ನಮಸ್ಕಾರ ನನ್ನವರೇ..ಮತ್ತೆಮತ್ತೆ ನಿಮ್ಮೊಡನೆ..ಮರೆಗೆ ಸರಿದು ಗಟ್ಟಿಯಾದ ನೆನಪುಗಳನ್ನು ಮೆತ್ತಗೆ ಎಳೆದು ಎಳೆಯಾಗಿಸಿ..ಹೊಳೆವಂತೆ ನೆನಪಿಸುವ ಸಣ್ಣಕಾರ್ಯಮಾಡಲು..ನಿಮ್ಮೆದುರು ಬಂದಿರುವೆ..

ನಾವಿನ್ನೂ ಹಾಣೆಗೆಂಡೆ..ಡಪ್ಪಂಡುಪ್ಪಿ..ಕಣ್ಣೇಕಟ್ಟೆ..ಲಗೋರಿ..ಮನೆಹೊಕ್ಕಿದರೆ..ಚನ್ನೆಮನೆ..ಕಡ್ಡಿಆಟ..ಅಚ್ಚು..ಹುಲಿಮನೆ..ಹೀಗೆ ಸಾಂಪ್ರದಾಯಿಕ ಆಟಗಳನ್ನು ಆಡುತ್ತಿದ್ದ ಸಮಯ.ಮಾಗೋಡಿಗೆ ಕ್ರಿಕೆಟ್ ಬಂತು.ಹೆಡೆಪೆಂಟೆ ಕೆತ್ತಿ..ಚಂಡಪುಳೆ ಚೆಂಡು…ನುಕ್ಕಿಗಿಡದ ಸ್ಟಂಪು.ಮನೆಯಂಗಳದಲ್ಲಿ ಶಾಲೆಬಿಟ್ಟ ಕೂಡಲೇ ನಮ್ಮ ಆಟ ಶುರು.ಸಂಜೆ ಚಿಮಣಿಬುರುಡೆ ಹಚ್ಚುವವರೆಗೆ..ನಾಲ್ಕೈದು ಮೇಚು.ಅದರಲ್ಲಿ ಹತ್ತಾದರೂ ಜಗಳ ಅಗುತ್ತಿತ್ತು.ನಮ್ಮ ನಿಯಮ ಬಹುತೇಕ ಜಗತ್ತಿನಲ್ಲಿ ಇನ್ನೂ ಬಂದಿಲ್ಲ.ಒಂದುಸಲ ಪುಟಿದದ್ದು ಹಿಡಿದರೆ ಔಟ್.ಜೋರು ಬೋಲ್ ಹಾಕಿದರೆ ಔಟ್ ಇಲ್ಲ.ಜೋರುಹೊಡೆದರೆ ಔಟ್.ಎತ್ರಕ್ಕೆ ಹೊಡೆದರೆ ಔಟ್.ಬೋಲ್ ಸಿಕ್ಸರ್ ಹೊಡೆದರೆ ಔಟ್.ಸೀದಾ ಹೊಡೆದದ್ದು ಬಿಟ್ಟರೆ ಎರಡು ರನ್.ಬೋಲ್ ಕಳೆದುಹೋದರೆಹೊಡೆದವನೇ ಹುಡುಕಿ ತರುವುದು.ಕಾಗದದ ಬೋಲು ಬಿಚ್ಚಿದರೆ ಔಟ್.ಪದೇಪದೇ ಬೋಲು ಹಿತ್ಲವೋಳಿಗೆ ಹೊಡೆಯುತ್ತಿದ್ದೆವು.

ಅಲ್ಲಿದ್ದ ಸೌತೆಮಿಡಿ..ಸೋಡಗೆ..ಎಳೇಬೆಂಡೆಕಾಯಿ‌..ಕದ್ದು ತಿನ್ನುತ್ತಿದ್ದೆವು.ಹಾಗಲಕಾಯಿ ಮಾತ್ರ ಯಾರೂ ತಿನ್ನುತ್ತಿರಲಿಲ್ಲ.ತೊಂಡೆಕಾಯಿಮಿಡಿ..ಎಲ್ಲ ನಮಗೆ ರುಚಿಯೇ.ಆಗ ಮೊದಲು ಬಂದದ್ದು ಕೋರ್ಕಬೋಲ್. ಸಿಕ್ಕಾಪಟ್ಟೆ ಗಟ್ಟಿ.ಅದರೆ ಪುಟಿತಿತ್ತು.ಕಾಲಿಗೆ ತಾಗಿದರೆ ಮೂರುದಿನ ಕುಂಟುಹಾರಸುವದೇ.ಕೋರ್ಕ ಬೋಲು ಬಂದಾಗ ನಮ್ಮ ಹೆಡೆಪೆಂಟೆ ಬೇಟ್ ಮಾಯ.ಹಂಗರಕನ ಮರದ ಬೇಟು..ಹಾಲೆಮರದ ಬೇರಿನ ಬೇಟು.ಜುಮ್ಮನಮರದ ಬೇಟು..ಸಾಗವಾನಿ ಮರದ ಬೇಟ್.ತಮ್ಮಣ್ಣ ಒಂದು ಕಂಪನಿ ಬೇಟ್ ತಂದಿದ್ದ.ಅದನ್ನು ಯಾರಿಗೂ ಆಡಲು ಕೊಡುತ್ತಿರಲಿಲ್ಲ.ಅದರಲ್ಲೂ ನಾವು ಸ್ವಲ್ಪ ಸಣ್ಣ.ನಾವು ಬೋಲ್ ‌ಬೌಂಡರಿ ಗೆರೆಯ ಹೊರಗೆ ಹೋದಮೇಲೆ ಪೀಲ್ಡರ್.ಹಿಂಡು ಹೊಕ್ಕುವವರು ನಾವೆ.ದೊಡ್ಡವರು ಆಡುವುದು ಲೆದರ್ ಬೋಲ್.ಹಿಂಡಲ್ಲಿ ಬಿದ್ದದ್ದು ಹೆಕ್ಕಿ ಕೈ ತಿರುಗಿಸಿ ಬೋಲ್ ಹಾಕಿ ನಾವು ಬೌಲಿಂಗ್ ತಲಬು ತೀರಿಸಿಕೊಂಡವರು.ಬೋಲ್ ಸಿಕ್ಕಾಗಲೇ ನಾವು ಇಡೀ ಬೋಲ್ ಮುಟ್ಟಿ.

