ಕುಮಟಾ : ತಾಲೂಕಿನ ಹೊಸಾಡದ ಅಮೃತಧಾರಾ ಗೋಬ್ಯಾಂಕಿನ ಆವಾರದಲ್ಲಿ ಫೆ. ೧೯ ರಿಂದ ೨೨ ರವರೆಗೆ ನಾಲ್ಕು ದಿನಗಳ ಕಾಲ ಗೋಸಂಧ್ಯಾ ಹಾಗೂ ಆಲೆಮನೆ ಹಬ್ಬ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಮುರಲೀಧರ ಪ್ರಭು ತಿಳಿಸಿದರು. ಅವರು ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

೨೦೦೬ ರಲ್ಲಿ ರಾಘವೇಶ್ವರ ಶ್ರೀಗಳ ಕನಸಿನ ಕೂಸಾಗಿ ಸ್ಥಾಪನೆಗೊಂಡಿದ್ದ ಅಮೃತಧಾರಾ ಗೋ ಬ್ಯಾಂಕಿನಲ್ಲಿ ಈಗ ೩೦೦ ರಷ್ಟು ಗೋವುಗಳಿವೆ. ಕಳೆದ ೨೦ ವರ್ಷಗಳಿಂದ ಸಾವಿರಾರು ಗೋವುಗಳನ್ನು ಸಂರಕ್ಷಿಸಿ, ಪಾಲಿಸಿದ್ದು ಮಾತ್ರವಲ್ಲದೇ ಸಾವಿರಾರು ರೈತರಿಗೆ ಗೋಬ್ಯಾಂಕಿನಿಂದ ಗೋವುಗಳನ್ನು ನೀಡಿದೆ. ಗೋಶಾಲೆಯ ನಿರ್ವಹಣೆಗೆ ಪ್ರತಿ ತಿಂಗಳು ೮ ಲಕ್ಷಕ್ಕೂ ಹೆಚ್ಚು ಖರ್ಚಿದೆ. ಆದರೆ ಇಷ್ಟೊಂದು ವರ್ಷ ಭಕ್ಷಣೆಯಾಗಲಿದ್ದ ಗೋವು, ಅಸಹಾಯ-ವೃದ್ಧ ಗೋವು ಸಹಿತ ಎಲ್ಲ ಬಗೆಯ ಭಾರತೀಯ ತಳಿಯ ಗೋವುಗಳನ್ನು ಸಂರಕ್ಷಿಸಿದ ಸಾಧನೆಯ ಹಿಂದೆ ಗೋಪ್ರೇಮಿಗಳ, ದಾನಿಗಳ, ಜನತೆಯ ಬೆಂಬಲ ಕಾರಣವಾಗಿದೆ. ಮೊದಲು ಮನೆಮನೆಗಳಲ್ಲಿ ಇರುತ್ತಿದ್ದ ಹೈನುಗಾರಿಕೆ ಈಗಿಲ್ಲ. ಪ್ರತಿ ಹಳ್ಳಿಯಲ್ಲಿರುತ್ತಿದ್ದ ಅಲೆಮನೆ ಇಲ್ಲ. ಹೀಗಾಗಿ ಮುಂದಿನ ಪೀಳಿಗೆಗೆ ಗೋಪಾಲನೆ ಹಾಗೂ ಅಲೆಮನೆ ಸಂಸ್ಕೃತಿಯ ಮಹತ್ವವನ್ನು ಬಿತ್ತರಿಸುವ ಉದ್ದೇಶವೂ ಇಲ್ಲಿದೆ. ಗೋಸಂಧ್ಯಾ ಹಾಗೂ ಅಲೆಮನೆ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗೋಭಕ್ತಿ ಜಾಗೃತಿಯೆಡೆಗೆ ಸಾರ್ವಜನಿಕರು ನಮ್ಮ ಸದುದ್ದೇಶವನ್ನು ಸಾರ್ಥಕಪಡಿಸುತ್ತಾರೆಂಬ ಭರವಸೆ ಇದೆ ಎಂದರು.
