ಭಟ್ಕಳ: ಭಟ್ಕಳದ ಜನತೆ ಬೀದಿ ನಾಯಿಗಳ ಹಾವಳಿಯಿಂದ ಅಕ್ಷರಶಃ ಬೇಸತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ನಾಯಿಯನ್ನೇ ಅಟಟಾಡಿಸಿ ಹೊಡೆಯುವಷ್ಟು! ಅರೇ ಇದೇನು ಅಂತೀರಾ? ಇಂದು ನಡೆದ ಘಟನೆ ಅದಕ್ಕೆ ಸಾಕ್ಷಿ.
ಬೀದಿ ನಾಯಿಗಳ ಹಾವಳಿಯಿಂದ ಬೇಸತ್ತಿರುವ ಭಟ್ಕಳದ ಗುಳ್ಮಿ ರಸ್ತೆ/ ತಲಾಂದ್, ಮುಟ್ಟಳ್ಳಿಗೆ ಸಂಪರ್ಕಿಸುವ ರಸ್ತೆಯ ಜನತೆ ಬೀದಿ ನಾಯಿಗಳನ್ನು ಅಟ್ಟಾಡಿಸಿ ಹತ್ಯೆ ಮಾಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮುಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಮಕ್ಕಳು, ಮಹಿಳೆಯರೂ ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಜನ ಹಾಗೂ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದು ಇದಕ್ಕಾಗಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಊರಿನ ಗ್ರಾಮಸ್ತರು.
ಬೀದಿ ನಾಯಿಗಳ ಕಾಟದಿಂದ ಭಯಬೀತರಾಗಿ ಬೇಸತ್ತ ಇಲ್ಲಿನ ಜನರು ಪ್ರತಿ ದಿನ ನಾಯಿಗಳು ಬೀದಿಯಲ್ಲಿ ಓಡಾಡದಂತೆ ದೊಣ್ಣೆ ಗಳನ್ನು ಹಿಡಿದು ಗ್ರಾಮದಲ್ಲಿ ಓಡಾಡುತ್ತಿದ್ದರು ಎನ್ನಲಾಗಿದೆ. ಗ್ರಾಮ ಪಂಚಾಯತಿಗೆ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸುವಂತೆ ಮನವಿ ಮಾಡಿದ್ದರೂ ಸ್ಪಂದಿಸದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಜನರು ಐದಕ್ಕೂ ಹೆಚ್ಚು ನಾಯಿಗಳನ್ನು ದೊಣ್ಣೆಯಿಂದ ಬಡಿದು ಹತ್ಯೆ ಮಾಡಿದ್ದಾರೆ.
ಊರಿನಲ್ಲಿರು ಭಯ ನಿವಾರಿಸಲು ಗ್ರಾಮ ಪಂಚಾಯತಿಯವರು ಪ್ರಯತ್ನಿಸಬೇಕಿತ್ತೆಂಬುದು ಸ್ಥಳೀಯರ ಮಾತಾದರೆ. ಭಯದಲ್ಲಿ ಬದುಕುವುದನ್ನು ತಪ್ಪಿಸಿಕೊಳ್ಳಲು ನಮಗಿರುವುದು ಇದೊಂದೇ ಮಾರ್ಗ ಅಂತಿದ್ದಾರೆ ಜನರು.