Home ಅಂಕಣಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ

ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ

ಬದುಕಿಗೆ ಬಣ್ಣ ತುಂಬಿದವರು ಲೇಖನ ಮಾಲಿಕೆ

by News Desk
0 comments

ಲೇಖನ : ಸಂದೀಪ ಭಟ್ಟ ಹೊಸಾಕುಳಿ

 

ಸರಿವ ಕ್ಷಣಗಳನ್ನು ಬೊಗಸೆಯಲ್ಲಿ ಹಿಡಿದಿಡಲಿಕ್ಕಾಗುವುದಿಲ್ಲ…. ಆದರೆ ಸುಳಿವ ನೆನಪುಗಳನ್ನು ಬರೆದಿಡುವುದಕ್ಕಾಗುತ್ತದೆ ನನ್ನ ಬಳಿ. ಕರೆವ ಮನೆಗಳಿಗೆಲ್ಲಾ ಹೋಗಲಿಕ್ಕಾಗುವುದಿಲ್ಲ ಒಮ್ಮೊಮ್ಮೆ…ಆದರೆ ಹರಸುವ ಮನಸ್ಸುಗಳನ್ನು ಹೃದಯದಲ್ಲಿಟ್ಟು ಪೂಜಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲವೂ ನನ್ನ ಬಳಿಯೇ ಸಾಧಿಸಲಿಕ್ಕಾಗುವುದಿಲ್ಲ ಜೀವನದಲ್ಲಿ….ಆದರೆ ಸಾಧಕರನ್ನು ಕಂಡಾಗ ಸಂತೋಷಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರಿಗೂ ಉಪಕರಿಸುವುದಕ್ಕಾಗುವುದಿಲ್ಲ ನನ್ನಲ್ಲಿ….ಆದರೆ ಯಾರೊಬ್ಬರು ಉಪಕರಿಸಿದರೂ ಸ್ಮರಿಸುವುದಕ್ಕಾಗುತ್ತದೆ ನನ್ನ ಬಳಿ. ಎಲ್ಲರೂ ಬಯಸಿದಂತೆ ಬದುಕುವುದಕ್ಕೆ ಸಾಧ್ಯವಿಲ್ಲ…..ಆದರೆ ನಮ್ಮಷ್ಟಕ್ಕೆ ನಾವು ಬದುಕುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ಹಾರ ತುರಾಯಿ ಶಾಲು ಹೊದಿಸಿಯೇ ಸನ್ಮಾನ ಮಾಡಬೇಕೆಂದಿಲ್ಲ…ಆದರೆ ಪ್ರೀತಿಯಿಂದ ಅಭಿಮಾನದಿಂದ ನಾಲ್ಕು ಮಾತಾಡುವುದಕ್ಕೆ ಸಾಧ್ಯವಿದೆ ನಮ್ಮ ಬಳಿ. ನನ್ನ ಕಣ್ಣೆದುರಿಗೆ ಸಿಕ್ಕ ಪ್ರತಿಯೊಬ್ಬರ ಬದುಕಿಗೂ ಬಣ್ಣವಾಗುವುದಕ್ಕೆ ಸಾಧ್ಯವಿಲ್ಲ… ಆದರೆ ನನ್ನ ಬದುಕಿಗೆ ಬಣ್ಣವಾದವರನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಕ್ಕೆ ಸಾಧ್ಯವಿದೆ ನನ್ನ ಬಳಿ.

