ಗೋಕರ್ಣ : ವಿದ್ಯೆಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಬೇಕೆಂಬ ದೃಢ ಸಂಕಲ್ಪ ಹೊಂದಿರುವ ವಿದ್ಯಾರ್ಥಿಗಳು ಶ್ರದ್ಧೆ, ಏಕಾಗ್ರತೆ ಹಾಗೂ ಭಕ್ತಿಯಿಂದ ಅಧ್ಯಯನ ನಡೆಸಿದಾಗ ಮಾತ್ರ ಜೀವನದಲ್ಲಿ ಉನ್ನತ ಸಾಧನೆ ಸಾಧ್ಯವಾಗುತ್ತದೆ. ಓದನ್ನು ಕೇವಲ ಪರೀಕ್ಷೆಗಾಗಿ ಅಲ್ಲ, ಸರಸ್ವತಿ ದೇವಿಯ ಆರಾಧನೆಯೆಂದು ಭಾವಿಸಿ ಅಭ್ಯಾಸ ಮಾಡುವವರು ನಿಜವಾದ ಸಾಧಕರಾಗುತ್ತಾರೆ ಎಂದು ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅವರು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್‌ನಲ್ಲಿ ಪಿ.ಯು ವಿಭಾಗ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲು ಆಯೋಜಿಸಿದ್ದ ‘ಶತಮಾನಮ್’ 100 ಶೇ. ಸಾಧನೆಯ ಸಂಭ್ರಮ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಗತ್ತಿನಲ್ಲಿ ಸಂಪೂರ್ಣ ಪೂರ್ಣತೆ ಎಂಬುದು ಇಲ್ಲ. ನಿಜವಾದ ಪೂರ್ಣತೆ ದೊರೆಯುವುದು ಮುಕ್ತಿಯಲ್ಲಷ್ಟೇ. ಆದರೂ ಜೀವನದ ಪ್ರತಿಯೊಂದು ಕಾರ್ಯದಲ್ಲೂ ಪರಿಪೂರ್ಣತೆಯತ್ತ ಸಾಗುವ ನಿರಂತರ ಪ್ರಯತ್ನವೇ ಮನುಷ್ಯನನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ವಿದ್ಯಾಭ್ಯಾಸದಲ್ಲಿಯೂ ಇದೇ ಮನೋಭಾವ ಅಗತ್ಯ. ಖಾಲಿ ಪಾತ್ರೆಯಂತೆ ಶಾಲೆಗೆ ಬರುವ ಮಕ್ಕಳ ಮನಸ್ಸನ್ನು ಜ್ಞಾನದಿಂದ ತುಂಬಿಸಿ, ನಿತ್ಯ ಸರಸ್ವತಿ ಆರಾಧನೆಯ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸುವ ಕಾರ್ಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್‌ನಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದು ಶ್ರೀಗಳು ಉಲ್ಲೇಖಿಸಿದರು.
ವಿದ್ಯೆ ಕೇವಲ ಅಂಕಗಳ ಗಳಿಕೆಗೆ ಸೀಮಿತವಾಗದೆ ಸಂಸ್ಕಾರ, ಶಿಸ್ತು, ಮೌಲ್ಯಗಳು ಹಾಗೂ ಜೀವನ ಕೌಶಲಗಳನ್ನು ಬೆಳೆಸುವ ಸಾಧನವಾಗಬೇಕು. ಇಹಲೋಕದಲ್ಲೇ ಪರಿಪೂರ್ಣತೆಯತ್ತ ಸಾಗುವ ಪ್ರಯತ್ನ ನಿರಂತರವಾಗಿರಬೇಕು. ಬದುಕಿನಲ್ಲಿ ಸಂಸ್ಕಾರ, ಸಾಧನೆ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಆದರ್ಶ ನಾಗರಿಕರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ, ಶೇ.100 ಫಲಿತಾಂಶದ ಸಾಧನೆ ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಸಮನ್ವಯದ ಪ್ರಯತ್ನದಿಂದ ಈ ಯಶಸ್ಸು ಸಾಧ್ಯವಾಗಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಇಂತಹ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರ ಮುಂದುವರಿಯಲಿದೆ ಎಂದು ಹೇಳಿದರು.
ವಿದ್ಯಾ ಪರಿಷತ್ತಿನ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಮಾತನಾಡಿ, ಗುರು ಎಂಬುದು ಕೇವಲ ವ್ಯಕ್ತಿಯಲ್ಲ, ಜ್ಞಾನ ಮತ್ತು ಕರ್ತವ್ಯದ ಪ್ರತೀಕವಾಗಿದೆ. ಪ್ರತಿಯೊಂದು ಕಾರ್ಯದಲ್ಲೂ ಗುರುತತ್ವವನ್ನು ಕಾಣುವ ಮನೋಭಾವ ಬೆಳೆಸಿಕೊಂಡಾಗ ಶಿಕ್ಷಣದ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ಟ ಬಡಗು ಮಾತನಾಡಿ, ಭಾರತೀಯ ಪಾರಂಪರಿಕ ಶಿಕ್ಷಣ, ಕಲೆ ಮತ್ತು ಸಂಸ್ಕಾರದೊಂದಿಗೆ ಆಧುನಿಕ ಶಿಕ್ಷಣದ ಸಮನ್ವಯವೇ ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಇಂತಹ ಸಮಗ್ರ ಶಿಕ್ಷಣ ವ್ಯವಸ್ಥೆಯೇ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಮಂಜುನಾಥ ಭಟ್ಟ ಸಂಸ್ಥೆಯ ಶೈಕ್ಷಣಿಕ ಸಾಧನೆ ಹಾಗೂ ವಿದ್ಯಾರ್ಥಿಗಳ ಪರಿಶ್ರಮವನ್ನು ವಿವರಿಸಿದರು. ಪ್ರಾಚಾರ್ಯೆ ಶಶಿಕಲಾ ಖುರ್ಸೆ ಸ್ವಾಗತಿಸಿದರು. ಲೋಹಿತ್ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಾಧಕ ವಿದ್ಯಾರ್ಥಿಗಳಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿ, ಅವರ ಮುಂದಿನ ಶೈಕ್ಷಣಿಕ ಹಾಗೂ ಜೀವನಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶಿಕ್ಷಣ, ಸಂಸ್ಕಾರ ಮತ್ತು ಸಾಧನೆಯ ಮಹತ್ವ ಸಾರಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿತು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್, ಅಶೋಕಾ ಲೋಕದ ಶ್ರೀಸಂಯೋಜಕ ಮಂಜುನಾಥ ಭಟ್ಟ ಸುವರ್ಣಗದ್ದೆ, ಕಾರ್ಯದರ್ಶಿ ಗಣೇಶ ಜೋಶಿ ಸಂಕೊಳ್ಳಿ, ಶಿವಗುರುಕುಲದ ಪ್ರಾಚಾರ್ಯ ಘನಪಾಟಿ ಮಂಜುನಾಥ ಭಟ್ಟ, ವಿದ್ಯಾ ಪರಿಷತ್ತಿನ ಐ.ಕೆ ಹೆಗಡೆ, ಸ್ವಾತಿ ಭಾಗ್ವತ, ತ್ರಿವೇಣಿ ಯಾಜಿ, ನಿರ್ಮಿತಿ ಪರಿಷತ್ತಿನ ವಿನಾಯಕ ಹೆಗಡೆಕಟ್ಟೆ ಹಾಗೂ ಇತರ ಪ್ರಮುಖರು ಇದ್ದರು.