ಸಿದ್ದಾಪುರ:ತಾಲೂಕಿನಲ್ಲಿ 16732 ಕಿ.ಮೀ ಗ್ರಾಮೀಣ ರಸ್ತೆಗಳಿದ್ದು, 23 ಗ್ರಾಮ ಪಂಚಾಯಿತಿಗಳಿವೆ. ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗಳು ಕೆಟ್ಟು ಹೋಗಿದ್ದು, ಈ 48 ಲಕ್ಷ ಹಣದಲ್ಲಿ 23 ಗ್ರಾಮ ಪಂಚಾಯತ್ಗಳಿಗೆ ಅನುದಾನ ಹಂಚಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದರು.
ಸಾರ್ವಜನಿಕರು ಅವರ ಪರಿಸ್ಥಿತಿ ಹೇಳುತ್ತಿದ್ದಾರೆ. ಇದು ತಪ್ಪಲ್ಲ. ನಾವು ಅವರಿಂದ ಆರಿಸಿ ಬಂದಿರುವುದರಿಂದ ಅವರ ಕಷ್ಟಗಳನ್ನ ಹೇಳ್ತಾರೆ. ಆದ್ರೆ ಸರ್ಕಾರ ಹಣ ನೀಡದಿರುವುದನ್ನು ಸಾರ್ವಜನಿಕರ ಮುಂದೆ ಹೇಳಲೇಬೇಕಾಗಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
2018-19 ನೇ ಸಾಲಿನ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಲುವಾಗಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಸಿದ್ದಾಪುರದ ತಾಲೂಕು ಪಂಚಾಯತನ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯನಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ತಾಲೂಕಿನಲ್ಲಿ ಅತಿವೃಷ್ಟಿಯಿಂದಾದ ರಸ್ತೆಗಳ ಹಾನಿ ಹಾಗೂ ಅವುಗಳ ಪುನರ್ ನಿರ್ಮಾಣ ಕುರಿತಂತೆ ಅಧಿಕಾರಿಗಳು ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದರು. ತಾಲೂಕಿಗೆ 2017-18 ನೇ ಸಾಲಿನಲ್ಲಿ 53 ರಸ್ತೆ ಕೆಲಸಗಳಿಗಾಗಿ ₹ 1 ಕೋಟಿ 20 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ₹ 57 ಲಕ್ಷ ರೂಪಾಯಿ ಬಂದಿದೆ. ಇನ್ನೂ ₹ 65 ಲಕ್ಷ 31ಸಾವಿರ ರೂಪಾಯಿ ಸರ್ಕಾರದಿಂದ ಬರಬೇಕಿದೆ. 2018-19 ನೇ ಸಾಲಿನಲ್ಲಿ ₹ 1,13,78,000 ಮಂಜೂರಾಗಿದ್ದು, ₹ 48,47,000 ರೂಪಾಯಿಯನ್ನು ರಸ್ತೆ ಕ್ರಿಯಾಯೋಜನೆಗಾಗಿ ಬಳಸಬೇಕಿದೆ ಎಂದರು.
ನಂತರ ಮಾತನಾಡಿದ ಕಾಗೇರಿ, ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಭಾಗ್ಯ ಕೊಡಿ. ಹಳೆ ರಸ್ತೆಗಳ ಹೊಂಡ ತುಂಬಲು 1 ಕಿಮೀ ಗೆ ₹ 11200 ರೂಪಾಯಿ ಅನುದಾನ ಬರುತ್ತಿದೆ. ಕಾಟಾಚಾರಕ್ಕೆ ಹಣ ನೀಡಿದಂತಿದೆ. ಸರ್ಕಾರ ಗ್ರಾಮೀಣ ರಸ್ತೆಗಳಿಗೆ ಹೆಚ್ಚು ಅನುದಾನ ನೀಡುವಂತೆ ಅಗ್ರಹಿಸುತ್ತೇನೆ ಎಂದರು.