*ಶ್ರೀ ಗುರುರಾಜ ಶೆಟ್ಟಿ ವಿಧಾತ್ರಿ ಅಕಾಡೆಮಿ*

ಪ್ರತಿಯೊಂದಕ್ಕೂ ಕಾರಣವಿರುತ್ತದೆ. ಸಂಕಲ್ಪವಿರುತ್ತದೆ. ಗೆಲುವಿಗೆ ಶ್ರಮವಿದ್ದರೆ ಸೋಲಿಗೆ ನೆಪವಿರುತ್ತದೆ. ಯಶಸ್ಸು ಎಲ್ಲರನ್ನೂ ಕೈ ಹಿಡಿಯುವುದಿಲ್ಲ. ಕೈ ಹಿಡಿದರೂ ಹಲವರು ಯಶಸ್ಸನ್ನು ಬಹಳ ದಿನ ಇಟ್ಟುಕೊಳ್ಳಲು ಯಶಸ್ವಿಯಾಗುವುದಿಲ್ಲ. ಮಾತಾಡುವುದೇ ಸಾಧನೆಯಾಗಬಾರದು ಸಾಧನೆ ಮಾತಾಡಬೇಕು ಎಂಬ ಮನಸ್ಸಿದ್ದವನು ತನ್ನ ಮುಗುಳುನಗೆ ಮತ್ತು ಯೋಚನಾ ಬದ್ಧ ಕಾರ್ಯಗಳಿಂದಲೇ ಜಯ ಸಾಧಿಸುತ್ತಾನೆ. ತುಸು ಹೆಚ್ಚೋ ಕಡಿಮೆಯೋ ಹಣ ಪ್ರತಿಯೊಬ್ಬನ ಬಳಿಯೂ ಇದೆ. ಆದರೆ ಸದ್ಗುಣ ಮಾತ್ರ ಪ್ರತಿಯೊಬ್ಬನ ಬಳಿಯೂ ಇಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಮನೋ ವಿಕಾಸಗಳೂ ಇವೆ. ಮನೋ ವಿಕಾರಗಳೂ ಇವೆ. ವಿಕಾರಗಳು ಗೌಣವೆನಿಸಿ ವಿಕಾಸ ಅಧಿಕವೆನಿಸಿದಾಗ ಮಾತ್ರ ಆತನ ವರ್ಚಸ್ಸು ಸಮಾಜದಲ್ಲಿ ಹೆಚ್ಚಾಗಲಿಕ್ಕೆ ಸಾಧ್ಯ. ಅಂಥ ವರ್ಚಸ್ವಿ ಸ್ನೇಹಿತರೊಬ್ಬರು ಬದುಕಿನ ಹಾದಿಯಲ್ಲಿ ಜೊತೆಯಾಗಿದ್ದು ನನ್ನ ಸೌಭಾಗ್ಯವೆಂದೇ ನಾನು ಭಾವಿಸುತ್ತೇನೆ. ಗುರುರಾಜ ಶೆಟ್ಟರು ನನ್ನ ಇಂದಿನ ಅಕ್ಷರ ಅತಿಥಿ.
ಇತ್ತೀಚಿಗೆ ಶೆಟ್ಟರದ್ದೇ ಹವಾ….ಸಿನಿಮಾ, ರಾಜಕೀಯ, ವ್ಯಾಪಾರ, ಶಿಕ್ಷಣ ಹೀಗೆ ಪ್ರತಿಯೊಂದರಲ್ಲೂ ಶೆಟ್ಟರಿಗೆ ಗಜಕೇಸರಿ ಯೋಗ ನಡೆಯುತ್ತಿದೆ. 😆 ಅಂಥ ಶೆಟ್ಟರ ಸಾಲಿನಲ್ಲಿ ತೀರಾ ಹತ್ತಿರ ನಿಂತವರು ನಮ್ಮ ಗುರುರಾಜ ಶೆಟ್ಟರು. ಶ್ರೀಯುತ ಚಿದಾನಂದ ಭಂಡಾರಿ, ತಮ್ಮ ಗಣೇಶ ಇವರೆಲ್ಲಾ ಮೊದಲೇ ಕೊಂಕಣದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರ ಮುಖೇನ ಪರಿಚಿತರಾದ ಗುರುರಾಜ ಶೆಟ್ಟರು ಮೃದು ಮನಸ್ಸಿನ ಹೃದಯವಂತ ವ್ಯಕ್ತಿ.
