ಕುಮಟಾ : ನಮ್ಮ ಶಾಲೆಯ ಶಿಕ್ಷಕರು ವರ್ತನೆ ತೀರಾ ಆಕ್ಷೇಪಾರ್ಹವಾಗಿದ್ದು ಮಕ್ಕಳ ಕಲಿಕೆಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ಶಿಕ್ಷಕರನ್ನು ಬದಲಾಯಿಸುವವರೆಗೂ ಶಾಲೆಗೆ ಬೀಗ ಜಡಿಯುತ್ತೇವೆ ಎಂದು ಎಚ್ಚರಿಸಿ ಎಸ್‌ಡಿಎಂಸಿ, ಪಾಲಕರು ಹಾಗೂ ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ತಾಲೂಕಿನ ಮಳವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯ ಬಳಿ ಜಮಾಯಿಸಿದ ಊರವರು ಪ್ರತಿಭಟನೆ ನಡೆಸಿದ್ದು ತಮ್ಮ ಸಮಸ್ಯೆ ಆಲಿಸುವಂತೆ ಶಿಕ್ಷಣ ಇಲಾಖೆಗೆ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಬಿಇಒ ಉದಯ ನಾಯ್ಕ, ಬಿಆರ್‌ಪಿ ಸಂಧ್ಯಾ ರಾಯ್ಕರ, ಸಿಆರ್‌ಪಿ ಲೋಕೇಶ ಭಟ್ ತುರ್ತು ಸಭೆ ನಡೆಸಿದರು. ಶಿಕ್ಷಕರು ಕುರಿತು ಶಾಲಾಡಳಿತ ಹಾಗೂ ಪಾಲಕರ ದೂರಿನ ಕುರಿತು ಇಲಾಖೆ ಈವರೆಗೆ ಕೈಗೊಂಡ ಕ್ರಮಗಳ ಕುರಿತು ಬಿಇಒ ಉದಯ ನಾಯ್ಕ ವಿವರಿಸಿದರು.

ಈ ವೇಳೆ ಮಾತನಾಡಿದ ಗ್ರಾಮಸ್ಥರು, ದಟ್ಟ ಕಾಡಿನ ನಡುವಿನ ಕುಗ್ರಾಮ ಮಳವಳ್ಳಿ ಭಾಗದಲ್ಲಿ ಚಿಕ್ಕ ಮಕ್ಕಳಿಗೆ ಬೇರೆಡೆ ಹೋಗಿ ಶಿಕ್ಷಣ ಅತ್ಯಂತ ಕಷ್ಟದ ಮಾತು. ಹೀಗಾಗಿ ಎಲ್ಲರೂ ಊರಿನ ಶಾಲೆಯಲ್ಲೇ ಕಲಿಯುತ್ತಿದ್ದು ೧ ರಿಂದ ೫ ನೇ ತರಗತಿಯವರೆಗೆ ಕಲಿಕೆ ಮಳವಳ್ಳಿ ಸ.ಕಿ.ಪ್ರಾ ಶಾಲೆಯಲ್ಲಿದೆ. ಶಾಲೆಯಲ್ಲಿ ಕಳೆದ ೨೨ ವರ್ಷಗಳಿಂದ ಶಿಕ್ಷಕರಾಗಿರುವ ಅನಂತ ವಾಸುದೇವ ದೇಶಭಂಡಾರಿ ಶಾಲೆಯ ಶಿಕ್ಷಣ ಗುಣಮಟ್ಟ ಕೆಡಲು ಮೂಲ ಕಾರಣ. ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲ, ತರಗತಿಯನ್ನೂ ಸರಿಯಾಗಿ ನಡೆಸುವುದಿಲ್ಲ. ಪಾಲಕರು ಪ್ರಶ್ನಿಸಿದರೆ ಉದ್ಧಟತನದ ಉತ್ತರ ಸಿದ್ಧವಿರುತ್ತದೆ. ಶಿಕ್ಷಕ ಅನಂತ ದೇಶಭಂಡಾರಿ ಅವರ ಮಾನಸಿಕ ಸಮಸ್ಯೆ ಉಳ್ಳವರಂತೆ ಘಳಿಗೆಗೊಮ್ಮೆ ವರ್ತನೆ ಬದಲಾಗುತ್ತಿರುತ್ತದೆ. ಹಿಂದೆ ಈ ವಿಷಯವನ್ನು ಖುದ್ದು ಪರಿಶೀಲಿಸಿದ ಬಳಿಕ ಶಿಕ್ಷಣಾಧಿಕಾರಿಗಳು ಮಾನವೀಯತೆಯಿಂದ ಶಾಲೆಗೆ ಅನಂತ ದೇಶಭಂಡಾರಿ ಸಹೋದರ ನಾಗರಾಜ ದೇಶಭಂಡಾರಿ ಅವರನ್ನು ಅತಿಥಿ ಶಿಕ್ಷಕರಾಗಿ ನಿಯೋಜಿಸಿದ್ದು ಇದಕ್ಕೆಲ್ಲಾ ಸಾಕ್ಷಿಯಾಗಿದೆ.
ಹಾಗೆಯೇ ಶಿಕ್ಷಕ ಪ್ರಕಾಶ ನಾಯ್ಕ ಅವರ ವರ್ತನೆ ವಿಪರೀತವಾಗಿದ್ದು ಶಾಲೆಯಲ್ಲಿ ಪಾನ, ಗುಟಕಾ, ಮದ್ಯ ಸೇವನೆ ಮಾಡುವುದು, ಅತಿಥಿ ಶಿಕ್ಷಕರೊಂದಿಗೆ, ಮಕ್ಕಳೊಂದಿಗೆ ದುರ್ವರ್ತನೆ, ನಿಂದನೆ ಮಾಡುತ್ತಾರೆ. ಶಾಲೆಯ ಶಿಕ್ಷಕರೇ ಹೀಗಾದರೆ ಮಕ್ಕಳ ಪಾಠ ಮತ್ತು ಸಂಸ್ಕಾರದ ಗತಿಯೇನು? ಶಾಲೆಯಲ್ಲಿ ಮಕ್ಕಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಶಾಲೆಗೆ ಮಕ್ಕಳನ್ನು ಕಳಿಸಲು ಧೈರ್ಯ ಸಾಲದೇ ಬೇರೆ ಶಾಲೆಗೆ ಕಳಿಸುತ್ತಿದ್ದಾರೆ. ಇದೇ ರೀತಿಯಾದರೆ ಊರಿನ ಶಾಲೆ ಮುಚ್ಚಬೇಕಾಗಬಹುದು. ಡಿಡಿಪಿಐ ವರೆಗೆ ಯಾವ ಅಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ಗ್ರಾಪಂ ಮಾಜಿ ಸದಸ್ಯ ವಿನಾಯಕ ಅಂಬಿಗ, ನಾಗರಾಜ ಗೌಡ ಇನ್ನಿತರರು ಮಾತನಾಡಿ, ಕಳೆದ ವರ್ಷ ನೀವು ಇಲ್ಲಿಗೆ ಬಂದು ನೋಡಿ ಶಿಕ್ಷಕರಿಗೆ ವಿಆರ್‌ಎಸ್ ತೆಗೆದುಕೊಳ್ಳುವಂತೆ ಹೇಳಿದ್ದೀರಿ, ಇಲ್ಲದಿದ್ದರೆ ಸಸ್ಪೆಂಡ್ ಮಾಡುತ್ತೇನೆ ಎಂದಿದ್ದೀರಿ. ಯಾಕೆ ಮಾಡಿಲ್ಲ?. ಯಾವುದೇ ಕಾರಣಕ್ಕೂ ನಾಳೆ ಈ ಇಬ್ಬರೂ ಶಿಕ್ಷಕರನ್ನು ಶಾಲೆ ಹೊಕ್ಕಲು ಬಿಡುವುದಿಲ್ಲ. ಬೀಗ ಜಡಿಯುತ್ತೇವೆ. ನಮಗೆ ಈ ಶಿಕ್ಷಕರು ಬೇಡ, ಬೇರೆ ಶಿಕ್ಷಕರನ್ನು ಕೊಡಿ ಎಂದರು.
