ಗೋಕರ್ಣದಲ್ಲಿರುವ ಸಾರ್ವಭೌಮ ಗುರುಕುಲಮ್ ಈ ಸಾಲಿನ ಪರೀಕ್ಷೆಯಲ್ಲಿಯೂ ಶೇಕಡಾ 100 ಫಲಿತಾಂಶ ದಾಖಲಿಸಿ ಮತ್ತೊಮ್ಮೆ ಶ್ರೇಷ್ಠ ಸಾಧನೆಗೈದಿದೆ. ಶ್ರೀಗುರುವಿನ ಅನುಗ್ರಹ, ಬೋಧಕ ವೃಂದದ ಪರಿಶ್ರಮ ಹಾಗೂ ಆಡಳಿತ ಮಂಡಳಿಯ ಉತ್ತೇಜನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಬಾರಿ ಕುಮಾರಿ ಅಭಿಧೇಯಾ ಆನಂದ ಅವರು 98.24% ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಗುರುಕುಲದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕುಮಾರಿ ತುಷ್ಟಿ ಹೊಸಮನೆ 97.92% ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದರೆ, ಕುಮಾರ ಪ್ರಣವ ಈ 97.76% ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ವಿಷಯವಾರು ಸಾಧನೆಯಲ್ಲಿಯೂ ವಿದ್ಯಾರ್ಥಿಗಳು ಮೆಚ್ಚುವಂತ ಫಲಿತಾಂಶ ತೋರಿದ್ದಾರೆ. ಕನ್ನಡ ವಿಷಯದಲ್ಲಿ 125ರಲ್ಲಿ 125 ಅಂಕಗಳನ್ನು 4 ಮಂದಿ ವಿದ್ಯಾರ್ಥಿಗಳು ಪಡೆದಿದ್ದಾರೆ. ಇಂಗ್ಲೀಷ್ ವಿಷಯದಲ್ಲಿ 100ರಲ್ಲಿ 100 ಅಂಕಗಳನ್ನು 2 ಮಂದಿ, ಸಂಸ್ಕೃತದಲ್ಲಿ 22 ಮಂದಿ ಹಾಗೂ ಸಮಾಜ ವಿಜ್ಞಾನದಲ್ಲಿ ಒಬ್ಬ ವಿದ್ಯಾರ್ಥಿ ಪೂರ್ಣ ಅಂಕಗಳನ್ನು ಗಳಿಸಿರುವುದು ವಿಶೇಷವಾಗಿದೆ.
ಗುರುಕುಲ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣದ ಸಮನ್ವಯದಿಂದ ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ಮಾಡಿದ್ದು, ಗುರುಕುಲದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಈ ಸಾಧನೆಗೆ ಪಾತ್ರರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀಗುರುಗಳ ಆಶೀರ್ವಾದಗಳೊಂದಿಗೆ ಗುರುಕುಲದ ಆಡಳಿತ ಮಂಡಳಿ, ಪ್ರಾಂಶುಪಾಲರು, ಮುಖ್ಯಾಧ್ಯಾಪಕರು ಹಾಗೂ ಬೋಧಕ-ಬೋಧಕೇತರ ವೃಂದದವರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.