ಶಿರಸಿ: ವಿವಿಧ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸೆ.10 ರಂದು ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ದೇಶದಾದ್ಯಂತ ಬಂದ್ ಗೆ ಕರೆ ನೀಡಲಾಗಿದ್ದು, ಜಿಲ್ಲೆಯ ಸಾರ್ವಜನಿಕರೂ ಸಹ ಸ್ವಯಂ ಪ್ರೇರಿತವಾಗಿ ಬಂದ್ ಗೆ ಕೈಜೋಡಿಸಿ ತಮ್ಮ ಬೆಂಬಲ ಸೂಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ವಿನಂತಿಸಿಕೊಂಡರು.
ಅಡುಗೆ ಅನಿಲ, ಡಿಸೇಲ್ ದರ, ಪೆಟ್ರೋಲ್ ದರ ಏರಿಕೆಯಾದ ವಿರುದ್ಧ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಸೆ.೧೦ ರಂದು ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿದ್ದು, ಅದಕ್ಕೆ ಜಿಲ್ಲೆಯ ಜನರು ಸ್ವಯಂ ಪ್ರೇರಿತರಾಗಿ ತಮ್ಮ ವ್ಯವಹಾರ ಗಳನ್ನು ಬಂದ್ ಮಾಡಿ ಬೆಂಬಕ ಸೂಚಿಸಬೇಕು ಎಂದರು.
ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಬೆಲೆ 70 ರೂ. ನಷ್ಟಿತ್ತು. ಆದರೆ ಈಗ ಅದು ಈಗ 80 ರಷ್ಟಾಗಿದೆ. ಇನ್ನು ಡಿಸೇಲ್ 55 ರೂ. ಇರುವುದು 70 ರೂ. ಆಗಿದೆ. ಅಡುಗೆ ಅನಿಲ 400 ರಿಂದ 754 ರೂ.ಗೆ ಏರಿಕೆಯಾಗಿದೆ. ಇದೇ ರೀತಿ ಹಾಲು, ಬೇಳೆ ಕಾಳು ಹೀಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಎಲ್ಲರೂ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಿ ಇದನ್ನು ಕಡಿಮೆ ಮಾಡುವಂತೆ ಒತ್ತಡ ಹೇರಬೇಕು ಎಂದ ಅವರು, ಬಂದ್ ಹಿನ್ನಲೆಯಲ್ಲಿ ಪಕ್ಷದ ವತಿಯಿಂದ ಯಾವುದೇ ಪ್ರತಿಭಟನೆ ಅಥವಾ ಮನವಿ ನೀಡುತ್ತಿಲ್ಲ. ಸ್ವಯಂ ಪ್ರೇರಿತವಾಗಿ ಬಂದ್ಗೆ ಬೆಂಬಲ ನೀಡಲು ಜನತೆ ಹಾಗೂ ವಿವಿಧ ಸಂಘಟನೆಗೆ ಮನವಿ ಮಾಡಲಾಗುವುದು. ಜನರಿಗೆ ತೊಂದರೆ ಆಗದಂತೆ ಬಂದ್ ಆಚರಿಸಲಾಗುವುದು ಎಂದರು.
ಕೃಷಿಗೆ ಹೆಚ್ಚಿನ ಒತ್ತನ್ನು ನೀಡುವ ದೇಶ ನಮ್ಮದಾಗಿದ್ದು, ಇಂದು ಯಾಂತ್ರಿಕರಣ ಕೃಷಿ ಬಂದಿದೆ. ಆದರೆ ಅದನ್ನು ಮುನ್ನಡೆಸಲು ಅನಿಲಗಳಬೆಲೆ ಗಗನಕ್ಕೇರಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಮಧ್ಯಮ ಮತ್ತು ಬಡ ವರ್ಗದ ಜನರು ಪ್ರತಿನಿತ್ಯ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಇದನ್ನು ವಿರೋಧಿಸಿ, ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಈ ಬಂದ್ಗೆ ಕರೆ ನೀಡಲಾಗಿದೆ. ಆದರೆ ಎಲ್ಲಿಯೂ ಗಲಾಟೆ, ದೊಂಬಿಗಳನ್ನು ಮಾಡದೇ ಶಾಂತಿಯುತವಾಗಿ ಬಂದ್ ಆಚರಿಸಬೇಕು ಎಂದರು.