ಕುಮಟಾ: “ಇಂದು ಇಡಿಯ ವಿಶ್ವ, ಪರಿಸರದ ರಕ್ಷಣೆಯ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸಲೇ ಬೇಕಾಗಿದೆ. ಇಲ್ಲವಾದಲ್ಲಿ ನಮ್ಮ ದುರ್ವತನೆಯಿಂದ ನಾವೇ ನಮ್ಮ ಅಂತ್ಯವನ್ನು ತಂದುಕೊಂಡಂತೆ. ಈ ಭೂಗೋಳವನ್ನು ಕಾಪಾಡಿಕೊಳ್ಳಲು ನಾವು ತಡಮಾಡದೇ ಮುಂದಾಗಬೇಕಾಗಿದೆ” ಎಂದು ಇಲ್ಲಿಯ ರಾಜೇಂದ್ರಪ್ರಸಾದ ಸಭಾಭವನದಲ್ಲಿ ಏರ್ಪಟ್ಟಾದ ರೋಟರಿ ಕ್ಲಬ್ ಪದಗ್ರಹಣ ಸಮಾರಂಭದ ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ರೋಟರಿ ಜಿಲ್ಲೆ 3170 ರ ನಿಯೋಜಿತ ಅಧ್ಯಕ್ಷ ಡಾ.ಗಿರೀಶ್ ಮಾಸೂಕರ ಅಭಿಪಾಯಪಟ್ಟರು. ರೋಟಿಯ ನೂತನ ಪದಾಧಿಕಾರಿಗಳಿಗೆ ಅಧಿಕೃತವಾಗಿ ರೋಟರಿ ಪಿನ್ ತೊಡಿಸಿ ಬರಮಾಡಿಕೊಂಡರು. ಅಧ್ಯಕ್ಷರಾಗಿ ಉದ್ಯಮಿ ವಸಂತ ರಾವ್, ಕಾರ್ಯದರ್ಶಿಯಾಗಿ ಮಹಾಲಸಾ ಹ್ಯಾಂಡಿಕ್ರಾಫ್ಟ್‍ನ ಚೇತನ್ ಶೇಟ್ ಹಾಗೂ ಖಜಾಂಚಿಯಾಗಿ ಉದ್ಯಮಿ, ಸಿನೇಮಾ ನಿರ್ಮಾತೃ ಸುಬ್ರಾಯ ವಾಳ್ಕೆ ಅಧಿಕಾರ ಸ್ವೀಕರಿಸಿದರು. ಅಂತೆಯೇ, ರೋಟರ್ಯಾಕ್ಟ್‍ನ ಅಧ್ಯಕ್ಷರಾದ ದತ್ತಾತ್ರಯ ನಾಯ್ಕ, ಕಾರ್ಯದರ್ಶಿ ಪವನ ಡಿ.ಶೆಟ್ಟಿ, ಖಜಾಂಚಿ ಪ್ರತೀಶ್ ನಂಬಿಯಾರ್ ಅತಿಥಿಗಳಾಗಿ ಆಗಮಿಸಿದ ರೋಟರಿ ಜಿಲ್ಲಾ ಅಸಿಸ್ಟಂಟ್ ಗವರ್ನರ್ ಅಶೋಕ ಹಬೀಬ್ ಅವರಿಂದ ರೋಟರ್ಯಾಕ್ಟ್ ಪಿನ್ ಧಾರಣೆ ಮಾಡಿದರು. ನೂತನ ಅಧ್ಯಕ್ಷರು ಪ್ರತಿಜ್ಞಾವಿಧಿ ಸ್ವೀಕಾರ ಭಾಷಣ ಮಾಡಿದರು. ಪ್ರಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಜಿ.ಜೆ.ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ಎನ್.ಆರ್.ಗಜು ವಾರ್ಷಿಕ ವರದಿ ವಾಚಿಸಿದರು. ನಿವೃತ್ತ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಎಸ್.ಭಟ್ಟ, ಸಿಂಡಿಕೇಟ್ ಬ್ಯಾಂಕ್‍ನ ಪ್ರಬಂಧಕ ನವೀನ್ ಕುಮಾರ್ ಹಾಗೂ ಕಾಂಟ್ರಾಕ್ಟರ್ ಅಮಿತ್ ಶಾನಭಾಗ ಅವರನ್ನು ಹೊಸದಾಗಿ ರೋಟರಿ ಸಂಸ್ಥೆಗೆ ಸೇರಿಸಿಕೊಳ್ಳಲಾಯಿತು. ಅನೇಕ ಹೊಸಮುಖಗಳು ರೋಟರ್ಯಾಕ್ಟರ್ ಆಗಿ ಪದಗ್ರಹಣಗೈದರು. ಈ ಸಂದರ್ಭದಲ್ಲಿ ಎನ್.ಆರ್.ಗಜು ಸಂಪಾದಕತ್ವದ ರೋಟೋಲೈಟ್ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ವೇದಿಕೆ ಹೊರಗಡೆ ಸ್ಥಾಪಿಸಿದ ಸೆಲ್ಫೀ ಬೂತ್ ವಿಶೇಷವಾಗಿ ಆಕರ್ಷಿಸಿ ಸಮೂಹ ಚಿತ್ರಕ್ಕೆ ಮುನ್ನುಡಿ ಬರೆಯಿತು. ಪ್ರವೀಣ ಶೇಟ್ ತಯಾರಿಸಿದ ರೋಟರ್ಯಾಕ್ಟ್ ಕ್ಲಬ್‍ನ ಲಾಛಂನ ಮೊದಲ ಬಹುಮಾನ ಗಿಟ್ಟಿಸಿತು. ಸುರೇಶ್ ಭಟ್, ಶ್ರೇಯಾ ರಾವ್ ನಿರೂಪಿಸಿದರು. ಶ್ರೀಕಾಂತ ಭಟ್ಟ ಹಾಗೂ ಕಿರಣ ನಾಯಕ ಪರಿಚಯಿಸಿದರು. ನೂತನ ಕಾರ್ಯದರ್ಶಿ ಚೇತನ್ ಶೇಟ್ ವಂದಿಸಿದರು.