ಹೊನ್ನಾವರ : ಚೌತಿ ಬಂತೆಂದರೆ ಸಾಕು ಉತ್ತರ ಕನ್ನಡದಾದ್ಯಂತ ಸಂಭ್ರಮ ಮನೆ ಮಾಡುತ್ತದೆ ಈ ಸಂಭ್ರಮವನ್ನು ಹೆಚ್ಚಿಸುವರು ಕರ್ಕಿಯ ಗಣಪತಿ ಮೂರ್ತಿ ತಯಾರಿಕಾ ಬಂಡಾರಿ ಮನೆತನದವರು .
ಹೊನ್ನಾವರ ಕುಮಟಾ ಶಿರಸಿ ಸಿದ್ದಾಪುರ ಭಟ್ಕಳ ಹೀಗೆ ಹತ್ತು ಹಲವು ಕಡೆಗಳಿಗೆ ಗಣಪನ ಮೂರ್ತಿಗಳು ಇಲ್ಲಿಂದಲೇ ಸಾಗಿ ಹೋಗುತ್ತವೆ . ವೈವಿಧ್ಯಮಯ ಗಣಪನ ಮೂರ್ತಿ ತಯಾರಿಕೆಗೆ ಈ ಭಂಡಾರಿ ಮನೆತನ ಹೆಸರುವಾಸಿಯಾಗಿದೆ . ಪಾರಂಪರಿಕ ಕಸುಬನ್ನು ಮುಂದುವರಿಸಿಕೊಂಡು ಬಂದ ಈ ಮೂರು ಕುಟುಂಬಗಳಲ್ಲಿ ವೈವಿಧ್ಯಮಯ ಗಣಪ ಚೌತಿಗಾಗಿ ಸಿದ್ಧತೆ ನಡೆಸಿದ್ದಾನೆ .
ಚಿಕ್ಕ ಮೂರ್ತಿಯಿಂದ ಹಿಡಿದು ದೊಡ್ಡ ಬೃಹದಾಕಾರದ ಗಣಪತಿ ವೈವಿಧ್ಯಮಯ ರೀತಿಯಲ್ಲಿ ರೂಪುಗೊಂಡಿರುವುದು ಜನತೆಯ ಮನ ಸೆಳೆಯುತ್ತಿದೆ .
ಕರ್ಕಿಯ ಭೂಸ್ವರ್ಗಕೇರಿಯಲ್ಲಿರುವ ಭಂಡಾರಿಗಳ ಗಣಪತಿ ಜಿಲ್ಲೆಯಲ್ಲಿ ಪ್ರಸಿದ್ಧ. ಇಲ್ಲಿ ಮೂರು ಕುಟುಂಬಗಳು 500ಕ್ಕೂ ಹೆಚ್ಚು ಗಣಪತಿ ಸಿದ್ಧಪಡಿಸುತ್ತವೆ. ಕರ್ಕಿ ಗದ್ದೆಯ ಜೇಡಿಮಣ್ಣನ್ನು ಮಳೆಗಾಲಕ್ಕೂ ಮೊದಲೇ ಸಂಗ್ರಹಿಸಿ ಅದರಲ್ಲಿದ್ದ ಕಲ್ಲುಗಳನ್ನು ಆಯ್ದು, ಮಣ್ಣನ್ನು ಮೃದುವಾಗಿಸಿ, ಕೈಯಿಂದಲೇ ಗಣಪತಿ ನಿರ್ಮಿಸಿ ಪರಿಸರ ಪೂರಕ ಬಣ್ಣಗಳಿಂದ ಅವುಗಳನ್ನು ಚೆಂದಗೊಳಿಸುವುದು ಭಂಡಾರಿ ಕುಟುಂಬದ ವಂಶಪಾರಂಪರ್ಯ ವೃತ್ತಿ. ಅಚ್ಚುಗಳನ್ನು ಬಳಸದ ಕಾರಣ ಪ್ರತಿ ಮೂರ್ತಿಯೂ ತನ್ನದೇಯಾದ ವಿಶಿಷ್ಟತೆಯಿಂದ ಕೂಡಿರುತ್ತದೆ. ದೇವಾಲಯಗಳಲ್ಲಿ ಪಂಚವಾದ್ಯ ನುಡಿಸುವ ಭಂಡಾರಿ ಸಮಾಜದವರು ಜಿಲ್ಲೆಯಲ್ಲಿ ದೇವಾಲಯದ ಪರಿಸರದಲ್ಲಿ ನೆಲೆಸಿದ್ದಾರೆ. ಬೇಸಿಗೆಯಲ್ಲಿ ಮೃದಂಗ, ಚಂಡೆ ವಾದಕರಾಗಿ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ದುಡಿಯುವ ಇವರು ವಾದ್ಯಗಳ ದುರಸ್ತಿ ಮತ್ತು ಮಳೆಗಾಲದಲ್ಲಿ ಮೂರ್ತಿ ತಯಾರಿಸುತ್ತಾರೆ. ಎಲ್ಲ ಕಲೆಗಳು ವಿಶೇಷ ಲಾಭ ತರದಿದ್ದರೂ ಕುಟುಂಬದ ವೃತ್ತಿಯೆಂದು ನಡೆಸಿಕೊಂಡು ಬಂದಿದ್ದಾರೆ.
ಈ ಮೂರು ಮನೆಗಳಲ್ಲಿ ಹೆಣ್ಣು ಗಂಡೆನ್ನದೆ ಎಲ್ಲರೂ ಗಣಪತಿಯ ವೈವಿಧ್ಯಮಯ ಮೂರ್ತಿ ತಯಾರಿಕರು ಎನ್ನೋದು ಇನ್ನೊಂದು ವಿಶೇಷ .ಗಣೇಶ ಚತುರ್ಥಿ ಸಮೀಪಿಸುತ್ತಿದೆ ಎನ್ನುವಾಗಲೇ ಇಲ್ಲಿ ಭರ್ಜರಿ ತಯಾರಿ ಸಿದ್ಧಗೊಂಡಿರುತ್ತದೆ ಮೂರು ತಿಂಗಳ ಮೊದಲೇ ಎಲ್ಲ ಕಾರ್ಯಗಳು ಪ್ರಾರಂಭವಾಗಿರುತ್ತವೆ.
ಈಗೇನೂ ಇನ್ನು ಎರಡೇ ದಿನದಲ್ಲಿ ಚೌತಿ ಹಬ್ಬ ಇರುವುದರಿಂದ ಕೊನೆಯ ಹಂತದ ಕೆಲಸಗಳು ಹಾಗೂ ದೃಷ್ಟಿ ಬರೆಯುವುದೊಂದೇ ಬಾಕಿ ಹೀಗಾಗಿ ಸಾವಿರಾರು ಜನ ಇಲ್ಲಿಗೆ ಬಂದು ಗಣಪನ ಮೂರ್ತಿಯನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ . ದಿನ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಸುಮಾರು ಐದು ಸಾವಿರಕ್ಕೂ ಮಿಕ್ಕಿ ಜನ ಗಣಪತಿಯ ಮೂರ್ತಿಯನ್ನು ನೋಡಲು ಆಗಮಿಸುತ್ತಾರೆ ಎನ್ನುತ್ತಾರೆ ಕುಟುಂಬದವರು .
ಚೌತಿ ಹಬ್ಬದ ರಂಗು ಹೆಚ್ಚಿಸುವಲ್ಲಿ ಈ ಕರ್ಕಿ ಕುಟುಂಬದವರ ಕೆಲಸ ಮಾತ್ರ ಅವಿಸ್ಮರಣೀಯ ಎನ್ನುವದು ಜನತೆಯ ಮಾತು.