ಬೆಂಗಳೂರು: ಅಸೋಸಿಯೇಟ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಸಂಸ್ಥೆ ಪ್ರಕಾರ ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶಾಸಕರೇ ಅತ್ಯಂತ ಶ್ರೀಮಂತರಾಗಿರುವುದು ತಿಳಿದುಬಂದಿದೆ. ರಾಜ್ಯದ 224 ಶಾಸಕರ ಪೈಕಿ ಈ ಸಂಸ್ಥೆ ಅಧ್ಯಯನ ನಡೆಸಿದ 203 ಶಾಸಕರ ಸರಾಸರಿ ವಾರ್ಷಿಕ ಆದಾಯವು 1.114 ಕೋಟಿಯಂತೆ. ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರದ ಶಾಸಕರ ಸರಾಸರಿ ಆದಾಯವು ಕರ್ನಾಟಕದವರ ಅರ್ಧಕ್ಕಿಂತ ಕಡಿಮೆಯಾಗಿದೆ. ಮಹಾರಾಷ್ಟ್ರದಲ್ಲಿನ 256 ಶಾಸಕರ ಸರಾಸರಿ ವಾರ್ಷಿಕ ಆದಾಯ 43.4 ಲಕ್ಷ ರೂ. ಆಗಿದೆ.
ದೇಶದ ಚುನಾವಣೆ ವ್ಯವಸ್ಥೆ ಮತ್ತು ರಾಜಕೀಯ ವ್ಯವಸ್ಥೆಯ ಸುಧಾರಣೆಗೆ ಹೋರಾಡುತ್ತಿರುವ ಎಡಿಆರ್ ಸಂಸ್ಥೆ ನಿನ್ನೆ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ. ಈ ಸಂಸ್ಥೆಯು ದೇಶದ 3,145 ಶಾಸಕರ ಘೋಷಿತ ಆದಾಯವನ್ನು ಅಧ್ಯಯನ ಮಾಡಿ ಈ ವರದಿ ಪ್ರಕಟ ಮಾಡಿದೆ. ಈ 3,145 ಶಾಸಕರ ಸರಾಸರಿ ವಾರ್ಷಿಕ ಆದಾಯವು 24.59 ಲಕ್ಷ ರೂಪಾಯಿ ಆಗಿದೆ. ರಾಜ್ಯವಾರು ಪಟ್ಟಿ ತೆಗೆದುಕೊಂಡರೆ ಕರ್ನಾಟಕದ ಶಾಸಕರೇ ಅತೀ ಶ್ರೀಮಂತರೆನಿಸಿದ್ದಾರೆ. ಇನ್ನು, ವಲಯವಾರು ಪಟ್ಟಿ ತೆಗೆದುಕೊಂಡರೆ ದಕ್ಷಿಣ ಭಾರತೀಯರೇ ಹೆಚ್ಚು ಶ್ರೀಮಂತರು. ದಕ್ಷಿಣ ಭಾರತೀಯ ಶಾಸಕರ ಸರಾಸರಿ ವಾರ್ಷಿಕ ಆದಾಯ 51.99 ಲಕ್ಷ ರೂ. ಆಗಿದೆ. ಪೂರ್ವ ವಲಯದ ಶಾಸಕರದ್ದು ಕೇವಲ 8.53 ಲಕ್ಷ ರೂ ವಾರ್ಷಿಕ ಆದಾಯವಾಗಿದೆ.