ಹೊನ್ನಾವರ: ಹೊನ್ನಾವರದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಅದ್ದೂರಿಯಾಗಿ ವಿಶ್ವ ಹಿಂದು ಪರಿಷತ್ ನ ಗಣೇಶ ವಿಸರ್ಜನಾ ಕಾರ್ಯಕ್ರಮ ಪ್ರಾರಂಭಗೊಂಡಿದ್ದು ಸುಮಾರು ಹತ್ತು ಸಾವಿರಕ್ಕೂ ಅಧಿಕ ಸಾರ್ವಜನಿಕರು ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಎಲ್ಲಿ ನೋಡಿದರೂ ರಾರಾಜಿಸುವ ಕೇಸರಿ ಪತಾಕೆಗಳು ಹಾಗೂ ಕೇಸರಿ ಬಣ್ಣದ ಅಂಗಿ ತೊಟ್ಟ ಯುವಕರೇ ಕಾಣುತ್ತಿದ್ದುದು ವಿಶೇಷವಾಗಿತ್ತು.
ಮಧ್ಯಾಹ್ನ ಐದು ಗಂಟೆ ಸುಮಾರಿಗೆ ಪ್ರಾರಂಭವಾದ ಬೃಹತ್ ಶೋಭಾಯಾತ್ರೆಯೊಂದಿಗೆ ತಾಲ್ಲೂಕಿನ ಎಲ್ಲ ಸಮಸ್ತ ಸಾರ್ವಜನಿಕ ಗಣೇಶ ಸಮಿತಿಗಳನ್ನು ಹಾಗೂ ಸಮಸ್ತ ಸಮಾಜ ಬಾಂಧವರನ್ನು ಒಳಗೊಂಡು , ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆ ಸಾರುವ ವಿವಿಧ ಸ್ತಬ್ದ ಚಿತ್ರಗಳು ಪಾರಂಪರಿಕ ವಾದ್ಯಗಳು ಸಾಂಸ್ಕೃತಿಕ ಕಲಾ ತಂಡಗಳು ಆಕರ್ಷಕ ವೇಷ ಭೂಷಣಗಳು ಡೋಲು ಕುಣಿತ Dj ಗಳೊಂದಿಗೆ ಸಾಗುತ್ತಿರುವುದು ವಿಶೇಷವಾಗಿತ್ತು.
ಗಣೇಶ ಚತುರ್ಥಿಯಿಂದ ಇಲ್ಲಿಯ ತನಕ ಪಟ್ಟಣ ಪಂಚಾಯತ್ ಆವಾರದಲ್ಲಿ ವಿರಾಜಮಾನನಾದ ಗಣಪ ಇಂದು ಶರಾವತಿಯಲ್ಲಿ ವಿಸರ್ಜನೆಗೊಳ್ಳುವ ದೃಷ್ಯ ಕಣ್ತುಂಬಿಕೊಳ್ಳಲು ಸಹಸ್ರಾಧಿಕ ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಇದ್ದದ್ದು ಕಂಡು ಬಂತು.
ವಿಶೇಷವಾದ ಅಲಂಕಾರದೊಂದಿಗೆ ಕಂಗೊಳಿಸಿದ ಗಣಪನ ಮೆರವಣಿಗೆಗೆ ಅಶ್ವರಥ ಮಾದರಿಯನ್ನು ಬಳಸಿದ್ದು ಗಮನ ಸೆಳೆಯಿತು.