ಕುಮಟಾ: ರಾಷ್ಟ್ರಕವಿ ಡಾ.ಜಿ.ಎಸ್.ಎಸ್. ಪ್ರತಿಷ್ಠಾನ (ರಿ.) ಶಿವಮೊಗ್ಗ ವತಿಯಿಂದ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಕುಮಟಾದ ಕೂಜಳ್ಳಿಯ ಸಂಧ್ಯಾ ವಿನಾಯಕ ಹೆಗಡೆ ದ್ವಿತೀಯ ಸ್ಥಾನ ಪಡೆದು ಗೋಕರ್ಣದ ಸ್ವರಾತ್ಮ ಗುರುಕುಲಕ್ಕೆ ಮತ್ತು ಕುಮಟಾ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಭಾಗದ 83 ಸ್ಪರ್ಧಾಳುಗಳು ಭಾಗವಹಿಸಿದ್ದು ಅಂತಿಮ ಸುತ್ತಿಗೆ ಕೇವಲ 10 ಸ್ಪರ್ಧಿಗಳು ಆಯ್ಕೆಯಾಗಿದ್ದರು.
ಅಂತಿಮ ಸುತ್ತಿನ ಸ್ಪರ್ಧೆಯು ಫೆಬ್ರವರಿ 10 ರಂದು ಶಿವಮೊಗ್ಗದಲ್ಲಿ ನಡೆದಿತ್ತು. ಇನ್ನು ಶಿವಮೊಗ್ಗಾದ ಕರ್ನಾಟಕ ಸಂಘದ ಆವಾರದಲ್ಲಿ ಫೇ. 21 ರಂದು ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇತರ ಗಣ್ಯರು ಬಹುಮಾನ ವಿತರಣೆ ಮಾಡಲಿದ್ದಾರೆ.

ಇವರ ಈ ಸಾಧನೆಗೆ ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾ ಪೀಠಮ್, ಅಶೋಕೆಯ ಸ್ವರಾತ್ಮ ಗುರುಕುಲದ ಪ್ರಾಚಾರ್ಯರಾದ ಡಾ. ಹರೀಶ ಹೆಗಡೆ ಅವರು ಅಭಿನಂದಿಸಿದ್ದಾರೆ. ಸಿ.ಎ. ವಿನಾಯಕ ಹೆಗಡೆ ಅವರ ಧರ್ಮಪತ್ನಿಯಾದ ಇವರು ಪತಿಯ ಕಚೇರಿ ಕೆಲಸಕ್ಕೆ ಸಹಕರಿಸುತ್ತಲೇ ಸಂಗೀತ ಸಾಧನೆಯನ್ನೂ ಮಾಡುತ್ತಿರುವುದು ವಿಶೇಷ. ಇವರು ಮಹಿಳಾ ಸಬಲೀಕರಣದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವುದಕ್ಕೆ ಅವರ ಅಭಿಮಾನಿ ಶೋತೃ ಬಳಗ ಸಂತಸ ವ್ಯಕ್ತಪಡಿಸಿದ್ದಾರೆ.