ಪರ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ ಬಂದರೂ ನಮ್ಮವರೊಡನೆ ನಮ್ಮವರೇ ಆಗಿ ಹೋದ ಗುರುರಾಜ ಶೆಟ್ಟರು ಕೊಂಕಣ ಎಜ್ಯುಕೇಶನ್ ಸಂಸ್ಥೆಯ ಜೊತೆಗೆ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವವನ್ನು ಸ್ಥಾಪಿಸಿ ಇಂದು ನಾಡಿನ ಪ್ರಖ್ಯಾತ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುವುದಕ್ಕೆ ಅವಿರತ ಶ್ರಮವಹಿಸುತ್ತಿದ್ದಾರೆ. ಅವರ ಶ್ರೀಮಂತಿಕೆಗೆ ಮೊದಲೇ ಇದ್ದ ವ್ಯವಹಾರ ಜ್ಞಾನಕ್ಕೆ ಕೋಟಿ ದುಡಿಯುವ ಹಲವಾರು ದಾರಿಗಳಿದ್ದೂ ಅವರು ಆಯ್ಕೆ ಮಾಡಿಕೊಂಡಿದ್ದು ಮಾತ್ರ ವಿದ್ಯಾದಾನಗೈಯುವ ಶ್ರೇಷ್ಠ ಕೆಲಸ.
ಗಿರಿರಾಜನಂತೆ ಕಾಣುವ ಗುರುರಾಜರಿಗೆ ದೈವಿದತ್ತವಾದ ಸದೃಢಕಾಯ, ಗಂಭೀರತೆ, ಸ್ನೇಹಶೀಲತೆಯ ಸೊಬಗಿದೆ. ಆಂತರ್ಯದಿಂದ ಪ್ರೀತಿಸುವ ಗುಣವಿದೆ. ವೃಥಾ ಕಾಲೆಳೆಯುವ, ಲೇವಡಿ ಮಾಡುವ, ಅನ್ಯ ಅಸಭ್ಯ ಸುದ್ದಿಗಳೆಡೆಗೆ ಕಣ್ಣೆತ್ತೂ ನೋಡದ ಗುರುರಾಜ ಶೆಟ್ಟರು ಮಿತಭಾಷಿ. ತನ್ನ ಸಂಸ್ಥೆಯ ಅಭಿವೃದ್ದಿಯ ಕುರಿತಾದ ದೂರದೃಷ್ಟಿ, ಸತತ ಚಿಂತನೆ, ಕಠಿಣ ಪರಿಶ್ರಮ, ಕಾರ್ಯಶೃದ್ಧೆ, ವಾಸ್ತವ ಜಗತ್ತಿಗೆ ಬಹುಬೇಗ ಹೊಂದಿಕೊಳ್ಳುವ ಗುಣಗಳಿಂದ ಅವರು ಗುರುವಾಗಿ ರಾಜನಂತೆ ಕಂಗೊಳಿಸುತ್ತಾರೆ.
ಯಾರು ಏನೇ ಹೇಳಲಿ. ಒಂದು ವಿದ್ಯಾಸಂಸ್ಥೆಯನ್ನು ಮುನ್ನಡೆಸುವ ಕೆಲಸ ಅಷ್ಟು ಸುಲಭವಾದುದಲ್ಲ. ಹಣ ಹಾಕಿ ಹಣ ತೆಗೆಯುವ ಲಾಭದಾಯಕ ಉದ್ಯಮವಲ್ಲ ಅದು. ವಿದ್ಯಾಸಂಸ್ಥೆ ನಡೆಸುವುದು ಒಂದು ಸಮಾಜಸೇವೆಯ ಅಂಗ. ನೂರಾರು ಶಿಕ್ಷಕರನ್ನು, ಲೆಕ್ಕಿಗರನ್ನೂ, ಸೆಕ್ಯೂರಿಟಿಯವರನ್ನೂ, ಪ್ಯೂನ ಇತರ ಸಿಬ್ಬಂದಿಗಳನ್ನೂ ಆಯಾಗಳನ್ನೂ ಸಂಭಾಳಿಸುವುದರ ಜೊತೆಗೆ ಥರಥರದ ವಯೋಮಾನದ, ಬುದ್ಧಿಮಟ್ಟದ, ವಿದ್ಯಾರ್ಥಿಗಳನ್ನು ಸಾಧಕರನ್ನಾಗಿಸುವ ಮಹತ್ಕಾರ್ಯ ಅದೊಂದು ತಪಸ್ಸು. ಗುರುರಾಜ ಶೆಟ್ಟರ ವಿಧಾತ್ರಿ ಅಕಾಡೆಮಿ ಉತ್ತರ ಕನ್ನಡ ಜಿಲ್ಲೆಯ ಪದವಿಪೂರ್ವ ಶಿಕ್ಷಣದಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸಿದ್ದು ಸುಳ್ಳಲ್ಲ. ಇಂದು ಮಕ್ಕಳ ಮೊದಲ ಆಯ್ಕೆ ಕೊಂಕಣ ಅನ್ನುವಷ್ಟರ ಮಟ್ಟಿಗೆ ಆ ಸಂಸ್ಥೆಯನ್ನು ಬೆಳೆಸಿ ನಿಲ್ಲಿಸಿದ ಖ್ಯಾತಿ ಗುರುರಾಜ ಶೆಟ್ಟರದ್ದು.
ಬಹುಬೇಗ ವ್ಯಕ್ತಿಯ ನಾಡಿಮಿಡಿತವನ್ನು ಅರಿಯಬಲ್ಲ ಗುರುರಾಜ ಶೆಟ್ಟರು ಮೌನವೇ ಬಂಗಾರವಾದರೂ ಮಾತನಾಡುವ ಬೆಳ್ಳಿಯನ್ನೂ ಜೊತೆಗಿರಿಸಿಕೊಂಡಿದ್ದಾರೆ. ಬಂಗಾರದಂಗಡಿಯಲ್ಲಿ ಬೆಳ್ಳಿಯನ್ನೂ ಮಾರುವಂತೆ ಅವರ ಬಂಗಾರದಂಗಡಿಯಲ್ಲಿ ಮಾತನಾಡುವ ನನ್ನಂತಹ ಅನೇಕ ಮಾತಿನ ಸದಸ್ಯರಿದ್ದಾರೆ. ಎಲ್ಲರನ್ನೂ ಒಂದೇ ಭಾವದಿಂದ ಕಾಣುವ ಅವರ ಸಾರಥ್ಯದಲ್ಲಿ ಮಾತುಗಾರರ ಸಮಾವೇಶ ಮಾಡಿಸಿ ನಮ್ಮನ್ನೆಲ್ಲಾ ಸಹೋದರರಂತೆ ನಡೆಸಿಕೊಂಡ ಅವರ ಪರಿಗೆ ನಾನು ಬೆರಗಾಗಿದ್ದೇನೆ.
ಗುರುರಾಜ ಶೆಟ್ಟರ ಮೇಲಿನ ಅಭಿಮಾನ ಅದು ಆಂತರ್ಯವಾದದ್ದು. ಯಾರೋ ಹೊಗಳುತ್ತಾರೆಂದು ಗೆದ್ದೆತ್ತಿನ ಬಾಲ ಜೋತುವ ಸ್ವಭಾವ ನನಗೆ ಹುಟ್ಟಿನಿಂದಲೇ ಇಲ್ಲ. ನಾನಾಯ್ತು ನನ್ನ ಕೆಲಸವಾಯ್ತು ಅಂತಿದ್ದವನಿಗೆ ಚಿದಾನಂದ ಭಂಡಾರಿಯವರು ಹಾಗೂ ಗಣೇಶನಂಥವರಿಂದ ಮತ್ತಷ್ಟು ಸ್ನೇಹಿತರ ಪರಿಚಯವಾಗಿದೆ. ಅವರಿಗೆ ನನ್ನ ಮೇಲಿರುವ ಪ್ರೀತಿ ನನ್ನನ್ನು ಮತ್ತಷ್ಟು ಜನರಿಗೆ ಪರಿಚಯಿಸಿದೆಯಷ್ಟೇ. ಹೀಗಿದ್ದೂ ಗುರುರಾಜ ಶೆಟ್ಟರ ದೈನಂದಿನ ಕೆಲಸ ಕಾರ್ಯಗಳಲ್ಲಿ ವೃಥಾ ಫೋನಾಯಿಸಿ ಮೂಗುತೂರಿಸುವ ಜಾಯಮಾನವಿಲ್ಲ ನನಗೆ. ಅಷ್ಟಕ್ಕೂ ಪದೇ ಪದೇ ಆರಾಮಿದ್ದೀರಾ ಎಂದೂ ನಾನು ವಿಚಾರಿಸುವುದಿಲ್ಲ. ಯಾಕೆಂದರೆ ನನ್ನ ನಿತ್ಯ ಪ್ರಾರ್ಥನೆಯೇ ನನಗೆ ಆತ್ಮೀಯತೆ ತೋರಿದವರೆಲ್ಲ ಚೆನ್ನಾಗಿರಲಿ ಎಂಬುದಾಗಿರುತ್ತದೆ. ನಾನು ಸಂತೋಷವಾಗಿರುವುದಕ್ಕೂ ನನ್ನ ಆತ್ಮೀಯರ ಪ್ರಾರ್ಥನೆಯೇ ಕಾರಣ.
