ಶಿರಸಿ: ಸಲಿಂಗಿಗಳು ಕೂಡ ನಮ್ಮ, ನಿಮ್ಮಂತೆ ಮನುಷ್ಯರು. ಸಲಿಂಗಕಾಮವನ್ನು ಜಗತ್ತಿನಿಂದ ಅಳಿಸಿಹಾಕಲು ಸಾಧ್ಯವಿಲ್ಲ. ಎಲ್ಲರಂತೆ ಅವರಿಗೂ ಬದುಕಲು ಅವಕಾಶ ನೀಡಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು.
ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ, ಬದಲಾಗಿ ಬದುಕಿನ ವ್ಯವಸ್ಥೆಯಾಗಿದೆ. ಐಪಿಸಿ ಸೆಕ್ಷನ್ 377ರ ಅಡಿ ಸಮ್ಮತಿಯ ಸಲಿಂಗಕಾಮದ ಬಗ್ಗೆ ಸುಪ್ರಿಂಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ. ಮಾನವೀಯ ನೆಲೆಗಟ್ಟಿನಡಿ ತೀರ್ಪನ್ನು ಪರಾಮರ್ಶಿಸಬೇಕು. ಸಮುದಾಯದ ಮಧ್ಯೆ ಬದುಕುತ್ತಿರುವ ಸಲಿಂಗಿಗಳೆಡೆ ಪ್ರೀತಿ, ಮಮಕಾರ ಇರಬೇಕು. ಅವರ ಬದುಕಿಗೂ ಸ್ವಾತಂತ್ರ್ಯ ಇದೆ, ಅದನ್ನ ಗೌರವಿಸುವ ಕೆಲಸ ಆಗಬೇಕು ಅಂತಾ ಅವರು ಹೇಳಿದರು.
ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛತೆಯೇ ಸೇವೆ ಎನ್ನುವ ಹೆಸರಿನಡಿಯಲ್ಲಿ ತಾಲೂಕಿನ ಸೋಂದಾ ಬಳಿಯ ಹುಣಸೆಹೊಂಡ ಕೆರೆಯ ಸ್ವಚ್ಛತೆಗೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಶನಿವಾರ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಷ್ಟ್ರವ್ಯಾಪಿ ನಡೆಯುತ್ತಿರುವ ಸ್ವಚ್ಛತೆಯೇ ಸೇವೆ ಆಂದೋಲನದ ಅಂಗವಾಗಿ ಸೋಂದಾ ಗ್ರಾಮ ಪಂಚಾಯತದ ಹುಣಸೆಹೊಂಡದ ವೆಂಕಟ್ರಮಣ ದೇವಸ್ಥಾನದ ಆವಾರವನ್ನು ಶುದ್ಧಗೊಳಿಸುವ ಹಾಗೂ ದೇವಸ್ಥಾನದ ಕೆರೆಯನ್ನು ಸಂಪೂರ್ಣ ಸ್ವಚ್ಛಮಾಡುವ ಕಾರ್ಯಕ್ಕೆ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಹಾಗೂ ಸಂಸದ ಹೆಗಡೆ ಮುನ್ನುಡಿ ಬರೆದರು. ಪೂರ್ತಿಯಾಗಿ ಹಸಿರು ಪಾಚಿ, ಜಲ ಗಿಡಗಳಿಂದ ತುಂಬಿಕೊಂಡಿದ್ದ ಕೆರೆಗೆ ಸ್ವತಃ ತಾವೇ ಇಳಿದು ಅದನ್ನು ಸ್ವಚ್ಛಗೊಳಿಸಿದರು. ದೇವಸ್ಥಾನದ ಆವಾರದಲ್ಲಿ ಬಿದ್ದುಕೊಂಡಿದ್ದ ಪ್ಲಾಸ್ಟಿಕ್, ಕೋಲು ಇತ್ಯಾದಿ ಕಸಗಳನ್ನು ತೆಗೆದು ಸ್ವಚ್ಛತೆಗೊಳಿಸಿದ ಹೆಗಡೆ, ಮೊದಲು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಸಾಮಾಜಿಕ ಕಾರ್ಯಕ್ಕೆ ಇವರು ಚಾಲನೆ ನೀಡಿ ಮಾತನಾಡಿದರು.