ಕುಮಟಾ: ದೇಶ ಹಾಗೂ ಸಮಾಜ ನಮಗೆ ನೀಡಿರುವ ಕೊಡುಗೆಗಳನ್ನು ಅರಿತುಕೊಂಡು, ಸಮಾಜಕ್ಕೆ ಮರಳಿ ಕೊಡುವ ಮನೋಭಾವವನ್ನು ಬೆಳೆಸಿಕೊಂಡಾಗ ಮಾತ್ರ ರಾಷ್ಟ್ರದ ನಿಜವಾದ ಅಭ್ಯುದಯ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ವಿನೋದ ಪ್ರಭು ಹೇಳಿದರು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ವಿಧಾತ್ರಿ ಅಕಾಡೆಮಿಯ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು, ಸ್ವಂತದ ಹಿತದ ಬಗ್ಗೆ ಪ್ರತಿಯೊಬ್ಬರೂ ಆಲೋಚಿಸುತ್ತಾರೆ. ಆದರೆ ಸಮಾಜದ ಹಿತದ ಬಗ್ಗೆಯೂ ಕಾಳಜಿ ವಹಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದರು.

ನಾವು ತೊಡುವ ಒಂದು ಅಂಗಿಯ ಹಿಂದೆ ರೈತನಿಂದ ಹಿಡಿದು ಹತ್ತಿ ಬೆಳೆಗಾರ, ನೂಲು ತಯಾರಿಸುವವರು, ಬಟ್ಟೆ ನೇಯುವವರು ಹಾಗೂ ಸಿಂಪಿಗನವರೆಗೆ ಅನೇಕ ಮಂದಿಯ ಶ್ರಮ ಅಡಗಿದೆ. ಹೀಗಾಗಿ ನಮ್ಮ ಜೀವನವೂ ಸಮಾಜದ ಕೊಡುಗೆಯಿಂದಲೇ ರೂಪುಗೊಂಡಿದೆ ಎಂಬ ಅರಿವು ನಮ್ಮಲ್ಲಿ ಮೂಡಬೇಕು ಎಂದು ಅವರು ತಿಳಿಸಿದರು.
ಯುವಕರು ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ಯಾವುದೇ ದೇಶಕ್ಕೆ ತೆರಳಿದರೂ, ತಾವು ನೆಲೆಸಿರುವ ಕರ್ಮಭೂಮಿಗೆ ಋಣಿಯಾಗಿರುವುದರ ಜೊತೆಗೆ ತಮ್ಮ ಜನ್ಮಭೂಮಿಯನ್ನೂ ಮರೆಯಬಾರದು. ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪವನ್ನು ಯುವಜನತೆ ಬೆಳೆಸಿಕೊಳ್ಳಬೇಕು ಎಂದು ವಿನೋದ ಪ್ರಭು ಕರೆ ನೀಡಿದರು.
ಕೊರೊನಾ ಕಾಲದಲ್ಲಿ ನಾಗ್ಪುರದಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯೊಂದನ್ನು ಸ್ಮರಿಸಿದ ಅವರು, 85 ವರ್ಷದ ಹಿರಿಯ ಸ್ವಯಂಸೇವಕರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪುಟ್ಟ ಮಕ್ಕಳ ತಾಯಿಯಾಗಿದ್ದ 35 ವರ್ಷದ ಯುವತಿಯೊಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಗೆ ತುರ್ತಾಗಿ ಹಾಸಿಗೆಯ ಅಗತ್ಯವಿರುವುದನ್ನು ಗಮನಿಸಿದ ಹಿರಿಯ ಸ್ವಯಂಸೇವಕರು, “ನಾನು ಬದುಕಿದ್ದೇನೆ, ಈ ಮಗಳು ಬದುಕಬೇಕು” ಎಂಬ ಮನೋಭಾವದಿಂದ ತಮ್ಮ ಆಸ್ಪತ್ರೆಯ ಹಾಸಿಗೆಯನ್ನೇ ಆಕೆಗೆ ಬಿಟ್ಟುಕೊಟ್ಟರು. ಬಳಿಕ ಮೂರು ದಿನಗಳ ನಂತರ ಅವರು ಪ್ರಾಣತ್ಯಾಗ ಮಾಡಿದರು ಎಂದು ತಿಳಿಸಿದರು.
ತ್ಯಾಗ, ಸೇವೆ ಮತ್ತು ಸಮಾಜದ ಬಗ್ಗೆ ಕಾಳಜಿ ಸ್ವಯಂಸೇವಕರ ಜೀವನದ ಪ್ರಮುಖ ಗುಣಗಳು. ಇಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮೃದ್ಧ, ಸದೃಢ ಹಾಗೂ ಸಂಸ್ಕಾರಯುತ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಹೆಗಡೆ ಕಣ್ಣಿ ವಹಿಸಿದ್ದರು. ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಚಾರ ಪ್ರಮುಖ ಸತೀಶ ಹಾಗೂ ರಾಷ್ಟ್ರೋತ್ಥಾನದ ಅರುಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಕಾಗಾಲ ಚಿದಾನಂದ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕುಮಾರ್ ಹರ್ಷಿತ್ ಪ್ರಾರ್ಥಿಸಿದರು. ಸಂಸ್ಕೃತ ಉಪನ್ಯಾಸಕಿ ಡಾ. ಗೌರಿ ಹೆಗಡೆ ವಂದನಾರ್ಪಣೆ ಸಲ್ಲಿಸಿದರು.