ಈ ದಿನಗಳಲ್ಲಿ ಸಾಂಪ್ರದಾಯಿಕ ಆಲೆಮನೆ ಹಬ್ಬ, ಕಬ್ಬಿನ ಹಾಲಿನ ವಿವಿಧೋತ್ಪನ್ನ ಮಾರಾಟ ಗೋಗ್ರಾಸ ಸೇವೆ, ಗವ್ಯೋತ್ಪನ್ನ ಮಾರಾಟ, ಗೋ ಸಂತರ್ಪಣೆ, ವಾರ್ಷಿಕ ಸಭೆ, ಗೋಸಂಧ್ಯಾ, ಗೋಪಾಲ ಗೌರವ, ದೇಶೀ ಗೋತಳಿ ವೈಭವ, ಗೋ ಪೂಜೆ, ಗೋ ದಾನ, ಪ್ರತೀ ದಿನ ಕಾಮಧೇನು ಯಾಗ, ವಿಶೇಷವಾಗಿ ಈ ವರ್ಷ ಗೋಆರತಿ ಎಂಬ ವಿಶಿಷ್ಟ ಕಾರ್ಯಕ್ರಮ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅವರು ವಿವರಿಸಿದರು.
ಗೋ ಬ್ಯಾಂಕ್ ಕಾರ್ಯದರ್ಶಿ ಅರುಣ ಹೆಗಡೆ ಮಾತನಾಡಿ, ೨೦೧೩ ರಿಂದ ಗೋಸಂಧ್ಯಾ ಕಾರ್ಯಕ್ರಮ ಆರಂಭಿಸಿದ್ದು ಕಳೆದ ಕೆಲ ವರ್ಷಗಳಿಂದ ಅಲೆಮನೆ ಹಬ್ಬವನ್ನೂ ಜೋಡಿಸಲಾಗಿದೆ. ಕಾಮಧೇನು ಪೂಜೆ, ಗೋಪೂಜೆ, ಗೋಗ್ರಾಸಸೇವೆ, ಹವನಗಳು ಮುಂತಾದವುಗಳ ಜತೆಗೆ ಸಾವಯವ ಆರೋಗ್ಯಭರಿತ ಕಬ್ಬಿನಹಾಲು, ಬೆಲ್ಲದ ಸವಿಖಾದ್ಯಗಳು, ಬೆಳೆದಿಂಡು, ಪಪ್ಪಾಯಿ, ದೇಸೀ ಆಹಾರೋತ್ಸವ, ಹಳ್ಳಿಮನೆ ತಿಂಡಿಗಳ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿವೆ ಎಂದರು.
ಗೋಬ್ಯಾಂಕಿನ ಜಿ.ಎಸ್.ಹೆಗಡೆ ಮಾತನಾಡಿ, ಅಮೃತಧಾರಾ ಗೋಬ್ಯಾಂಕಿನ ನಿರ್ವಹಣೆಯ ಶೇ. ೭೦ ರಷ್ಟು ವೆಚ್ಚವನ್ನು ಅಲೆಮನೆ ಹಬ್ಬ, ಯಕ್ಷಗಾನ ಮುಂತಾದ ಹಲವಾರು ಕಾರ್ಯಕ್ರಮಗಳು ಮತ್ತು ದಾನಿಗಳ ಮೂಲಕ ಸಂಗ್ರಹಿಸಿ ಉಳಿತಾಯ ಮಾಡಬೇಕಾದ ಅನಿವಾರ್ಯತೆ ಇದೆ. ಕಬ್ಬಿನಗಾಣ, ಕೊಟ್ಟಿಗೆ ಮುಂತಾದವುಗಳಿಂದ ದೂರಸರಿಯುತ್ತಿರುವ ಇಂದಿನ ಸಮಸ್ತ ಸಮಾಜಕ್ಕೆ ಗೋವಿನ ಋಣ ನೀಡಿದ ಜವಾಬ್ದಾರಿಯನ್ನು ನಿಭಾಯಿಸುವ ಅವಕಾಶ ಇಲ್ಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್.ವಿ.ಹೆಗಡೆ ಭದ್ರನ್, ಮಧುಕರ ಹೆಗಡೆ ಇದ್ದರು.
