Home ಜಿಲ್ಲೆಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ

ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ

ಸಂಸ್ಕಾರ ಭಾರತಿ ಉತ್ತರ ಕನ್ನಡ ಜಿಲ್ಲಾ ಘಟಕವು ಆಯೋಜಿಸಿದ್ದ "ಯಕ್ಷಗಾನ ಪರಿವಾರ ಸಮ್ಮಿಲನ"

by News Desk
0 comments

ಕುಮಟಾ : ಯಕ್ಷಗಾನವು ಕೇವಲ ಮನರಂಜನೆಯ ಕಲೆಯಲ್ಲ, ಭಾರತೀಯ ಸಂಸ್ಕೃತಿ, ಮೌಲ್ಯಗಳು ಮತ್ತು ಜೀವನದರ್ಶನವನ್ನು ಜನರಿಗೆ ತಲುಪಿಸುವ ಜೀವಂತ ಮಾಧ್ಯಮವಾಗಿದೆ. ಇಂತಹ ಪರಿಪೂರ್ಣ ಕಲೆಯ ಕಲಾವಿದರು ಒಂದೇ ವೇದಿಕೆಯಲ್ಲಿ ಸಂಘಟಿತರಾಗುವುದು ಕಾಲದ ಅಗತ್ಯ ಎಂದು ಅಖಿಲ ಭಾರತ ಸಂಸ್ಕಾರ ಭಾರತಿ ಉಪಾಧ್ಯಕ್ಷ ಹಾಗೂ ಮಹಾಭಾರತ ಧಾರಾವಾಹಿಯ ಶ್ರೀಕೃಷ್ಣ ಪಾತ್ರಧಾರಿ ನಿತೀಶ ಭಾರಧ್ವಜ ಅಭಿಪ್ರಾಯಪಟ್ಟರು.

ಪಟ್ಟಣದ ಹವ್ಯಕ ಸಭಾಭವನದಲ್ಲಿ ಸಂಸ್ಕಾರ ಭಾರತಿ ಉತ್ತರ ಕನ್ನಡ ಜಿಲ್ಲಾ ಘಟಕವು ಆಯೋಜಿಸಿದ್ದ “ಯಕ್ಷಗಾನ ಪರಿವಾರ ಸಮ್ಮಿಲನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿನಿಮಾ ಉದಯಕ್ಕೂ ಮುನ್ನವೇ ಯಕ್ಷಗಾನ ಜನಮನ ಗೆದ್ದ ಕಲೆಯಾಗಿದ್ದು, ಚಿತ್ರರಂಗದಲ್ಲಿ ಕಲಾವಿದರನ್ನು ಪರದೆಯ ಮೇಲೆ ಮಾತ್ರ ಕಾಣಬಹುದು. ಆದರೆ ಯಕ್ಷಗಾನದಲ್ಲಿ ಕಲಾವಿದರ ಅಭಿನಯ, ನೃತ್ಯ, ಸಂಗೀತ ಹಾಗೂ ಭಾವಾಭಿವ್ಯಕ್ತಿಯನ್ನು ಪ್ರೇಕ್ಷಕರು ನೇರವಾಗಿ ಅನುಭವಿಸುವ ಅವಕಾಶ ದೊರೆಯುತ್ತದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯಲ್ಲಿ ‘ಪರಿವಾರ’ ಎಂಬ ಪರಿಕಲ್ಪನೆ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿದೆ. ಕಂಸ, ರಾವಣರಂತಹ ಪಾತ್ರಗಳ ದುಷ್ಟತನವೂ ಹಾಗೂ ಮಹನೀಯರ ಆದರ್ಶ ಜೀವನವೂ ಕಲೆಯ ಮೂಲಕ ಸಮಾಜಕ್ಕೆ ತಲುಪಿದಾಗ ಜನರಲ್ಲಿ ಜಾಗೃತಿ ಮೂಡುತ್ತದೆ. ಬದಲಾಗುತ್ತಿರುವ ಭಾರತದಲ್ಲಿ ಕಲಾವಿದರ ಸಾಮಾಜಿಕ ಹೊಣೆಗಾರಿಕೆ ಹೆಚ್ಚಿದ್ದು, ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕಾರ್ಯದಲ್ಲಿ ಕಲಾವಿದರು ಮುಂಚೂಣಿಯಲ್ಲಿರಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಯಕ್ಷಗಾನಕ್ಕೆ ಸರ್ಕಾರಗಳಿಂದ ದೊರೆಯುತ್ತಿರುವ ಪ್ರೋತ್ಸಾಹ ಸಮರ್ಪಕವಾಗಿಲ್ಲ. ಈ ಶ್ರೇಷ್ಠ ಕಲೆಯನ್ನು ಉಳಿಸಿ ಬೆಳೆಸಲು ಸರ್ಕಾರ ಹಾಗೂ ಸಮಾಜ ಎರಡೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.