RELATED ARTICLES  ರೋಟರಿಯಿಂದ ಮೂರು ಚಕ್ರದ ಸೈಕಲ್ ವಿತರಣೆ.

ಹರಿದ ಚಡ್ಡಿಗೇ ಅದನ್ನು ಉಜ್ಜುವ ಸ್ಟೈಲ್ ಮಾಡಿದವರು..ಮೇಚ್ ನಡೆದಾಗ ನೀರು ಕೊಡುವ ಚಾನ್ಸ ಸಿಕ್ಕಿದರೆ ..ನಾವು ಗ್ರೌಂಡಲ್ಲಿ ನಡೆಯುವ ಸ್ಟೈಲೇ ಬೇರೆ..ನಮಗೆ ಆವಾಗ ಬೀಳುವುದೆಲ್ಲ..ಮೋಹಿಂದರ್ ಅಮರನಾಥ..ಅಂಜುಮನ್ ಗಾಹಕವಾಡ್..ಬಿನ್ನಿ.ಗವಾಸ್ಕರ್.ಹಿರ್ವಾನಿ..ಕೀರ್ಮಾನಿ..ಶ್ರೀಕಾಂತ್..ಕಪಿಲ್ ದೇವ್..ಮುಂತಾವರು ನಮ್ಮ ಹೀರೋ.ರೆಡಿಯೋ ಸುತ್ತಲೂ ಇರುವೆಗಳು ನಾವು.ಕಾಣದೇ ನಾವು ಅನುಭವಿಸಿದ ಸುಖವನ್ನು ಇಂದಿನವರು ಕಂಡು ಅನುಭವಿಸುವುದಿಲ್ಲ.ಯಾಕೆಂದರೆ ನಮ್ಮ ಕಲ್ಪನಾ ಶಕ್ತಿಗಳು ಹಾಗಿದ್ದವು.ಕವರ್ನಲ್ಲಿ ಪಿಲ್ಡಿಂಗ್ ಮಾಡಿದ ಕಾಮೆಂಟರಿ ಕೇಳಿದರೆ ನಮಗೆ ಪೀಲ್ಡ ಮಾಡಿದ್ದನ್ನು ಕಂಡ ಅನುಬವವನ್ನು ಕಲ್ಪಿಸಿಕೊಳ್ಳುತ್ತಿದ್ದೆವು.ಬೋಲ್ಡ ಆದಾಗ.. ಸ್ಟಂಪ್ಡ‌ ಆದಾಗ ಆ ಘಟನೆ ಕಣ್ಣಿಗೆ ಬರುತ್ತಿತ್ತು..ಈಗ ರೀಪ್ಲೇಗಳನ್ನು ತೋರಿಸಿದರೂ..ನೆಮ್ಮದಿಯಿಲ್ಲ..ಕಣ್ಣುಗಳು ಚುರುಕಾದಂತೆ..ಅವಿಷ್ಕಾರಗಳಾದಂತೆ..ಕಲ್ಪನಾ ಶಕ್ತಿ..ನೆಮ್ಮದಿ..ಕಲೆ..ಕ್ರೀಡೆಗಳನ್ನು ಆಸ್ವಾದಿಸುವ ಶಕ್ತಿ ಕುಂದಿದೆ..ಈಗಲೂ ಕಣ್ಣು ಮುಚ್ಚಿದರೆ ಗವಾಸ್ಕರನ ಆಟ..ಕಪಿಲ್ ವರ್ಲ್ಡಕಪ್ ಎತ್ತಿದ ಕಾಮೆಂಟರಿ ಕೇಳುತ್ತದೆ..ಹ್ಯಾರಿಸ್ ನ ಪೀಲ್ಡಿಂಗಗೆ ಕಾಮೆಂಟರಿ ಮಾಡುವವ ಕೂಗಿದ್ದು ಕೇಳುತ್ತದೆ..ನೀವೂ ಒಮ್ಮೆ ಒಬ್ಬನೇ ಕುಳಿತು ಕೇಳಿ…ನಮಸ್ಕಾರ..

RELATED ARTICLES  ಕಾಂಕ್ರಿಟ್ ರಸ್ತೆಯ ಕಾಮಗಾರಿ ಪರಿಶೀಲಿಸಿದ ಶಾಸಕ ದಿನಕರ ಶೆಟ್ಟಿ

ತಿಗಣೇಶ ಮಾಗೋಡು.
(9343596619)