Home ಅಂಕಣಮಣ್ಣಿಗೆ ಜೀವ ನೀಡುವ ಖ್ಯಾತ ಕಲಾವಿದರು ಜಿ. ಡಿ ಭಟ್ ಕೆಕ್ಕಾರ….

ಮಣ್ಣಿಗೆ ಜೀವ ನೀಡುವ ಖ್ಯಾತ ಕಲಾವಿದರು ಜಿ. ಡಿ ಭಟ್ ಕೆಕ್ಕಾರ….

by Editor
0 comments

ಲೇಖನ –  ಶ್ರೇಯಸ್ ಭಟ್ ಗೋಕರ್ಣ

ಕೆಲವೊಂದು ಕಡೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಲ್ಲಿ, ಗಣಪನ ಎದುರು ಮೂರ್ತಿ ಕಲಾವಿದರ ಹೆಸರನ್ನು ಹಾಕುತ್ತಾರೆ. ಆದರೆ ನಮ್ಮ ಭಾಗದಲ್ಲಿ ಹೆಚ್ಚಾಗಿ ಶ್ರೀ ಗಣಪತಿಯ ಮುಖ ವರ್ಣಿಕೆಯನ್ನು ನೋಡಿ ಕಲಾವಿದರು ಯಾರು ಎಂದು ಗುರುತಿಸಬಹುದು.

ವಿಶೇಷವಾಗಿ ನಮ್ಮ ಭಾಗದಲ್ಲಿ ಯಾವುದೇ ಅಚ್ಚುಗಳನ್ನು ಬಳಸದೆ ನೈಜವಾಗಿ ಅತಿ ಸುಂದರವಾಗಿ ಸ್ವತಹ ಕೈಗಳಿಂದಲೇ ಗಣಪನ ಮೂರ್ತಿಗಳನ್ನು ಪರಿಸರ ಸ್ನೇಹಿಯಾಗಿ ಮಣ್ಣಿನಿಂದಲೇ ತಯಾರಿಸುವುದು ಶಾಸ್ತ್ರ ಬದ್ಧವಾಗಿಯೂ ಹಾಗೂ ಪರಿಸರಕ್ಕೂ ಪೂರಕವಾಗಿದೆ.

ಅಂತಹ ಕಲಾವಿದರ ಸಾಲಿನಲ್ಲಿ ಬರುವವರೇ ನಮ್ಮ ಕೆಕ್ಕಾರಿನ ಜಿ.ಡಿ ಭಟ್ಟರು.
ಚಿಕ್ಕ ಕಣ್ಣು, ದೊಡ್ಡ ಕಿವಿ ಸುಂದರ ವದನ, ನೋಡಿದರೆ ನೋಡುತ್ತಲೇ ಇರಬೇಕು ಎಂಬ ಭಾವ, ನೋಡಲು ಎರಡು ಕಣ್ಣುಗಳು ಸಾಲದು ಎಂದೆನಿಸುತ್ತದೆ ಇವರು ಮಾಡಿದ ಸುಂದರ ಗಣಪನ ವಿಗ್ರಹಗಳನ್ನು ನೋಡುವಾಗ.

ಬಾಲ್ಯದಿಂದಲೂ ಗೋಕರ್ಣದ ವಿಜಯ ವಿನಾಯಕ ಸಂಘದ ಗಣಪತಿ, ಗೋಕರ್ಣದ ರಥಬೀದಿಯ ಯಂಗ್ ಸ್ಟಾರ್ ಕ್ಲಬ್ನ ಗಣಪತಿ ವಿಗ್ರಹಗಳು ನೋಡುತ್ತಲೇ ಬಂದಿದ್ದೇನೆ, ಈ ವಿಗ್ರಹಗಳನ್ನು ನೋಡಿ ಕೈ ಮುಗಿಯುವಾಗ ಪ್ರತಿಸಾರಿಯು ಕೆಕ್ಕಾರಿನ ಜಿ. ಡಿ ಭಟ್ಟರ ನೆನಪಾಗುತ್ತದೆ. ಜೇಡಿ ಮಣ್ಣಿಗೆ ಪ್ರಥಮ ಪೂಜಿತ ವಿಘ್ನೇಶ್ವರನ ರೂಪ ನೀಡುವ ಕಲಾವಿದರ ಕೈ ಎಷ್ಟು ಪುಣ್ಯ ಮಾಡಿರಬೇಕು ಎಂದು.
ಸದಾ ಸರಳ ವ್ಯಕ್ತಿತ್ವದ ವ್ಯಕ್ತಿಯಂತೆ ಕಂಡವರು, ನಾನು ಇವರನ್ನು ಹತ್ತಿರದಿಂದ ನೋಡಿದವನಲ್ಲ. ಒಂದು ವರ್ಷ ಗೋಕರ್ಣದ ವಿಜಯ ವಿನಾಯಕ ಸಂಘದ ಗಣಪತಿಯ ವಿಸರ್ಜನೆಯ ಸಮಯದಲ್ಲಿ ಇವರನ್ನು ನೋಡಿದ ನೆನಪು. ಇವರೇ ಕೆಕ್ಕಾರಿನ ಜಿ. ಡಿ ಭಟ್ಟರು ಎಂದು ಮೊದಲ ಬಾರಿಗೆ ಅವರನ್ನು ದೂರದಿಂದ ನೋಡಿದೆ.

ಗಣಪತಿಯ ವಿಗ್ರಹವು ಗಣಪತಿಯ ರೂಪವನ್ನು ಬಿಟ್ಟು ಬೇರೆ ರೂಪದಲ್ಲಿ ಮಾಡಿದರೆ ಅದು ಶಾಸ್ತ್ರ ವಿರೋಧವಾದದ್ದು ಎಂದು ಹೇಳುತ್ತಾರೆ. ಗಣಪತಿಯ ರೂಪವನ್ನು ಇದ್ದ ಹಾಗೆ ಮಾಡಿಕೊಂಡು ಬಂದು ಸುಂದರತೆಯಲ್ಲಿ ಸುಂದರತೆಯನ್ನು ಕೊಡುವವರು ಇವರು, ಪಂಚೆ ಶಲ್ಯದ ಮೀರಿಗೆಯ ರೇಖೆಯಾಗಿರಬಹುದು, ಕೈ ಕಾಲುಗಳ ವಿನ್ಯಾಸ ನೋಡಿದರೆ, ಗಣಪತಿಯೇ ಎದ್ದು ಬರುತ್ತಾನೆ ಎಂಬ ಭಾವ ಭಕ್ತರ ಮನಸ್ಸಿನಲ್ಲಿ ನೆಲೆಸುತ್ತದೆ ಇಂತಹ ಕಲಾವಿದರರನ್ನು ಪಡೆದ ನಾವೇ ಧನ್ಯರು.

ಶ್ರೀ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಶ್ರೀ ಗಣೇಶನ ಜೊತೆ ಸರ್ವರೂ ನೆನೆಯಬೇಕಾದದ್ದು ಎಲ್ಲಾ ಮೂರ್ತಿ ಕಲಾವಿದರನ್ನು, ಏಕೆಂದರೆ ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಗಣಪನಿಗೆ ರೂಪ ಕೊಟ್ಟವರು ಅವರು.

ಮಂಗಳ ಮೂರ್ತಿ ಮೋರಯಾ…….
ಮೋರಯಾ……..

ಲೇಖನ –  ಶ್ರೇಯಸ್ ಭಟ್ ಗೋಕರ್ಣ

#ganeshfestival #ganeshartists #gokarna

You may also like

Leave a Comment

Latest news