ಕುಮಟಾ: ರಾಷ್ಟ್ರಕವಿ ಡಾ.ಜಿ.ಎಸ್.ಎಸ್. ಪ್ರತಿಷ್ಠಾನ (ರಿ.) ಶಿವಮೊಗ್ಗ ವತಿಯಿಂದ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಕುಮಟಾದ ಕೂಜಳ್ಳಿಯ ಸಂಧ್ಯಾ ವಿನಾಯಕ ಹೆಗಡೆ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಭಾಗದ 83 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಅಂತಿಮ ಸುತ್ತಿನ ಸ್ಪರ್ಧೆಯು ಫೆಬ್ರವರಿ 10 ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಆತ್ಮಸಂತೋಷದ ಹವ್ಯಾಸಕ್ಕಾಗಿ ತಡವಾಗಿ ಹಾಡಲು ಆರಂಭಿಸಿದ ಇವರು ಈಗಾಗಲೇ ಹಲವು ಹಾಡುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಪ್ರಸ್ತುತ ಗೋಕರ್ಣದ ಸ್ವರಾತ್ಮ ಗುರುಕುಲದ ಪಂ. ಹರೀಶ ಹೆಗಡೆ ಅವರಲ್ಲಿ ಸಂಗೀತದ ಅಭ್ಯಾಸ ಮುಂದುವರಿಸಿದ್ದಾರೆ.

ಸಿ.ಎ. ವಿನಾಯಕ ಹೆಗಡೆ ಅವರ ಧರ್ಮಪತ್ನಿಯಾದ ಇವರು ಗಂಡನಿಗೆ ಕಚೇರಿ ಕೆಲಸದಲ್ಲಿ ಸಹಾಯ ಮಾಡುತ್ತ, ಮನೆವಾರ್ತೆಯ ಎಲ್ಲ ಕೆಲಸಗಳನ್ನು ನಿಭಾಯಿಸುತ್ತ, ಮಹಿಳಾ ಸಬಲೀಕರಣಕ್ಕೆ ಸಂಘಟನೆಗಳಿಗೆ ನೆರವಾಗುತ್ತ ಸಂಗೀತ ಸಾಧನೆಯನ್ನೂ ಮಾಡುತ್ತಿರುವುದು ವಿಶೇಷ.
ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುವುದಕ್ಕೆ ಅವರ ಅಭಿಮಾನಿ ಶೋತೃ ಬಳಗ ಸಂತಸ ವ್ಯಕ್ತಪಡಿಸಿದ್ದಾರೆ.