ಗುರುರಾಜ ಶೆಟ್ಟರ ಸೌಜನ್ಯ ಭರಿತ ಮಾತು, ವಿನಯಶೀಲ ನಡವಳಿಕೆ, ಅವರನ್ನು ಹಲವರು ನೆನಪಿಸುವಂತೆ ಮಾಡಿದೆ. ತಮ್ಮ ವಿದ್ಯಾಸಂಸ್ಥೆಯ ಹಲವು ಕಾರ್ಯಕ್ರಮಗಳನ್ನು ಅವರು ಪ್ರಸ್ತುತಗೊಳಿಸುವ ರೀತಿ ಹಲವರ ಹುಬ್ಬೇರುವಂತೆ ಮಾಡಿದೆ. ಪ್ರತಿ ನಡೆಯನ್ನೂ ನೂತನವಾಗಿಸಬೇಕೆನ್ನುವ ಅವರ ಬಯಕೆ ಫಲಿಸಿದೆ. ಗುರುರಾಜ ಶೆಟ್ಟರು ಕುಮಟಾದ ರೋಟರಿಯನ್ ಆಗಿಯೂ ಗೌರವಾರ್ಹರಾಗಿದ್ದಾರೆ.
ತಾನೊಂದೇ ಬೆಳೆಯದೇ ತಮ್ಮವರನ್ನೆಲ್ಲಾ ಬೆಳೆಸಬೇಕೆನ್ನುವ ಹೃದಯ ವೈಶಾಲ್ಯತೆ ಎಷ್ಟು ಮಂದಿಗೆ ಇರುತ್ತದೆ? ಸ್ವಾರ್ಥಸಾಧನೆಯೊಂದೇ ಪರಮೋಚ್ಛ ಗುರಿಯಾಗಿರುವ ಬಹುತೇಕರಲ್ಲಿ ವಿರಳವಾಗಿ ನಿಲ್ಲುವ ವ್ಯಕ್ತಿತ್ವ ನಮ್ಮ ಗುರುರಾಜ ಶೆಟ್ಟರದ್ದು.
ಬಂಗಲೆಯಲ್ಲಿ ಬದುಕುವ ಸಾಮರ್ಥ್ಯ ಇದ್ದೂ ನಮ್ಮಂಥವರ ಹಳ್ಳಿಯ ಮನೆಯೇ ಬಂಗಲೆಯೆನ್ನುವ, ಭಟ್ಟರ ತಂಬಳಿಯೇ ಅಮೃತವಿದ್ದಂತೆ ಎನ್ನುವ ಗುರುರಾಜರ ಸರಳತೆ ಅವರನ್ನು ಮತ್ತಷ್ಟು ಹತ್ತಿರಕ್ಕೆ ತಂದಿದೆ.
ನಾನು ಅವರನ್ನು ಹೃದಯದಿಂದ ಪ್ರೀತಿಸುತ್ತೇನೆ. ನನ್ನನ್ನು ಮುಖ್ಯ ಅತಿಥಿಯನ್ನಾಗಿಸಿದ ಅವರು ನನಗೆ ಬದುಕಿನಲ್ಲಿ ಯಾವಾಗಲೂ ಮುಖ್ಯ ಅತಿಥಿಯಾಗಿಯೇ ಇರುತ್ತಾರೆ. ಪ್ರತಿದಿನ ಪ್ರತಿಕ್ಷಣ ಸಂತೋಷವಾಗಿಸುವ ಸ್ನೇಹಿತರೇ ಬದುಕಿನ ನಿಜವಾದ ಆಸ್ತಿಯೆಂದು ನಂಬಿದವನಿಗೆ ಭಗವಂತ ಗುರುರಾಜ ಶೆಟ್ಟರನ್ನೂ ಪರಿಚಯಿಸಿದ್ದಾನೆ ಎನ್ನುವ ದೃಢವಾದ ನಂಬಿಕೆ ನನ್ನದು.