ಯಕ್ಷಗಾನ ಪರಿವಾರ ಸಮ್ಮಿಲನದ ಕಾರ್ಯಾಧ್ಯಕ್ಷ ಶಂಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕನ್ನಡದಲ್ಲಿ ಪ್ರತಿಭಾವಂತ ಕಲಾವಿದರಿದ್ದರೂ ಜಿಲ್ಲೆಯಲ್ಲೇ ಯಕ್ಷಗಾನದ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕಲಾಭಿಮಾನಿಗಳ ಬದಲಿಗೆ ಕಲಾವಿದರ ಗುಂಪುಗಳಾಗಿ ವಿಭಜನೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮುಂದಿನ ಪೀಳಿಗೆಗಾಗಿ ಯಕ್ಷಗಾನವನ್ನು ಉಳಿಸುವ ಉದ್ದೇಶದಿಂದ ಈ ಸಮ್ಮಿಲನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ, ಕೊಂಡದಕುಳಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದ ಕೃಷ್ಣ ಯಾಜಿ, ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ, ಸಂಸ್ಕಾರ ಭಾರತಿ ಉತ್ತರ ಕರ್ನಾಟಕ ಉತ್ತರಪ್ರಾಂತದ ಉಪಾಧ್ಯಕ್ಷ ಶಿವಾನಂದ ಹೆಗಡೆ (ಕೆರೆಮನೆ), ಯಕ್ಷಗಾನ ಚಿಂತಕ ರಮೇಶ ನಾಯಕ, ಡಾ. ಶಶಿಧರ ನರೇಂದ್ರ ಹಾಗೂ ಚಿತ್ರನಟ ನಿರ್ನಳ್ಳಿ ರಾಮಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿತೀಶ ಭಾರಧ್ವಜ ಅವರನ್ನು ಸಂಘಟಕರು ಹಾಗೂ ಕಲಾವಿದರಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಸ್ಕಾರ ಭಾರತಿ ಉತ್ತರ ಕನ್ನಡದ ಸಂಘಟನಾ ಕಾರ್ಯದರ್ಶಿ ರವಿ ಗುನಗಾ ಅವರು ಚಿತ್ರಿಸಿದ ಹಿರಿಯ ಯಕ್ಷಗಾನ ಕಲಾವಿದ ದಿವಂಗತ ಏಕ್ಟರ್ ವಿ.ಎಂ. ಜೋಶಿ (ಗೋಕರ್ಣ) ಅವರ ಭಾವಚಿತ್ರವನ್ನು ನಿತೀಶ ಭಾರಧ್ವಜ ಲೋಕಾರ್ಪಣೆ ಮಾಡಿದರು.

ಮೂಡಲಮನೆ ಪ್ರಶಾಂತ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಯಕ್ಷಗಾನ ಕಲಾವಿದರು, ಅಭಿಮಾನಿಗಳು ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮಿಲನಕ್ಕೆ ಮೆರುಗು ತಂದರು.

You may also like

Leave a Comment

Latest news
ಉತ್ತರ ಕನ್ನಡದ 5 ತಾಲ್ಲೂಕುಗಳಲ್ಲಿ ನಾಳೆ ಶಾಲೆ, ಅಂಗನವಾಡಿಗಳಿಗೆ ರಜೆ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂಬ ಎಚ್ಚರಿಕೆ ನೀಡಿದ ಗ್ರಾಮಸ್ಥರು. ಉತ್ತರ ಕನ್ನಡ ಸೇರಿ ಕರಾವಳಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ – ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ನಾಳೆ ರಜೆ ಎಐಟಿಎಂನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ಸಂಭ್ರಮ ಓದನ್ನು ಸರಸ್ವತಿಯ ಪೂಜೆಯಂತೆಯೇ ಮಾಡಿದರೆ ಸಾಧನೆ ಸಾಧ್ಯ : ರಾಘವೇಶ್ವರ ಶ್ರೀ ಸರಸ್ವತಿ ಪಿಯು ಕಾಲೇಜಿಗೆ ಶಕುಂತಲಾ ಕಿಣಿ ಭೇಟಿ ಯಕ್ಷಗಾನದ ಉಳಿವಿಗೆ ಕಲಾವಿದರ ಸಂಘಟನೆ ಅಗತ್ಯ: ನಿತೀಶ ಭಾರಧ್ವಜ ಜನತೆಯ ಪ್ರೀತಿಗಳಿಸಿದ ವಿಧಾತ್ರಿಯ ಗುರುರಾಜ ಶೆಟ್ಟಿ 'ಅಕ್ಷರದಿಂದ ಆತ್ಮಜಾಗೃತಿ' ಸಾಮಾಜಿಕ ಚಿಂತನ ಕಾರ್ಯಕ್ರಮ ಜೂ. 28ರಂದು ಸಾಮಾಜಿಕ ಸೇವೆಗೆ ಗೌರವ: ಮುರಳೀಧರ ಪ್ರಭು ಅವರಿಗೆ ‘ಅನುದಿನದ ತೆರೆಮರೆಯ ಸಾಧಕ’ ಪ್ರಶಸ್ತಿ".