ಕುಮಟಾ: ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಪಟ್ಟಣದ ರಾಘವೇಂದ್ರ ವೆಂಕಟೇಶ ಶೇಟ್ ಅವರು ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪ್ರಭು ಫಿಟ್ನೆಸ್ ಸೆಂಟರ್‌ನಲ್ಲಿ ನಿಯಮಿತ ತರಬೇತಿ ಪಡೆಯುತ್ತಿರುವ ಅವರು, ತಮ್ಮ ಅಸಾಧಾರಣ ಶಾರೀರಿಕ ಕ್ಷಮತೆ ಮತ್ತು ದಿಟ್ಟ ಪರಿಶ್ರಮದಿಂದ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಾಸ್ಟರ್ಸ್ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪವರ್ ಲಿಫ್ಟಿಂಗ್ ಸ್ಪರ್ಧಾ ಕೂಟ–2026ರಲ್ಲಿ ಭಾಗವಹಿಸಿದ ರಾಘವೇಂದ್ರ ಅವರು ಮಾಸ್ಟರ್ಸ್ 83 ಕೆಜಿ ಕ್ಲಾಸಿಕ್ ವಿಭಾಗದಲ್ಲಿ 455 ಕೆಜಿ ಹಾಗೂ ಇಕ್ವಿಪ್ಡ್ ವಿಭಾಗದಲ್ಲಿ 530 ಕೆಜಿ ಭಾರ ಎತ್ತುವ ಮೂಲಕ ಎರಡು ಸ್ವರ್ಣ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಅವರು ರಾಜ್ಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಜನವರಿಯಲ್ಲಿ ಹರಿಯಾಣದ ಫರೀದಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದಿದ್ದ ಅವರು, ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದಿದ್ದರು. ಹೀಗೆ ಹಂತ ಹಂತವಾಗಿ ಸಾಧನೆಯ ಮೆಟ್ಟಿಲು ಏರುತ್ತಿರುವ ರಾಘವೇಂದ್ರ ಅವರ ಸಾಧನೆ ಕ್ರೀಡಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
೫೧ನೇ ವಯಸ್ಸಿನಲ್ಲಿಯೂ ಶಿಸ್ತುಬದ್ಧ ಆಹಾರ ಕ್ರಮ, ನಿಯಮಿತ ವ್ಯಾಯಾಮ ಮತ್ತು ಅಚಲ ಮನೋಬಲದ ಮೂಲಕ ದೇಹಧಾರ್ಢ್ಯತೆಯನ್ನು ಕಾಪಾಡಿಕೊಂಡಿರುವುದು ಅವರ ಯಶಸ್ಸಿನ ಗುಟ್ಟು. “ಶ್ರಮಕ್ಕೆ ಪರ್ಯಾಯವೇ ಇಲ್ಲ” ಎಂಬ ಸಂದೇಶವನ್ನು ತಮ್ಮ ಸಾಧನೆಯ ಮೂಲಕ ಯುವಜನತೆಗೆ ಅವರು ನೀಡುತ್ತಿದ್ದಾರೆ.
ಇನ್ನೂ ವಿಶೇಷವೆಂದರೆ, ಅವರ ಪುತ್ರ 19 ವರ್ಷದ ಸುಜಲ ಶೇಟ್ ಕೂಡ ಕ್ರೀಡೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕಳೆದ ವರ್ಷ ಸಬ್ ಜೂನಿಯರ್ ವಿಭಾಗದಲ್ಲಿ ಮಂಗಳೂರಿನಲ್ಲಿ ಸ್ವರ್ಣ ಪದಕ ಹಾಗೂ ‘ಸ್ಟ್ರಾಂಗ್ ಮ್ಯಾನ್’ ಬಿರುದು, ಬೆಂಗಳೂರಿನಲ್ಲಿ ರಜತ ಪದಕ ಪಡೆದಿರುವುದು ಕುಟುಂಬದ ಕ್ರೀಡಾ ಪರಂಪರೆಯನ್ನು ಸ್ಪಷ್ಟಪಡಿಸುತ್ತದೆ.
ರಾಘವೇಂದ್ರ ಅವರು ಕುಮಟಾದ ಪ್ರಭು ಫಿಟ್ನೆಸ್ ಸೆಂಟರ್‌ನ ಅನಂತ ಭಟ್, ರಾಜೇಶ್ ಮಡಿವಾಳ ಹಾಗೂ ವೆಂಕಟೇಶ ಪ್ರಭು ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ. ತರಬೇತಿದಾರರ ಸಮರ್ಪಿತ ಮಾರ್ಗದರ್ಶನ ಮತ್ತು ತಮ್ಮ ನಿರಂತರ ಪರಿಶ್ರಮದ ಫಲವೇ ಈ ಡಬಲ್ ಗೋಲ್ಡ್ ಸಾಧನೆ ಎಂದು ಅವರು ತಿಳಿಸಿದ್ದಾರೆ.
ಕುಮಟಾದಂತಹ ಪಟ್ಟಣದಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಪ್ರತಿಭೆಗಳು ಬೆಳೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ವಿಶೇಷವಾಗಿ ದೈವಜ್ಞ ಬ್ರಾಹ್ಮಣ ಸಮಾಜದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಅಪರೂಪವಾಗಿರುವ ಸಂದರ್ಭದಲ್ಲಿ, ರಾಘವೇಂದ್ರ ಅವರ ಸಾಧನೆ ಸಮಾಜಕ್ಕೂ ಹೆಮ್ಮೆಯ ವಿಷಯವಾಗಿದೆ.
ಸಮಾಜಬಾಂಧವರು ಹಾಗೂ ಕ್ರೀಡಾಭಿಮಾನಿಗಳು ಅವರ ಸಾಧನೆಯನ್ನು ಅಭಿನಂದಿಸಿ, ಮುಂದಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಇನ್ನಷ್ಟು ಪದಕಗಳನ್ನು ಗೆದ್ದು ರಾಜ್ಯದ ಗೌರವ ಹೆಚ್ಚಿಸಲಿ ಎಂದು ಹಾರೈಸಿದ್ದಾರೆ.