ಹೊನ್ನಾವರ: ಕಳೆದ 31 ವರ್ಷಗಳಿಂದ ಮೂಡ್ಕಣಿಯ ಯುವಕರು ಗಣೇಶೋತ್ಸವ ನಡೆಸುತ್ತಾ ಬಂದಿದ್ದು ಬೇರೆ ಊರಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.
ಮೂಡ್ಕಣಿಯ ಶಂಭುಲಿಂಗೇಶ್ವರ ಸಭಾಭವನದಲ್ಲಿ ನಡೆದ 31 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಪ್ರತಿಭಾ-ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ವಹಿಸಿ ಮಾತನಾಡಿದರು.
ಮೂಡ್ಕಣಿಯಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಿಗೂ ಅಗತ್ಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪಿ.ಟಿ.ನಾಯ್ಕ ಮಾತನಾಡಿ, ಕಳೆದ ಮೂವತ್ತೊಂದು ವರ್ಷಗಳಿಂದ ಸತತವಾಗಿ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು ಯುವಕರ ಪರಿಶ್ರಮದಿಂದ ಈ ಕಾರ್ಯ ಯಶಸ್ವಿಯಾಗಿದೆ ಎಂದು ಹೇಳಿದರು.
ಶಂಭು ಹೆಗಡೆ, ಟಿ.ಟಿ.ನಾಯ್ಕ, ಪಿ.ಎಂ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಾವ್ಯಾ ನಾಯ್ಕ ಮತ್ತು ಪ್ರಮೋದ ನಾಯ್ಕ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಗಂಗಾಧರ ನಾಯ್ಕ ಮತ್ತು ಲಕ್ಷ್ಮೀ ಹಳ್ಳೇರ್ ಇವರನ್ನು ಸನ್ಮಾನಿಸಲಾಯಿತು. ಸಮಿತಿಯ ಪರವಾಗಿ ಶಾಸಕರನ್ನು ಸನ್ಮಾನಿಸಲಾಯಿತು. ಸಮಿತಿ ಅಧ್ಯಕ್ಷ ಉದಯ್ ನಾಯ್ಕ ಸ್ವಾಗತಿಸಿದರು. ಭವ್ಯಾ ನಾಯ್ಕ ನಿರೂಪಿಸಿದರು. ದಿಲೀಪ್ ನಾಯ್ಕ ವಂದಿಸಿದರು. ವಿನಾಯಕ ನಾಯ್ಕ, ಎಂ.ಎಸ್.ಶೋಭಿತ್ ಇತರರು ಉಪಸ್ಥಿತರಿದ್ದರು.