಳೂ ಮತ್ತು ಎಲ್ಲ ವ್ಯಕ್ತಿಗಳೂ ಇವನಿಗನುಗುಣವಾಗಿಸಿಕೊಳ್ಳಲು ಸತತ ಪ್ರಯತ್ನವನ್ನು ಮಾಡುತ್ತಾನೆ. ದುರಾಸೆ, ದುರ್ನಿರೀಕ್ಷೆಗಳಂತಹ ಭಾವನೆಗಳಿಂದ ತನ್ನನ್ನು ಹೊರತು ಮತ್ತೆಲ್ಲದರ ಪ್ರಮಾಣ ಮತ್ತು ಪರಿಮಾಣವನ್ನು ಭಗ್ನಗೊಳಿಸಿ, ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಇವನ ಹವಣಿಕೆಯಲ್ಲಿ ಎಲ್ಲವನ್ನೂ ಹಾಳುಗೆಡುವುತ್ತಿದ್ದಾನೆ. ಅದೆಲ್ಲವನ್ನೂ ಬಿಟ್ಟು ಭಾವಾಂತರಂಗದ ಆಲಿಂಗನ ಆಗಬೇಕು ಎಂಬುದು ಇಲ್ಲಿಯ ಅಭಿಪ್ರಾಯ.
‘ಪರಮಾತ್ಮನ ಸೃಷ್ಟಿಯಲ್ಲಿ ಮತ್ತೆಲ್ಲದರಂತೆ ತಾನೂ ಒಂದು’ ಎಂದು ಎಲ್ಲದರೊಂದಿಗೆ ಸಮನ್ವಯದ ಬಾಳನ್ನು ಪ್ರತಿಯೊಬ್ಬರೂ ಎಂದು ಅಳವಡಿಸಿಕೊಳ್ಳುತ್ತಾನೋ, ಅಂದೇ ಇವರಿಗೆ ನಿಜವಾದ ಸುಖ ಆನಂದಗಳು ಸಿಗುತ್ತವೆ. ಅದಲ್ಲದಿದ್ದರೆ “ಎಲ್ಲಕ್ಕಿಂತ ಭಿನ್ನ ಮತ್ತು ಎಲ್ಲರಿಗಿಂತ ಎತ್ತರದಲ್ಲಿದ್ದೇವೆ” ಎಂದುಕೊಂಡರೆ ಈ ಜಗತ್ತಿನಲ್ಲಿ ‘ಏಕಾಂಗಿ’ಯಾಗಿ ಉಳಿಯದೆ ಬೇರೆ ಮಾರ್ಗವೇ ಇಲ್ಲವಲ್ಲ.
ಗಣೇಶ ಚತುರ್ಥಿ ಹಾಗೂ ಯುಗಾದಿಯ ಮೆರವಣಿಗೆಯಲ್ಲಿ ಒಂದಾದ ಬಾಂಧವ್ಯ ಸದಾ ಸರ್ವದಾ ಒಂದಾಗಿ ಸಾಗಲಿ ಎಂಬುದು ಹಾರೈಕೆ. “ಹಚ್ಚುವುದಾದರೆ ದೀಪವನ್ನು ಹಚ್ಚು ಬೆಂಕಿಯನ್ನಲ್ಲ. ಆರಿಸುವುದಾದರೆ ನೋವನ್ನು ಆರಿಸು ನಗುವನ್ನಲ್ಲ” ಎಂದು ಜೀವನದ ಪಾಠ ಹೇಳಿದ ವರಕವಿ ದ.ರಾ. ಬೇಂದ್ರೆಯ ಸಾಲುಗಳು ನೆನಪಾಗಿದ್ದು ಇದೇ ಕಾರಣದಿಂದ. ಹಿಂದಿನದ್ದು ಹಿಂದಕ್ಕೆ ಇಡೋಣ, ಮುಂದೆ ಬರದಿರುವುದರ ಕಡೆಗೆ ಚಿಂತೆ ಮಾಡದಿರೋಣ. ಹೊತ್ತಿರುವ ಬಾಂಧವ್ಯದ ಜ್ಯೋತಿ ಬತ್ತದಂತೆ ಕಾಪಾಡಿಕೊಳ್ಳೋಣ ಅಲ್ಲವೇ?.