ದಿವಗಿ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ಗೌಡ ಮಾತನಾಡಿ, ಶಿಕ್ಷಕ ಅನಂತ ದೇಶಭಂಡಾರಿ ಮಾನಸಿಕ ಸ್ಥಿತಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಜನರ ದೂರಿಗೆ ಸಂಬಂಧಿಸಿ ನೀವು ಪರಿಶೀಲನೆ ಮಾಡಿದ ಒಂದೇ ಒಂದು ವರದಿ ಮೇಲಧಿಕಾರಿಗೆ ಯಾಕೆ ಹೋಗಿಲ್ಲ? ಜನರ ಬೇಡಿಕೆಯಂತೆ ಈ ಇಬ್ಬರೂ ಶಿಕ್ಷಕರನ್ನು ಬದಲಿಸಬೇಕು ಎಂದರು.
ಅಂತಿಮವಾಗಿ ಪ್ರತಿಕ್ರಿಯಿಸಿದ ಬಿಇಒ ಉದಯ ನಾಯ್ಕ, ಶಿಕ್ಷಕ ಅನಂತ ದೇಶಭಂಡಾರಿ ಹಾಗೂ ಪ್ರಕಾಶ ನಾಯ್ಕ ವಿರುದ್ಧ ನೋಟೀಸ್ ಜಾರಿ ಮಾಡುತ್ತೇವೆ ಮತ್ತು ಸೂಕ್ತ ಕ್ರಮಕ್ಕೆ ಮೇಲಧಿಕಾರಿಗೆ ಬರೆಯುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಬದಲೀ ಶಿಕ್ಷಕರು ಬರುವವರೆಗೆ ಬಿಆರ್‌ಪಿ, ಸಿಆರ್‌ಪಿ ಅವರನ್ನು ಲಭ್ಯತೆಗೆ ತಕ್ಕಂತೆ ನಿಮ್ಮ ಶಾಲೆಗೆ ತುರ್ತು ಕಾರ್ಯನಿರ್ವಹಣೆಗೆ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಇದರೊಂದಿಗೆ ಪ್ರತಿಭಟನೆ ಸುಖಾಂತ್ಯಗೊಂಡಿತು.
ಎಸ್ ಡಿ ಎಂಸಿ ಅಧ್ಯಕ್ಷ ಗಣಪತಿ ಗೌಡ, ಉಪಾಧ್ಯಕ್ಷೆ ತಾರಾ ಗೌಡ, ಹಾಲಕ್ಕಿ ಸಮುದಾಯದ ಅಧ್ಯಕ್ಷ ಗೋವಿಂದ ಗೌಡ, ಗಣಪತಿ ಗೌಡ ಗೋಕರ್ಣ, ಗಣೇಶ ಗೌಡ, ಕುಸುಮಾಕರ ಗೌಡ, ಮಂಜುನಾಥ ಗೌಡ, ನಾಗವೇಣಿ ವಿ. ಗೌಡ, ಮಂಗಲಾ ಎಂ.ಗೌಡ, ಶಂಕರ ಗೌಡ, ನವೀನ ಗೌಡ, ದತ್ತಾತ್ರೇಯ ಹರಿಕಾಂತ, ರಾಜೇಶ, ಮಾದೇವಿ, ನಿರ್ಮಲಾ, ಭವಾನಿ, ಸರಿತಾ, ಬೀರ, ಸುದೀಪ ಗೌಡ ಇನ್ನಿತರರು ಇದ್ದರು.