ಒಂದೇ ವೇದಿಕೆಯಲ್ಲಿ ಎರಡು ಕಬ್ಬಿನಗಾಣದ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದರೊಂದಿಗೆ ಕೃಷಿ ಸಹಾಯಕ ಉಪಕರಣಗಳು ಮಾರಾಟ, ಗವ್ಯೋತ್ಪನ್ನಗಳ ಮಾರಾಟ, ಕರಕುಶಲ ಉತ್ಪನ್ನಗಳ ಮಾರಾಟ, ಕಬ್ಬಿನ ಹಾಲಿನ ಮಾರಾಟ, ಬಹು ಜನರ ಬೇಡಿಕೆಯ ತೊಡಾದೇವು, ಬೆಲ್ಲದ ಬಾಳೆದಿಂಡು, ಪಪ್ಪಾಯಿ ಬಾಳೆದಿಂಡು, ಬೆಲ್ಲ , ಕಬ್ಬಿನ ಹಾಲಿನ ಉತ್ಪನ್ನಗಳ ಮಾರಾಟ ನಡೆಯಲಿದೆ.
ಇಂತಿದೆ ಕಾರ್ಯಕ್ರಮಗಳು.
ಫೇ. ೧೯ ರಂದು ಸಂಜೆ 5:30 ರಿಂದ ಸಮಾಜದ ಉತ್ತಮೋತ್ತಮ ವೈದಿಕರ ಕೂಡುವಿಕೆಯಲ್ಲಿ ವೈದಿಕರ ಗೋಷ್ಠಿ ನಡೆಯಲಿದೆ. ನಂತರದಲ್ಲಿ ಸ.ಕಿ.ಪ್ರಾ.ಶಾಲೆ ಹೊಸಾಡು, ಅಂಗನವಾಡಿ ಕೋಣಾರೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕುಮಾರಿ ಸನ್ನಿಧಿ ಮತ್ತು ಸಂಗಡಿಗರಿಂದ ಕುಚಿಪುಡಿ ನೃತ್ಯ, ಖ್ಯಾತ ಭಾಗವತ ಶಂಕರ ಭಟ್ಟ ಬ್ರಹ್ಮರು ಮತ್ತು ತಂಡದವರಿಂದ ‘ಪುಣ್ಯಕೋಟಿ’ ತಾಳಮದ್ದಳೆ ನಡೆಯಲಿದೆ.
ಫೇ. ೨೦ ರಂದು ಹಿರಿಯ ನಾಗರಿಕರ ಸಮಾವೇಶ ನಡೆಯಲಿದ್ದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬ್ಬೆಯ ವಿದ್ಯಾರ್ಥಿಗಳಿಂದ ದೀಪ ನೃತ್ಯ, ಪಲ್ಲವಿ ಅಶ್ವಥ್ ಅವರ ಬಳಗದವರಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ.
ಫೇ. ೨೧ ಶನಿವಾರ ‘ಗೋ ಸಂಧ್ಯಾ’ ಕಾರ್ಯಕ್ರಮ ನಡೆಯಲಿದ್ದು, ಗೋ ಬ್ಯಾಂಕಿನ ಸಾಮಾಜಿಕ ಜಾಲತಾಣದ ಯುವ ಬಳಗದ ಸಮಾವೇಶವೂ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಗತಿ ವಿದ್ಯಾಲಯ ಮೂರೂರು-ಕಲ್ಲಬ್ಬೆ ವಿದ್ಯಾರ್ಥಿಗಳಿಂದ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೇ. ೨೨ ರಂದು ಸಂಜೆ 4:00 ಗಂಟೆಯಿಂದ ‘ಮಾತೆಯರ ಸಮಾವೇಶ’, ‘ಮಕ್ಕಳ ಸಂತೆ’ ನಡೆಯಲಿದ್ದು, ವಿ. ಶಿವಾನಂದ ಭಟ್ಟ ಮತ್ತು ವಿ. ಎನ್.ಜಿ.ಹೆಗಡೆ ಕಪ್ಪೆಕೇರಿ, ರಾಗಶ್ರೀ ವಿದ್ಯಾಲಯ, ಹಡಿನಬಾಳ ಮತ್ತು ಲಕ್ಷ್ಮೀ ಹೆಗಡೆ, ಸಾಧನಾ ಸಂಗೀತ ವಿದ್ಯಾಲಯ, ಬಗ್ಗೋಣ, ಕುಮಟಾ ಇವರಿಂದ “ಭಜನ್ ಸಂಧ್ಯಾ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.