ಮುದ್ದು ಮಕ್ಕಳು, ಮಡದಿ, ಪಾಲಕರು ಸಂಸಾರ ಇವೆಲ್ಲದರ ಕುರಿತಾಗಿ ಹೆಚ್ಚಿಗೆ ಪ್ರಶ್ನಿಸಿದವನಲ್ಲ ನಾನು. ನನಗೆ ಬೇರೆಯವರ ವೈಯುಕ್ತಿಕ ವಿಚಾರಗಳ ಕುರಿತಾಗಿ ಆ ಪರಿ ಕುತೂಹಲವಿಲ್ಲ. ಆದರೂ ಗುರುರಾಜರು ಈ ಪರಿ ನಗುನಗುತ್ತಾ ಖುಷಿಯಿಂದ ಇರುತ್ತಾರೆಂದರೆ ಅವರ ಹಿನ್ನೆಲೆಯಲ್ಲಿ ಬಲವಾದ ನೆಮ್ಮದಿಯುತ ಸಂಸಾರ ಇದೆ ಎಂದೇ ಭಾವಿಸುವವನು ನಾನು.
ಗುರುರಾಜ ಶೆಟ್ಟರ ಸಂಘಟನೆಯಲ್ಲಿ ಹಲವಾರು ಕಾರ್ಯಕ್ರಮಗಳು ಸಂಸ್ಥೆಯಲ್ಲಿ ಜರುಗುತ್ತವೆ. ಖರ್ಚಿನ ಮುಖ ನೋಡದ ಶೆಟ್ಟರು ಅನನ್ಯವಾಗಿರುವ ಕಾರ್ಯವೊಂದನ್ನೇ ಅಪೇಕ್ಷಿಸುತ್ತಾರೆ. ತಲೆಯ ಮೇಲೆ ಕೋಡು ಮೂಡಿಸಿಕೊಂಡು ಓಡಾಡದ ಗುರುರಾಜ ಶೆಟ್ಟರು ಆಗಾಗ ಎದುರಾದರೂ ನನ್ನ ಮನಸ್ಸಿಗೊಂದು ಎನರ್ಜಿ ಬರುತ್ತದೆ. ಆಸರಕ್ಕಾಗುವವರು ಹಲವರು. ಬೇಸರಕ್ಕಾಗುವವರು ಹಲವರು. ಅದೆರಡಕ್ಕೂ ಒದಗುವವರು ಕೆಲವೇ ಕೆಲವರು. ಗುರುರಾಜ ಶೆಟ್ಟರ ಸನ್ನಡತೆಯೇ ಅವರಿಗೆ ಹೆಸರು-ಹಣ ಎರಡನ್ನೂ ತಂದುಕೊಡುತ್ತದೆ. ಅವರಂಥ ಸ್ನೇಹಿತರನ್ನು ಪಡೆದ ನಾನೂ ಶ್ರೀಮಂತ.
ಬಯಸಿದ್ದೆಲ್ಲಾ ಸಿಗುವುದಿಲ್ಲ. ಬಯಸಿ ಬಂದಿದ್ದೂ ಕೆಲವೊಮ್ಮೆ ಭಾಗ್ಯವೆನಿಸುವುದಿಲ್ಲ. ಬಯಸದೇ ಬಂದಿದ್ದೂ ಭಾಗ್ಯವೆನಿಸುವದಿದ್ದರೆ ಅದು ದೇವನದ್ದೇ ನಿಶ್ಚಯ. ವಿದ್ಯಾಧಿದೇವತೆ ಶಾರದಾಂಬೆಯ ನಿತ್ಯ ಪೂಜಕರಾದ ನಮ್ಮಂಥ ಭಟ್ಟರು ಶೆಟ್ಟರಿಗೆ ಅಕ್ಷರವೊಂದು ವ್ಯತ್ಯಾಸವಾದೀತೇ ಹೊರತು ಭಾವವಲ್ಲ.
ನಾನು ನಂಬಿದ ಭಗವಾನ್ ಸದ್ಗುರು ಶ್ರೀಧರರ ಅನುಗ್ರಹ ಗುರುರಾಜ ಶೆಟ್ಟರ ಮೇಲಿರಲಿ. ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿ ಅವರಿಗೂ ಅವರ ಕುಟುಂಬಕ್ಕೂ ಒಳ್ಳೆಯದು ಮಾಡಲಿ.

*ಗುರುರಾಜ ಶೆಟ್ಟರನ್ನು ಪ್ರೀತಿಯಿಂದ ಅಭಿನಂದಿಸೋಣ.*

 

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".