ಕುಮಟಾ : ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಂಸ್ಥಾಪಕರಾದ ಶ್ರೀಶ್ರೀ ರವಿಶಂಕರ ಗುರೂಜಿಯವರ ಅವರ 70ನೇ ಜನ್ಮದಿನೋತ್ಸವದ ಅಂಗವಾಗಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ “ಅನುದಿನದ ತೆರೆಮರೆಯ ಸಾಧಕ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ.
ಈ ಪ್ರತಿಷ್ಠಿತ ಪ್ರಶಸ್ತಿಗೆ ಕುಮಟಾದ ಖ್ಯಾತ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಹಾಗೂ ಚಿಂತಕ ಮುರಳೀಧರ ಪ್ರಭು ಅವರು ಆಯ್ಕೆಯಾಗಿದ್ದು, ಸಮಾಜಮುಖಿ ಸೇವೆ, ಮಾನವೀಯ ಮೌಲ್ಯಗಳ ಪ್ರಚಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಗಮನಾರ್ಹ ಕೊಡುಗೆಗಳನ್ನು ಪರಿಗಣಿಸಿ ಈ ಗೌರವಕ್ಕೆ ಅವರನ್ನು ಆಯ್ಕೆಮಾಡಲಾಗಿದೆ.

ಸಮಾರಂಭವು ಮೇ 31ರಂದು ಸಂಜೆ 4.30 ಗಂಟೆಗೆ ಮಂಗಳೂರಿನ ಕೊಂಚಾಡಿಯ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರದಲ್ಲಿ ನಡೆಯಲಿದ್ದು, ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಸಾಧಕರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಆರ್ಟ್ ಆಫ್ ಲಿವಿಂಗ್ ಬಳಗದ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.