ಶಿರಸಿ: ಪ್ರಮುಖ ಅಡಿಕೆ ವಹಿವಾಟು ಸಂಸ್ಥೆ, ನಗರದ ಟಿಎಂಎಸ್ 2017-18 ನೇ ಆರ್ಥಿಕ ವರ್ಷದಲ್ಲಿ 191 ಕೋಟಿ ರೂ. ವ್ಯವಹಾರ ನಡೆಸಿದೆ. 4ಕೋಟಿ ರೂ.ಗೂ ಅಧಿಕ ಲಾಭ ಗಳಿಸಿ ಸದಸ್ಯರಿಗೆ ರಿಬೇಟ್, ನಿಧಿಗಳಿಗೆ ಅನುವು ಮಾಡಿದ ಬಳಿಕ 62.31 ಲಕ್ಷ ರೂ. ನಿಕ್ಕಿ ಲಾಭ ಗಳಿಸಿದೆ.
ಸಂಘವು 35ನೇ ವರ್ಷಕ್ಕೆ ಕಾಲಿರಿಸಿದ್ದು, ಪ್ರಗತಿಯಲ್ಲಿ ಇತಿಹಾಸ ಸೃಷ್ಟಿಸಿದೆ. ಸಂಘದ ಸ್ವಂತ ಬಂಡವಾಳ 27.82 ಕೋಟಿ ರೂ.ಗೆ ತಲುಪಿದೆ. 39.88 ಕೋಟಿ ರೂ. ಠೇವಣಿ, 191 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಸಂಘದ ನೇರ ಖರೀದಿ ವಿಭಾಗದಲ್ಲಿ 15081 ಕ್ವಿಂಟಾಲ್ ಅಡಕೆ ಹಾಗೂ ಕಾಳುಮೆಣಸು ಖರೀದಿ-ವಿಕ್ರಿಯಿಂದ 32.36 ಕೋಟಿ ರೂ. ವ್ಯವಹಾರ ಮಾಡಲಾಗಿದೆ. ಕೃಷಿ ವಿಭಾಗದಲ್ಲಿ 8.23 ಕೋಟಿ ರೂ. ವಿಕ್ರಿ ವ್ಯವಹಾರ ಮಾಡಿ 50.48 ಲಕ್ಷ ರೂ. ಲಾಭ ಗಳಿಸಲಾಗಿದೆ. ಬನವಾಸಿ ಶಾಖೆಯಲ್ಲಿ 3.72 ಕೋಟಿ. ರೂ ವಿಕ್ರಿ ವ್ಯವಹಾರದಿಂದ 34.12 ಲಕ್ಷ ರೂ. ಲಾಭ ಗಳಿಸಲಾಗಿದೆ. ಹೊಸದಾಗಿ ದಾಸನಕೊಪ್ಪ ಶಾಖೆ ಆರಂಭಿಸಿದ್ದು ಇಲ್ಲಿ 1.54 ಲಕ್ಷ ರೂ.ಲಾಭ ಗಳಿಸಲಾಗಿದೆ. ಸಂಘದಲ್ಲಿ 20 ಅ ವರ್ಗದ ಸದಸ್ಯರು, 1660 ಬ ವರ್ಗದ ಸದಸ್ಯರು ಹಾಗೂ 11,897 ಕ ವರ್ಗದ ಸದಸ್ಯರು ವ್ಯವಹರಿಸುತ್ತಿದ್ದಾರೆ. ಸದಸ್ಯರ ಷೇರು ಬಂಡವಾಳ 39,47,300 ರೂ.ಇದೆ. ಸದಸ್ಯರ ಠೇವು 39,87,32,723 ರೂ. ಹೊಂದಿದೆ ಎಂದು ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ತಿಳಿಸಿದ್ದಾರೆ.
ವಾರ್ಷಿಕ ಸರ್ವಸಾಧಾರಣ ಸಭೆ ನಾಳೆ
2017-18 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಸೆ.15 ರಂದು ಮಧ್ಯಾಹ್ನ 3.30 ಕ್ಕೆ ನಡೆಯಲಿದೆ. ಸಭೆಯ ಬಳಿಕ ಶ್ರೀಲತಾ ಭಟ್ ಹೆಗ್ಗರ್ಸಿಮನೆ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.